ಐಎಸ್‌ ಜೊತೆ ನಂಟು: ಮತ್ತಿಬ್ಬರನ್ನು ಬಂಧಿಸಿದ ಎನ್‌ಐಎ

Spread the love

ಐಎಸ್‌ ಜೊತೆ ನಂಟು: ಮತ್ತಿಬ್ಬರನ್ನು ಬಂಧಿಸಿದ ಎನ್‌ಐಎ
 

ಮಂಗಳೂರು: ನಿಷೇಧಿತ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ಜೊತೆ ಸೇರಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ ಮತ್ತಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧಿಸಿದೆ. ಇದರೊಂದಿಗೆ, ಇಸ್ಲಾಮಿಕ್‌ ಸ್ಟೇಟ್‌ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಒಟ್ಟು ಆರು ಮಂದಿಯ ಬಂಧನವಾದಂತಾಗಿದೆ.

ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕಿನ ತೊಕ್ಕೊಟ್ಟು ಪೆರ್ಮನ್ನೂರು ಹೀರಾ ಕಾಲೇಜು ಬಳಿಯ ನಿವಾಸಿ ಮಜೀನ್‌ ಅಬ್ದುಲ್‌ ರಹಮಾನ್‌ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ದೇವನಾಯಕನಹಳ್ಳಿಯ ನೂರಾನಿ ಮಸೀದಿ ಬಳಿಯ ನಿವಾಸಿ ನದೀಮ್‌ ಅಹಮದ್‌ ಕೆ.ಎ. ಎಂದು ಗುರುತಿಸಲಾಗಿದೆ. ಈ ಕುರಿತು ಎನ್‌ಐಎ ಬುಧವಾರ ಮಧ್ಯಾಹ್ನ ಟ್ವೀಟ್‌ ಮಾಡಿದೆ.

ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ನಗರದ ಮಾಝ್ ಮುನೀರ್ ಅಹಮದ್ ಹಾಗೂ ಶಿವಮೊಗ್ಗದ ಸಿದ್ದೇಶ್ವರ ನಗರದ ಸಯ್ಯದ್‌ ಯಾಸೀನ್‌ನನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸರು ಬಂಧಿಸಿದ್ದರು. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 2022ರ ಸೆ. 19ರಂದು ದಾಖಲಾದ ಪ್ರಕರಣದ (ಈ ಪ್ರಕರಣ ಎನ್‌ಐಎಗೆ ಹಸ್ತಾಂತರವಾದ ಬಳಿಕ ನ.4ರಂದು ಪ್ರತ್ಯೇಕ ಮೊಕದ್ದಮೆ ದಾಖಲಾಗಿತ್ತು) ಮುಂದುವರಿದ ತನಿಖೆಯ ಭಾಗವಾಗಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.

‘ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಪ್ರಕರಣದ ಪ್ರಮುಖ ಆರೋಪಿ ಮಾಝ್‌ ಮುನೀರ್‌ ಎಂಬಾತ ಮಜೀನ್‌ ಅಬ್ದುಲ್‌ ರಹಮಾನ್‌ನನ್ನು ಹಾಗೂ ಇನ್ನೊಬ್ಬ ಆರೋಪಿ ಸಯ್ಯದ್‌ ಯಾಸಿನ್‌ ಎಂಬಾತ ನದೀಮ್‌ನನ್ನು ಭಾರತದಲ್ಲಿ ಇಸ್ಲಾಮಿಕ್‌ ಸ್ಟೇಟ್‌ನ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಲು ತಮ್ಮ ತಂಡಕ್ಕೆ ಸೇರಿಸಿದ್ದರು. ಬಂಧಿತ ಆರೋಪಿಗಳಿಬ್ಬರೂ ಭಾರಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಇಸ್ಲಾಮಿಕ್‌ ಸ್ಟೇಟ್‌ನ ಸಂಚಿನ ಭಾಗವಾಗಿ ಅನೇಕ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಯತ್ನಗಳಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಎನ್‌ಐಎ ಹೇಳಿದೆ.

ಮಾಝ್‌ ಮುನೀರ್‌ ಹಾಗೂ ಸಯ್ಯದ್ ಯಾಸೀನ್‌ ಜೊತೆ ಸಂಪರ್ಕ ಹೊಂದಿದ್ದ ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಹುಝೈರ್ ಫರ್ಹಾನ್ ಬೇಗ್ ಮತ್ತು ಉಡುಪಿ ಜಿಲ್ಲೆ ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ಶಾಂತಿನಗರದ ರೇಷಾನ್ ತಾಜುದ್ದೀನ್ ಶೇಖ್‌ನನ್ನು ಎನ್‌ಐಎ ಅಧಿಕಾರಿಗಳ ತಂಡ 2023ರ ಜ.5ರಂದು ಬಂಧಿಸಿತ್ತು.


Spread the love

Leave a Reply

Please enter your comment!
Please enter your name here