ಐಟಿ ಪಾರ್ಕ್ ಕರಾವಳಿಯ ಪ್ರವಾಸೋದ್ಯಮದಲ್ಲಿ ಗೇಮ್ ಚೇಂಜರ್ ಆಗಲಿದೆ – ದಿನೇಶ್ ಗುಂಡೂರಾವ್
ಮಂಗಳೂರು: ಸೋಮೇಶ್ವರದಿಂದ ಸಸಿಹಿತ್ತುವರೆಗಿನ ಸಮುದ್ರ ತೀರದ ರಸ್ತೆಯನ್ನು 24 ಮೀಟರ್ಗೆ ಮೀಸಲಿಟ್ಟು ಅದನ್ನು ಕೋಸ್ಟಲ್ ರಸ್ತೆಯಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಜತೆಗೆ ಸಚಿವ ಸಂಪುಟದಿಂದ ಅನುಮೋದನೆಗೊಂಡ ಮಂಗಳೂರು ಐಟಿ ಪಾರ್ಕ್ ಕರಾವಳಿಯ ಪ್ರವಾಸೋದ್ಯಮದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಮುಡಾ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೀಚ್ ಮತ್ತು ಜಲಾಭಿಮುಖ (ವಾಟರ್ಫ್ರಂಟ್ ರಸ್ತೆಯಾಗಿ ಸಮುದ್ರ ಬದಿಯ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇದನ್ನು ಮಾಸ್ಟರ್ಪ್ಲಾನ್ಗೆ ಒಳಪಡಿಸಿದರೆ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಲಿದೆ. ಇದೇ ವೇಳೆ ಕಣ್ಣೂರು ಭಾಗದಲ್ಲಿ ಮತ್ತೊಂದು ಜಲಾಭಿಮುಖಿ ರಸ್ತೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ನಲ್ಲಿ ಸೇರ್ಪಡೆಗೊಳಿಸಲು ಸೂಚಿಸಲಾಗಿದೆ. ಇದರಿಂದ ರಸ್ತೆ ಸಂಪರ್ಕ ವ್ಯವಸ್ಥೆಯು ಜನರಿಗೆ ನಗರದೊಳಗಿನ ಪ್ರವೇಶವನ್ನು ವ್ಯಾಪಕಗೊಳಿಸಲಿದೆ. ಮಾಸ್ಟರ್ ಪ್ಲಾನ್ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಯೊಂದಿಗೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮುಡಾ ವ್ಯಾಪ್ತಿಯಲ್ಲಿ ಕೊಣಾಜೆ, ಕುಂಜತ್ತಬೈಲ್ ಹಾಗೂ ಚೇಳ್ಯಾರು ಮೂರು ಕಡೆ ವಸತಿ ಬಡಾವಣೆಗೆ ಲೇಔಟ್ ಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಬೇಕು. ಕೊಣಾಜೆಯಲ್ಲಿ ನವೆಂಬರ್ನೊಳಗೆ ಕಾಮಗಾರಿ ಪೂರ್ತಿಗೊಳಿಸಲು ಸೂಚಿಸಲಾಗಿದೆ. ಶೇ. 20ರಷ್ಟು ಮಾತ್ರವೇ ಬುಕ್ಕಿಂಗ್ ಆಗಿದ್ದು, ಕಾಮಗಾರಿ ಶೀಘ್ರ ಮುಗಿದರೆ ಬುಕ್ಕಿಂಗ್ಗೆ ವೇಗ ಸಿಗಲಿದೆ. ಇಲ್ಲಿನ ಆದಾಯವನ್ನು ಇನ್ನೊಂದು ಬಡಾವಣೆಯ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಆಗಲಿದೆ. ನವೆಂಬರ್ ತಿಂಗಳಲ್ಲಿ ಮತ್ತೆ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕುಂಜತ್ತಬೈಲ್ ಲೇಔಟ್ನಲ್ಲಿ ಸಮಸ್ಯೆ ಯಾಗಿದ್ದು, ಅಲ್ಲಿ ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಬೇಕಾಗಿದೆ. ಭೂ ಖರೀದಿಯಾಗಿದೆ. ಅದಕ್ಕೆ ಮಾಡಿರುವ ವೆಚ್ಚ ನಷ್ಟ ಆಗದಂತೆ ಸ್ಪಷ್ಟವಾದ ತೀರ್ಮಾನಕ್ಕೆ ಬರಬೇಕಾಗಿದೆ. ಅವೈಜ್ಞಾನಿಕವಾಗಿ ಹೆಚ್ಚಿನ ಬೆಲೆಗೆ ಖರೀದಿ ಮಾಡಿರುವುದು ಸಮಸ್ಯೆ ಆಗಿದೆ. ಅದು ನಷ್ಟ ಆಡುವ ಪ್ರಾಜೆಕ್ಟ್ ಆಗಿ ಕಂಡು ಬರುತ್ತಿದೆ. ಅದರಿಂದ ಯಾವ ರೀತಿಯಲ್ಲಿ ಹೊರ ಬರಬೇಕಾಗಿದೆ ಎಂಬುದನ್ನು ನೋಡಬೇಕಾಗಿದೆ. ಚೇಳ್ಯಾರು ವಸತಿ ಬಡಾವಣೆಯ ಕಾಮಗಾರಿ ಮುಗಿಸಲು ಹಣದ ಅಗತ್ಯವಿದೆ. ಅದಕ್ಕಾಗಿ ಕೊಣಾಜೆಯ ಯೋಜನೆ ಪೂರ್ಣಗೊಳಿಸಿ ಅಲ್ಲಿನ ಆದಾಯದಿಂದ ಚೇಳ್ಳಾರು ವಸತಿ ಬಡಾವಣೆಯ ಕಾಮಗಾರಿಯನ್ನು ಪೂರ್ಣಗೊಳಿಸಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.