
ಏ ಮೋದಿ, ಏನಪ್ಪ ನಿಂದು ಅಂದಾ ದರ್ಬಾರ್: ವಿಶ್ವನಾಥ್ ಆಕ್ರೋಶ
ಮೈಸೂರು: ಏ ಮೋದಿ, ಏನಪ್ಪ ನಿಂದು ಅಂದಾ ದರ್ಬಾರ್. ಚರ್ಚೆಯಿಲ್ಲದೆ ಕಾಯ್ದೆಗಳು ಪಾಸ್ ಆಗುತ್ತವೆ. ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ. ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚು ಟೋಲ್ ಸಂಗ್ರಹಿಸುತ್ತಿರುವುದನ್ನು ಖಂಡಿಸಿ ಮೈಸೂರಿನ ಮಣಿಪಾಲ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಅವರು ಈ ಹೆದ್ದಾರಿಗಾಗಿ 2,600 ಎಕರೆ ರೈತರ ಜಮೀನು ಹೋಗಿದೆ. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದೀರಿ. ರಸ್ತೆ ಬೇಕು ಎಂದು ಯಾರು ಕೇಳಿದ್ದರು. 4 ಪಥ ರಸ್ತೆಯೇ ಸಾಕಾಗಿತ್ತು. 10 ಪಥದ ರಸ್ತೆ ಮಾಡಿದ್ದೀರಾ. ಆದರೆ, ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ. ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಆಸ್ಪತ್ರೆ ಎಲ್ಲಿದೆ ಎಂದು ಪ್ರಶ್ನಿಸಿದರು. ಎಲ್ಲವೂ ಸರಿಯಾಗಿದೆ. ಸುಮ್ಮನೆ ಜನ ಗಲಾಟೆ ಮಾಡ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಜತೆಗೆ ಪಂಥಾಹ್ವಾನ ಸಹ ಕೊಟ್ಟಿದ್ದಾರೆ. ಬರಲಿ ಬೇಕಾದರೆ ಯಾವಾಗ ಎಂದು ಒಂದು ದಿನಾಂಕ ನಿಗದಿ ಮಾಡಿ ನಾವು ಬರಲು ಸಿದ್ಧ ಎಂದು ಸವಾಲು ಹಾಕಿದರು.
ಈ ಹೆದ್ದಾರಿಯಲ್ಲಿ ಸಾಗುವ ಕೆಎಸ್‌ಆರ್‌ಟಿಸಿ ಬಸ್ ದರ ಕೂಡ ಈಗಾಗಲೇ ಹೆಚ್ಚಾಗಿದೆ. ನಮಗೆ ಗೊತ್ತಿಲ್ಲದೆ ನಮ್ಮ ಜೇಬು ಪಿಕ್ ಪ್ಯಾಕೇಟ್ ಆಗ್ತಾ ಇದೆ. 118 ಕಿ.ಮೀ. ಹೆದ್ದಾರಿ ಕೆಲಸ ಸಂಪೂರ್ಣ ಮುಗಿದು, ಸರ್ವಿಸ್ ರಸ್ತೆ ಕಾಮಗಾರಿ ಮುಗಿದ ಮೇಲೆ ಎಲ್ಲ ಸೇರಿ ಒಂದು ದರ ನಿಗದಿ ಮಾಡಿ. ಅದನ್ನು ಬಿಟ್ಟು ಜನ ಸಾಮಾನ್ಯರ ಮೇಲೆ ಬರೆ ಎಳೆಯುವ ಕೆಲಸ ಮಾಡಬೇಡಿ ಎಂದು ಗುಡುಗಿದರು.
ಎಲ್ಲರೂ ಸರ್ವಿಸ್ ರಸ್ತೆಯಲ್ಲೇ ಹೋದರೆ ಟೋಲ್ ಕಟ್ಟುವವರು ಯಾರು? ಹೀಗಾಗಿಯೇ ನಾವು ಸರ್ವೀಸ್ ರಸ್ತೆ ಪೂರ್ಣ ಮಾಡಿಲ್ಲ ಎಂದಿರುವ ರಾಷ್ಟ್ರೀಯ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ವಿರುದ್ಧ ಹರಿಹಾಯ್ದ ವಿಶ್ವನಾಥ್ ಅವರು, ಅವನು ಯಾರೋ ಶ್ರೀಧರ್ ಅನ್ನೊ ಅಧಿಕಾರಿ. ಸರ್ವೀಸ್ ರಸ್ತೆ ಮಾಡುವ ಕಾನೂನು ಎಲ್ಲಿದೆ ಎನ್ನುತ್ತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿಶಾಹಿ ಆಡಳಿತ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಇತಿಹಾಸತಜ್ಞ ಪ್ರೊ.ನಂಜರಾಜ ಅರಸ್, ಕನ್ನಡ ಪರ ಹೋರಾಟಗಾರ ಶಿವಶಂಕರ್, ಅರವಿಂದ ಶರ್ಮ, ಬೋಗಾದಿ ಸಿದ್ದೇಗೌಡ, ಎಎಪಿಯ ಮಾಳವಿಕಾ ಗುಬ್ನಿವಾಣಿ, ಎಂ.ಎಫ್.ಕಲೀಂ ಸೇರಿದಂತೆ ಹಲವರು ಭಾಗವಹಿಸಿದ್ದರು.