ಒತ್ತಡ ಮುಕ್ತ ಕಲಿಕೆಯಿಂದ ಯಶಸ್ಸು: ನ್ಯಾ.ನಜೀರ್

Spread the love

ಒತ್ತಡ ಮುಕ್ತ ಕಲಿಕೆಯಿಂದ ಯಶಸ್ಸು: ನ್ಯಾ.ನಜೀರ್

ಮೂಡುಬಿದಿರೆ: ‘ಒತ್ತಡಮುಕ್ತ ಕಲಿಕೆಯಿಂದ ಯಶಸ್ಸು ಸಾಧ್ಯ’ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಎಸ್. ಅಬ್ದುಲ್ ನಜೀರ್ ಹೇಳಿದರು. ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಶನಿವಾರ ನಡೆದ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ 21ನೇಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾತೆರೆಗ್ಲಾ ಎನ್ನ ನಮಸ್ಕಾರ’ ಎಂದು ಮಾತು ಆರಂಭಿಸಿದ ಅವರು, ‘ಪದವಿಯು ನಿಮ್ಮ ಜೀವನದ ಸಾಧನೆಗಳ ಆರಂಭ. ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹೇಳಿದಂತೆ, ‘ನಿಮ್ಮ ಸಮಯ ಅಲ್ಪ. ಅದನ್ನು ಇನ್ನೊಬ್ಬರ ಬದುಕಿನಲ್ಲಿ ಕಾಲಹರಣ ಮಾಡಲು ಕಳೆಯಬೇಡಿ. ಇತರರ ಅಭಿಪ್ರಾಯಗಳು ನಿಮ್ಮ ಅಂತಃಸಾಕ್ಷಿಯ ಧ್ವನಿಯನ್ನು ಮುಳುಗಿಸದಿರಲಿ. ನಿಮ್ಮ ಮನಃಸಾಕ್ಷಿಯಂತೆ ಮುನ್ನಡೆಯಿರಿ’ ಎಂದು ಹಿತವಚನ ಹೇಳಿದರು.

‘ಇತರರಿಗೆ ಒಳಿತು ಮಾಡುವುದೇ ಶ್ರೇಷ್ಠ ಜೀವನ. ಇದಕ್ಕೆ ಡಾ.ಎಂ.ಮೋಹನ ಆಳ್ವ ಅವರೇ ಸ್ಫೂರ್ತಿ. ತನ್ನೂರಿನ ಜನತೆಗೆ ಅಗತ್ಯ ಆರೋಗ್ಯ ಸೌಲಭ್ಯ ದೊರಕಿಸುವ ಆಶಯದಿಂದ ಮೂಡುಬಿದಿರೆಯಲ್ಲಿ ಪುಟ್ಟ ಚಿಕಿತ್ಸಾಲಯದೊಂದಿಗೆ ವೃತ್ತಿ ಆರಂಭಿಸಿದರು. ಬಳಿಕ ಆರೋಗ್ಯ ಸೇವೆ ಜೊತೆ ಶಿಕ್ಷಣವನ್ನೂ ಆರಂಭಿಸಿದರು’ ಎಂದರು.

‘ವಿಶೇಷ ಮಕ್ಕಳಿಗೆ ಉಚಿತ ಶಾಲೆಯು ಅವರ ಬಹುದೊಡ್ಡ ಸೇವೆ. ಅಲ್ಲದೇ ಪ್ರತಿ ವರ್ಷ ಮೂರು ಸಾವಿರಕ್ಕೂ ಅಧಿಕ ಮಕ್ಕಳಿಗೆ ದತ್ತು ಯೋಜನೆ ಮೂಲಕ ಉಚಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ರಾಜ್ಯದಲ್ಲೇ ನಂಬರ್ 1 ಆಗಿದೆ. ಆಡಳಿತ, ಶಿಸ್ತು ಸೇರಿದಂತೆ ಎಲ್ಲ ವಿಷಯಗಳಲ್ಲಿ ಆಳ್ವಾಸ್ ಸಂಸ್ಥೆಯ ಶ್ರೇಷ್ಠತೆಯು ತುಂಬಾ ಖುಷಿ ನೀಡಿದೆ’ ಎಂದು ಅವರು ಅಭಿನಂದಿಸಿದರು.

ಒಂದು ಬಾರಿ ಶಿಕ್ಷಕರೊಬ್ಬರು ಒಂದು ಹೂಜಿಗೆ ಕಲ್ಲುಗಳನ್ನು ಹಾಕಿದರು. ಬಳಿಕ, ‘ಹೂಜಿ ತುಂಬಿದೆಯೇ?’ ಎಂದು ವಿದ್ಯಾರ್ಥಿಗಳನ್ನು ಕೇಳಿದರು. ಎಲ್ಲರೂ ‘ಹೌದು’ ಎಂದರು. ಬಳಿಕ ಅದಕ್ಕೆ ಸಣ್ಣ ಕಲ್ಲುಗಳನ್ನು ಹಾಕಿದರು. ಅದೂ ಅದರಲ್ಲಿ ತುಂಬಿತು. ಬಳಿಕ ಮರಳನ್ನು ಹಾಕಿದರು. ಅದೂ ಅದರಲ್ಲಿ ತುಂಬಿತು’ ಎಂದು ಕತೆ ಹೇಳಿದ ನ್ಯಾ.ನಜೀರ್, ‘ ಜೀವನದಲ್ಲಿ ನೀವೂ ನಿಮ್ಮ ಆದ್ಯತೆಯನ್ನು ಇದೇ ರೀತಿ ನಿರ್ಧರಿಸಬೇಕು. ಕಲ್ಲುಗಳು ನಿಮ್ಮ ಕುಟುಂಬ. ಸಣ್ಣ ಕಲ್ಲುಗಳು ನಿಮ್ಮ ವೃತ್ತಿ ಬದುಕು. ಮರಳು ನಿಮ್ಮ ಅಹಂ ಮತ್ತು ಪ್ರತಿμÉ್ಠ. ನೀವು ಮರಳನ್ನೇ ಮೊದಲು ಹಾಕಿದ್ದರೆ, ಬಳಿಕ ಹೂಜಿಯಲ್ಲಿ ಬೇರೆ ಏನೂ ಹಾಕಲು ಸಾಧ್ಯವಿಲ್ಲ. ಅದೇ ರೀತಿ ನೀವು ನಿಮ್ಮ ಆದ್ಯತೆಯನ್ನು ಗುರುತಿಸಿ, ಅದಕ್ಕೆ ಶ್ರಮ ಹಾಕಿ. ಅನಗತ್ಯ ವಿಚಾರದಲ್ಲಿ ಸಮಯ ವ್ಯರ್ಥ ಮಾಡಬೇಡಿ’ ಎಂದರು.

