
ಏ,9ಕ್ಕೆ ಬಂಡೀಪುರಕ್ಕೆ ಭೇಟಿ ನೀಡಲಿರುವ ಮೋದಿ
ಚಾಮರಾಜನಗರ: ದೇಶದಲ್ಲಿ ಹುಲಿಗಳ ಸಂರಕ್ಷಣೆಗಾಗಿ ಜಾರಿಗೊಳಿಸಲಾಗಿರುವ ಹುಲಿ ಯೋಜನೆಗೆ 50 ವರ್ಷಗಳಾಗಿರುವ ಸಂದರ್ಭದಲ್ಲಿ ಏ.9ರಂದು ಮೈಸೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಬಂಡೀಪುರದಿಂದ ನೆರೆಯ ತಮಿಳುನಾಡಿನಲ್ಲಿರುವ ಮಧುಮಲೆ ಹುಲಿಸಂರಕ್ಷಿತ ಪ್ರದೇಶಕ್ಕೂ ಮೋದಿ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿ, ಆಸ್ಕರ್ ಗೆ ಆಯ್ಕೆಯಾಗಿದ್ದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿದ್ದ ಆನೆ ಮಾವುತ ಬೊಮ್ಮನ್ ದಂಪತಿಯನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಂಡೀಪುರದ ಬಳಿ ಇರುವ ಮೇಲುಕಾಮನಹಳ್ಳಿಯಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಸಂಬಂಧ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಇತರ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಂಡೀಪುರದಲ್ಲಿ ಇತ್ತೀಚೆಗೆ ವಿದ್ಯುತ್ ತಗುಲಿ ಅಸ್ವಸ್ಥಗೊಂಡಿದ್ದ ಹೆಣ್ಣಾನೆಗೆ ಚಿಕಿತ್ಸೆ ನೀಡಿ, ಅದರ ಪ್ರಾಣ ಉಳಿಸಿದ ಸಿಬ್ಬಂದಿಯನ್ನು ಮೋದಿ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ‘ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ನಮಗೆ ಪ್ರಧಾನಿ ಭೇಟಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಮೈಸೂರಿಂದ ಬಂಡೀಪುರಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ, ಸಿದ್ಧತೆ ಮಾಡಲಾಗುತ್ತಿದೆ ಎಂದರು.
ಅಳಿವಿನಂಚಿಗೆ ಸಾಗುತ್ತಿದ್ದ ಹುಲಿಗಳ ಸಂತತಿ ರಕ್ಷಣೆಗಾಗಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ 1972ರಲ್ಲಿ ಜಾರಿಗೊಳಿಸಿದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ದೇಶದಲ್ಲಿ 9 ಸಂರಕ್ಷಿತ ಪ್ರದೇಶಗಳನ್ನು ಹುಲಿ ಯೋಜನೆಗೆ ಸೇರ್ಪಡೆಗೊಳಿಸಲಾಗಿತ್ತು. ಅದರಲ್ಲಿ ಬಂಡೀಪುರವೂ ಒಂದು. 1973ರ ನ.16ರಂದು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಉದ್ಘಾಟಿಸಿದ್ದರು.