ಐಎಎಸ್ – ಐಪಿಎಸ್ ಸಮರ.. ಸರ್ಕಾರಕ್ಕೆ ಮುಜುಗರ!

Spread the love

ಐಎಎಸ್ – ಐಪಿಎಸ್ ಸಮರ.. ಸರ್ಕಾರಕ್ಕೆ ಮುಜುಗರ!

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪ ನಡುವಿನ ಜಗಳ ತಾರಕ್ಕೇರಿದ್ದು, ಇಬ್ಬರು ಮಹಿಳಾ ಅಧಿಕಾರಿಗಳು ಸಾಮಾಜಿಕ ಜಾಲ ತಾಣಗಳನ್ನು ದಾಟಿ ಮಾಧ್ಯಮಗಳ ಮುಂದೆ ಬಂದು ಕೆಸರು ಎರಚಿಕೊಳ್ಳುತ್ತಿರುವುದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.

ಮಹಿಳಾ ಅಧಿಕಾರಿಗಳಿಬ್ಬರು ಖಾಸಗಿ ವಿಚಾರಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಟೀಕೆಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಅದು ಸರ್ಕಾರದ ಮೇಲೆ ಪರಿಣಾಮ ಬೀರಿದೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂಬ ಆರೋಪವನ್ನು ಎದುರಿಸುವಂತಾಗಿದೆ. ಅಧಿಕಾರಿಗಳ ನಡುವೆ ಫೇಸ್ ಬುಕ್ ಶುರುವಾದಾಗಲೇ ಅದಕ್ಕೆ ಮೇಲಿನ ಅಧಿಕಾರಿಗಳು ತಡೆಯೊಡ್ಡಿ ಇಬ್ಬರಿಗೂ ಎಚ್ಚರಿಕೆಯ ನೋಟೀಸ್ ನೀಡಬೇಕಾಗಿತ್ತು. ಆದರೆ ಸರ್ಕಾರ ಮತ್ತು ಮೇಲಾಧಿಕಾರಿಗಳ ಮೌನದಿಂದಾಗಿ ಮಹಿಳಾಧಿಕಾರಿಗಳ ಜಗಳ ಬೀದಿಗೆ ಬಿದ್ದಂತಾಗಿದೆ.

ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ಶಿಸ್ತು ಉಲ್ಲಂಘನೆ, ದುರ್ನಡತೆ ಹಾಗೂ ಕರ್ನಾಟಕ ಸರ್ಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲು ಮುಂದಾಗಿದೆ. ಈ ಸಂಬಂಧ ಗೃಹಸಚಿವ ಅರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದಾರೆ. ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕ್ರಮಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳಿಗೆ ಅವರದ್ದೇ ಆದ ಗೌರವವಿದೆ. ಅವರು ಆಡಳಿತ ನಡೆಸುವವರು, ಅವರನ್ನು ಜನ ದೇವಮಾನವರೆಂದು ತಿಳಿದಿದ್ದಾರೆ. ಹೀಗಿರುವಾಗ ತಮ್ಮ ಘನತೆ ಉಳಿಸಿಕೊಳ್ಳಬೇಕಾದವರು ತೀರಾ ಕೆಳಮಟ್ಟಕ್ಕಿಳಿದು ಜಗಳವಾಡುತ್ತಿರುವುದು ಶೋಭೆಯಲ್ಲ. ಅವರ ವೈಯುಕ್ತಿ ವಿಚಾರಗಳನ್ನು ಇಲ್ಲಿಗೆ ಎಳೆದು ತರಬಾರದು ಎಂದು ಹೇಳಿದ್ದಾರೆ. ಇದರಿಂದ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

ಇಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಏನು ಆಗಬೇಕೋ ಅದೇ ಆಗುತ್ತದೆ ಮುಖ್ಯಮಂತ್ರಿಗಳು ಇದರ ಬಗ್ಗೆ ಈಗಾಗಲೇ ಗಮನಹರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನಾದರೂ ಸರ್ಕಾರ ಮಹಿಳಾಧಿಕಾರಿಗಳ ಜಗಳಕ್ಕೆ ಬ್ರೇಕ್ ಹಾಕುತ್ತಾ? ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Spread the love