ಏಳು ತಿಂಗಳಿನಿಂದ ನಾಪತ್ತೆಯಾಗಿರುವ ಪೆರಂಪಳ್ಳಿ ಯುವತಿ – ಶೀಘ್ರ ಪತ್ತೆಗೆ ಆಗ್ರಹಿಸಿ ಕೆಥೊಲಿಕ್‌ ಸಭಾದಿಂದ ಎಸ್ಪಿಗೆ ಮನವಿ

Spread the love

ಏಳು ತಿಂಗಳಿನಿಂದ ನಾಪತ್ತೆಯಾಗಿರುವ ಪೆರಂಪಳ್ಳಿ ಯುವತಿ – ಶೀಘ್ರ ಪತ್ತೆಗೆ ಆಗ್ರಹಿಸಿ ಕೆಥೊಲಿಕ್‌ ಸಭಾದಿಂದ ಎಸ್ಪಿಗೆ ಮನವಿ

ಉಡುಪಿ: ಏಳು ತಿಂಗಳಿನಿಂದ ನಾಪತ್ತೆಯಾದ ಪೆರಂಪಳ್ಳಿಯ ಯುವತಿಯೋರ್ವಳನ್ನು ಕೂಡಲೇ ಪತ್ತೆ ಹಚ್ಚುವಂತೆ ಆಗ್ರಹಿಸಿ ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ವತಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಅನುಪಸ್ಥೀತಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಅವರಿಗೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಮೇರಿ ಡಿʼಸೋಜಾ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ನಿವಾಸಿಯಾಗಿರುವ ಅವಿನಾ (16) ಎಂಬ ಯುವತಿ 2021 ಏಪ್ರಿಲ್‌ 13 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಈಗಾಗಲೇ ಆಕೆಯ ಪೋಷಕರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಈ ವರೆಗೆ ಆಕೆಯ ಇರುವಿಕೆ ಅಥವಾ ಪತ್ತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಆಕೆಯ ಪೋಷಕರು ಆತಂಕಿತರಾಗಿದ್ದಾರೆ. ಆಕೆಯ ಪತ್ತೆಗಾಗಿ ಪೊಲೀಸ್‌ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಸಂಸ್ಥೆಯ ಗಮನದಲ್ಲಿದ್ದು ಆದಷ್ಟು ಬೇಗ ಆಕೆಯನ್ನು ಪತ್ತೆ ಮಾಡುವ ಮೂಲಕ ನೊಂದ ಕುಟಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಈ ವೇಳೆ ಮೇರಿ ಡಿಸೋಜಾ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ಪೊಲೀಸ್‌ ಇಲಾಖೆ ಯುವತಿಯ ಪತ್ತೆಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ನಿಯೋಜಿತ ಅಧ್ಯಕ್ಷರಾದ ಸಂತೋಷ್‌ ಕರ್ನೆಲಿಯೋ, ಉಡುಪಿ ವಲಯ ಅಧ್ಯಕ್ಷರಾದ ಲವೀನಾ ಪಿರೇರಾ, ಉಡುಪಿ ಘಟಕದ ಅಧ್ಯಕ್ಷರಾದ ಲೆಸ್ಲಿ ಕರ್ನೇಲಿಯೋ, ಪೆರಂಪಳ್ಳಿ ಘಟಕದ ಅಧ್ಯಕ್ಷರಾದ ಒಲಿವರ್‌ ಡಿʼಸೋಜಾ ಉಪಸ್ಥಿತರಿದ್ದರು.


Spread the love