ಏ. 20 ಯಶ್ ಪಾಲ್ ಸುವರ್ಣ ನಾಮಪತ್ರ, ಬೃಹತ್ ಪಾದಯಾತ್ರೆ

Spread the love

ಏ. 20 ಯಶ್ ಪಾಲ್ ಸುವರ್ಣ ನಾಮಪತ್ರ, ಬೃಹತ್ ಪಾದಯಾತ್ರೆ
 

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಷ್ಟ್ರೀಯ ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು  ಏ.20 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು.

ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ, ನಂತರ ಕಲ್ಸಂಕ, ಬ್ರಹ್ಮಗಿರಿ ಮೂಲಕ ತಾಲೂಕು ಕಚೇರಿಗೆ ತೆರಳಿ 12 ಗಂಟೆಗೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ಪಾದಯಾತ್ರೆಯಲ್ಲಿ ಸುಮಾರು 10 – 15 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ನಾಯಕರ ಜೊತೆ ರಾಜ್ಯ ನಾಯಕರೂ ಉಪಸ್ಥಿತರಿರುತ್ತಾರೆ ಎಂದರು.

ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಚುನಾವಣೆ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ, ಆದರೇ ಬಿಜೆಪಿಗೆ ಹೆಚ್ಚು ಮತದಾರರ ಬೆಂಬಲ ಇದೆ ಎನ್ನುವುದಷ್ಟೇ ನನಗೆ ಮುಖ್ಯ ಎಂದರು.

ಉಡುಪಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಪರ್ಧಿಸುವ ಬಗ್ಗೆ, ಎಸ್ ಡಿಪಿಐ ಮತ್ತು ಕಾಂಗ್ರೆಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳು, ಜನರಿಗೆ ಯಾರು ಸರಿ, ಯಾರಿಗೆ ಮತ ಹಾಕಬೇಕು ಎನ್ನುವುದು ಗೊತ್ತಿದೆ ಎಂದು ಯಶಪಾಲ್ ಉತ್ತರಿಸಿದರು.

ತಾವು ಕಾಪು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಚ್ಛೆ ವ್ಯಕ್ತಪಡಿಸಿದ್ದು ನಿಜ, ಆದರೇ ತಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ, ಬಾಲ್ಯದಿಂದಲೂ ಆರ್ ಎಸ್ಎಸ್ ನಲ್ಲಿ ಬೆಳೆದವ, ಪಕ್ಷ ಮತ್ತು ಸಂಘ ತನ್ನ ಮೇಲೆ ವಿಶ್ವಾಸ ಇಟ್ಟು ಉಡುಪಿಯಲ್ಲಿ ಸ್ಪರ್ಧಿಸುವಂತೆ ತಿಳಿಸಿದೆ ಎಂದರು.

ತಾನು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದು, 3 ಅಂಶಗಳನ್ನು ಜನರ ಮುಂದಿಟ್ಟು ಮತಯಾಚಿಸುತಿದ್ದೇನೆ. ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು, ಬಿಎಸ್ ವೈ – ಬೊಮ್ಮಾಯಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರವು ಜಾರಿಗೊಳಿಸಿದ ಯೋಜನೆಗಳು ಮತ್ತು ಉಡುಪಿ ಶಾಸಕ ರಘುಪತಿ ಭಟ್ ಅವರ ಜನರ ಮನೆಬಾಗಿಲಿಗೆ ಕೊಂಡೊಯ್ದ ಅಭಿವೃದ್ಧಿ ಕಾರ್ಯಗಳು ತಮ್ಮ ಚುನಾವಣಾ ಪ್ರಚಾರದ ಮುಖ್ಯ ವಿಷಯಗಳು ಎಂದು ಯಶಪಾಲ್ ಹೇಳಿದರು


Spread the love