ಐತಿಹಾಸಿಕ ಮೈಸೂರು ದಸರಾ ಆಚರಣೆಗೆ ಸರ್ವ ಸಿದ್ಧತೆ

Spread the love

ಐತಿಹಾಸಿಕ ಮೈಸೂರು ದಸರಾ ಆಚರಣೆಗೆ ಸರ್ವ ಸಿದ್ಧತೆ

ಮೈಸೂರು: ಐತಿಹಾಸಿಕ ಮೈಸೂರು ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅ.7ರಂದು ಗುರುವಾರ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಆ ನಂತರ ಅರಮನೆಯಲ್ಲಿ ಖಾಸಗಿ ದರ್ಬಾರ್ ಸೇರಿದಂತೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ನಡುವೆ ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಅವರನ್ನು ಸಹಕಾರ ಹಾಗೂ ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಂಗಳವಾರ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಅರಮನೆಗೆ ತೆರಳಿದ ಅವರು, ಪ್ರಮೋದಾಮೋದಿ ಅವರಿಗೆ ಫಲಪುಷ್ಪ ತಾಂಬೂಲ ನೀಡಿ ಗೌರವಿಸಿ ಆಹ್ವಾನ ನೀಡಿದರು. ಸಚಿವರ ಆಹ್ವಾನ ಸ್ವೀಕರಿಸಿದ ಪ್ರಮೋದಾದೇವಿ ಅವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ಪ್ರತಿವರ್ಷದ ಪದ್ಧತಿಯಂತೆ ದಸರಾ ಮಹೋತ್ಸವಕ್ಕೆ ರಾಜಮಾತೆಯವರನ್ನು ಆಹ್ವಾನಿಸಲಾಯಿತು. ದಸರಾಗೆ ಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅರಮನೆಯ ಕಾರ್ಯಕ್ರಮಗಳಿಗೂ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡುವಂತೆ ಅವರೂ ಕೋರಿದರು. ಅದಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಲಾಗಿದೆ ಎಂದರು.

ಇನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ಸಾಂಪ್ರದಾಯಿಕ ಮತ್ತು ಸರಳವಾಗಿ ನಡೆಯುತ್ತಿದ್ದು, ಜನ ಜಾತ್ರೆಗೆ ಅವಕಾಶ ಮಾಡಿಕೊಡದೆ ಕೋವಿಡ್ ಹರಡುವಿಕೆ ತಡೆಯಲು ಕೋವಿಡ್ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆ. ಅದರಂತೆ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಮತ್ತು ಜಂಬೂಸವಾರಿಗೆ ಕೆಲವೇ ಸೀಮಿತ ಜನರಿಗೆ ಅವಕಾಶ ಮಾಡಿಕೊಡಲಾಗಿದೆ.

ಅದರಂತೆ ಅ.7ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಅ.15ರಂದು ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನಂತೆ ಪ್ರತ್ಯೇಕ ಷರತ್ತುಗಳನ್ನೊಳಗೊಂಡ ಮಾರ್ಗಸೂಚಿ ರೂಪಿಸಿದ್ದು, ಅದರಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕಡ್ಡಾಯವಾಗಿ ದಸರಾ ಉದ್ಘಾಟನೆಗೆ ನಾನೂರು ಜನರಿಗೆ ಹಾಗೂ ಜಂಬೂಸವಾರಿಗೆ ಐನೂರು ಮಂದಿಗೆ ಅವಕಾಶ ನೀಡಲಾಗಿದೆ.

ಅರಮನೆ ಆವರಣದಲ್ಲಿ ಅ.7ರಿಂದ 13ರವರೆಗೆ ನಡೆಯಲಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಪ್ರತಿದಿನ ಎರಡು ಗಂಟೆಗಳು ಗರಿಷ್ಠ ಐನೂರು ಜನರಿಗೆ ಮೀರದಂತೆ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ನಗರದಲ್ಲಿ ಅ.7ರಿಂದ ಸಂಜೆ 7ಗಂಟೆಯಿಂದ 9ಗಂಟೆವರೆಗೆ ಹತ್ತು ದಿನಗಳ ಕಾಲ ಆಯ್ದ ಸ್ಥಳಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲು ಮಾತ್ರ ಅನುಮತಿ ನೀಡಲಾಗಿದೆ. ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಜನದಟ್ಟಣೆಯಾಗುವುದನ್ನು ತಡೆಯುವುದು ಮತ್ತು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಪರಿಶೀಲಿಸುವುದು. ಅ.15ರಂದು ಜಂಬೂಸವಾರಿಗೆ ಕೋವಿಡ್-19 ಮುಂಜಾಗ್ರತಾ ಕ್ರಮಗಳೊಂದಿಗೆ ಕಡ್ಡಾಯವಾಗಿ 500 ಜನರಿಗೆ ಮಾತ್ರ ಪ್ರವೇಶ ಕಲ್ಪಿಸುವಂತೆ ಆದೇಶ ನೀಡಲಾಗಿದೆ.

