
ಎ.28-ಮೇ 1 ಅದಿತಿ ಆರ್ಟ್ ಗ್ಯಾಲರಿಯಲ್ಲಿ ಮೈ ಮಣಿಪಾಲ್ ಚಿತ್ರ ಕಲಾ ಪ್ರದರ್ಶನ
ಉಡುಪಿ: ಮಣಿಪಾಲ ಕೆ ಎಂ ಸಿ ಯ ಎಮ್ ಡಿ ವೈದ್ಯಕೀಯ ವಿದ್ಯಾರ್ಥಿ ಡಾ. ಸಾಲ್ವ್ಯ ಎಸ್. ರಾಜ್ ಅವರು ಮಣಿಪಾಲ ಕುರಿತಾಗಿ ರಚಿಸಿದ ಜಲವರ್ಣ ಕಲಾಕೃತಿಗಳ ಪ್ರದರ್ಶನ “ಮೈ ಮಣಿಪಾಲ್ ” ಶೀರ್ಷಿಕೆಯಲ್ಲಿ ಎ.28-ಮೇ 1 ರವರೆಗೆ ಕುಂಜಿಬೆಟ್ಟಿನ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜರಗಲಿದೆ.
ಈ ಬಗ್ಗೆ ಅದಿತಿ ಗ್ಯಾಲರಿಯಲ್ಲಿ ಜರಗಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ . ಕಿರಣ್ ಆಚಾರ್ಯ ಅವರು, ಗ್ಯಾಲರಿಯಲ್ಲಿ ಸುಮಾರು 30ಕ್ಕೂ ಅಧಿಕ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಶಿಕ್ಷಣ , ಬ್ಯಾಂಕಿಂಗ್ ಹಾಗೂ ಮುದ್ರಣದಲ್ಲಿ ಅಂತಾರಾಷ್ಟೀಯ ಗಮನ ಸೆಳೆದಿರುವ ಮಣಿಪಾಲದ ಕುರಿತು ವೈವಿಧ್ಯಮಯವಾಗಿ ಈ ರೀತಿಯ ಚಿತ್ರ ಪ್ರದರ್ಶನವಾಗುತ್ತಿರುವುದು ಇದೇ ಪ್ರಥಮಬಾರಿಗೆ ಎಂದೂ ಅವರು ತಿಳಿಸಿದರು.
ಎ. 28 ರಂದು ಸಂಜೆ 5 ಕ್ಕೆ ಮಾಹೆಯ ಸಹ ಕುಲಾಧಿಪತಿ ಡಾ. ಕಾರ್ಕಳ ಶರತ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ.ಕೆ ಎಂ ಸಿ ಯ ಡೀನ್ ಡಾ. ಪದ್ಮರಾಜ್ ಹೆಗ್ಡೆ , ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ . ರವಿರಾಜ್ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಲಾವಿದೆ ಡಾ. ಸಾಲ್ವ್ಯ ಎಸ್. ರಾಜ್ ಉಪಸ್ಥಿತರಿದ್ದರು.
ಪ್ರದರ್ಶನವು ಎ. 29 ರಿಂದ ಮೇ 1 ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆ ಗೊಳಿಸಲಾಗಿದೆ.
ಕಲಾವಿದರ ಕುರಿತು
ವೃತ್ತಿಯಲ್ಲಿ ವೈದ್ಯೆ. ಪ್ರವೃತ್ತಿಯಲ್ಲಿ ಜಲವರ್ಣ ಚಿತ್ರ ಕಲಾವಿದೆ.8 ಅಂತಾರಾಷ್ಟ್ರೀಯ ಹಾಗೂ 6 ರಾಷ್ಟ್ರ , ಪ್ರಶಸ್ತಿಗಳು ಹಾಗೂ 65 ಕ್ಕೂ ಅಧಿಕ ಸ್ವರ್ಣ ಪದಕಗಳು ಇವರನ್ನ ಅರಸಿಕೊಂಡು ಬಂದಿವೆ . ಕಲಾವಿದರ ಕಲಾಕೃತಿಗಳು ರಾಷ್ಟ್ರಪತಿ ದಿ . ಎ .ಪಿ. ಜೆ . ಅಬ್ದುಲ್ ಕಲಾಂ ಸೇರಿದಂದೆ ಅನೇಕ ಪತಿಷ್ಠಿತರ ಸಂಗ್ರಹದಲ್ಲಿವೆ. 7 ಕ್ಕೂ ಅಧಿಕ ಏಕವ್ಯಕ್ತಿ ಕಲಾಪ್ರದರ್ಶನಗಳನ್ನು ಈಗಾಗಲೇ ಆಯೋಜಿಸಲಾಗಿದೆ .