ಅರಮನೆಯ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುವ ಷರತ್ತು ವಿಧಿಸಲಾಗಿದೆ. ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ದೃಶ್ಯ ಸಂವಹನ(ವರ್ಚ್ಯುಯಲ್) ಮೂಲಕ ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಿಕೊಡುವ ಮೂಲಕ ಕಾರ್ಯಕ್ರಮಗಳಿಗೆ ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಇದೆಲ್ಲದರ ನಡುವೆ ದಸರಾ ಆಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕರ್ತವ್ಯನಿರತ ಅಧಿಕಾರಿಗಳು, ಸಿಬ್ಬಂದಿಗಳು, ಕಲಾವಿದರು, ರಕ್ಷಣಾ ಸಿಬ್ಬಂದಿಗಳು ಮತ್ತು ಮಾಧ್ಯಮದವರು ಒಳಗೊಂಡಂತೆ ಅ.4ರ ನಂತರ ಕೋವಿಡ್-19 ಆರ್ಟಿಪಿಸಿಆರ್ ತಪಾಸಣೆ ನಡೆಸಿ ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಮತ್ತು ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ.

ದಸರಾ ಮಹೋತ್ಸವದ ಉದ್ಘಾಟನೆ ಹಾಗೂ ಜಂಬೂ ಸವಾರಿಯನ್ನು ಕಡಿಮೆ ಜನರಿಗೆ ಸೀಮಿತಗೊಳಿಸಿರುವುದರಿಂದ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂ ಸವಾರಿ ಕಾರ್ಯಕ್ರಮಚವನ್ನು ವೆಬ್ಸೈಟ್ (https://mysoredasara.gov.in/home_kannada), ಫೇಸ್ಬುಕ್, ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ವೆಬ್ಸೈಟ್ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಕಾರ್ಯಕ್ರಮಗಳು ನಡೆಯುವ ವೇಳೆ ನೇರಪ್ರಸಾರವನ್ನು ಲಿಂಕ್ ಗಳ ಮೂಲಕ ನೋಡಬಹುದಾಗಿದೆ.

ದಸರಾ ಮಹೋತ್ಸವದಲ್ಲಿ ಮೇಯರ್ ಹಾಗೂ ಜಿ.ಪಂ ಅಧ್ಯಕ್ಷರು ಕುದುರೆ ಸವಾರಿ ಮಾಡುವುದು ಸಂಪ್ರದಾಯ. ಆದರೆ ಈ ಬಾರಿ ದಸರಾ ಮಹೋತ್ಸವದ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿರುವುದರಿಂದ ಈ ಬಾರಿಯೂ ಮೇಯರ್ ಕುದುರೆ ಸವಾರಿ ಮಾಡುವುದಿಲ್ಲ. ಮೇಯರ್ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕುದುರೆ ಸವಾರಿ ಮಾಡುತ್ತಿದ್ದರು. ಆದರೆ, ಜಿಪಂ ಸದಸ್ಯರ ಅವಧಿ ಮುಗಿದು ಆಡಳಿತಾಧಿಕಾರಿ ನೇಮಕವಾಗಿದ್ದಾರೆ. ಮೇಯರ್ ಈವರೆಗೆ ಕುದುರೆ ಸವಾರಿ ಅಭ್ಯಾಸ ಮಾಡಿಲ್ಲ. ಕೊರೊನಾದಿಂದಾಗಿ ಕಳೆದ ಬಾರಿಯೂ ಕುದುರೆ ಸವಾರಿ ಮಾಡಿರಲಿಲ್ಲ. ಹೀಗಾಗಿ, ಈ ಬಾರಿಯೂ ಕುದುರೆ ಸವಾರಿ ನಡೆಯುವುದಿಲ್ಲ. ಮೊದಲೆಲ್ಲ ಜಿಪಂ ಅಧ್ಯಕ್ಷರು ಮತ್ತು ಮೇಯರ್ ಅವರಿಗೆ ಕುದುರೆಸವಾರಿ ಮಾಡಲು ಮೊದಲೇ ಅಭ್ಯಾಸ ಮಾಡಿ ಜಂಬೂಸವಾರಿ ದಿನ ನಿರ್ಭಯವಾಗಿ ಕುದುರೆ ಸವಾರಿ ಮಾಡಲು ತಯಾರಿ ಮಾಡಲಾಗುತ್ತಿತ್ತು. ಆದರೆ ಅದು ಸಾಧ್ಯವಾಗಿಲ್ಲ.


Spread the love