ನಿಮ್ಮ ಕನಸಿನೆಡೆಗೆ ಧೈರ್ಯದಿಂದ ಮುನ್ನಡೆಯಿರಿ. ನಿಮ್ಮ ಕಲ್ಪನೆಯ ಬದುಕು ಬದುಕಿ. ಸಾಧನೆಗೆ ತುಂಬಾ ಪರಿಶ್ರಮ ಬೇಕು. ಗುರಿ ಸಾಧಿಸಲು ತ್ಯಾಗ ಅನಿವಾರ್ಯ ಎಂದು ಉಲ್ಲೇಖಿಸಿದರು.

ಒತ್ತಡದ ಕಲಿಕೆಯೇ ಯಶಸ್ಸು ಎಂಬ ತಪ್ಪು ಗ್ರಹಿಕೆ ಹಲವು ವಿದ್ಯಾರ್ಥಿಗಳಲ್ಲಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಮೂರನೇ ಒಂದು ಭಾಗವನ್ನು ಒತ್ತಡದಲ್ಲಿ ಕಳೆಯುತ್ತಾರೆ. ಒತ್ತಡ ಕಲಿಕೆಯ ಭಾಗವಲ್ಲ. ಭಾರಿ ಕಲಿತಾಗ ಬಳಲುತ್ತೇವೆ ಎಂಬ ತಪ್ಪು ಕಲ್ಪನೆ ಕೆಲವು ವಿದ್ಯಾರ್ಥಿಗಳಲ್ಲಿ ಇದೆ. ಆದರೆ, ಆ ಮೂಲಕ ನೀವು ನಿಮ್ಮ ಕಲಿಕೆಯ ಸಾಮಥ್ರ್ಯ ವನ್ನು ಕುಂಠಿತಗೊಳಿಸುತ್ತೀರಿ. ಒತ್ತಡದ ಕಲಿಕೆಯು ನಿಮ್ಮ ಗುರಿ ಸಾಧನೆ ವಿಫಲಗೊಳಿಸುತ್ತದೆ. ಕಡಿಮೆ ಒತ್ತಡದಲ್ಲೂ ಸಾಧನೆ ಮಾಡಬಹುದು ಎಂದರು.

ಕಲಿಕೆಯಿಂದ ಒತ್ತಡ ದೂರ ಇಡಿ. ನೀವು ಏನು ಕಲಿಯುತ್ತೀರಿ? ಎಂಬುದಕ್ಕಿಂತ ಹೇಗೆ ಕಲಿಯುತ್ತೀರಿ? ಎನ್ನುವುದು ಮುಖ್ಯ. ಅದಕ್ಕಾಗಿ ಎಷ್ಟು ಕಲಿಯಬೇಕು? ಎಂಬ ಚಿಂತೆ ಬದಲು, ಕಲಿಕೆಯ ವಿಷಯ ಮೊದಲು ಆಯ್ದುಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಸ್ಪಷ್ಟತೆ ಬಗ್ಗೆ ಎಚ್ಚರ ವಹಿಸಿ, ಸತತ ಪರಿಶ್ರಮ ಹಾಕಿದರೆ ಯಶಸ್ಸು ಸಾಧ್ಯ. ಸತತ ಅಭ್ಯಾಸದಿಂದ ನಿಖರತೆ ಸಾಧ್ಯ. ಅಭ್ಯಾಸದಿಂದ ವೇಗ ಮತ್ತು ಸ್ಪಷ್ಟತೆ ಸಾಧ್ಯ ಎಂದರು.

ಸಮಯ ಇಲ್ಲ ಎನ್ನಬೇಡಿ. ಐನ್‍ಸ್ಟೈನ್ ಸೇರಿದಂತೆ ಎಲ್ಲ ಸಾಧಕರμÉ್ಟೀ ಸಮಯವೂ ನಿಮಗೆ ನಿಮ್ಮ ಬದುಕಿನಲ್ಲಿ ಸಿಕ್ಕಿದೆ ಎಂದರು

‘ನೀವು ನಿಮ್ಮ ಕೈಯಲ್ಲಿ ನೀರಿನ ಲೋಟ ಹಿಡಿದುಕೊಂಡಾಗ, ಎಷ್ಟು ಭಾರ ಇದೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಹೊತ್ತು ಹಿಡಿದುಕೊಳ್ಳಬೇಕು ಎಂಬುದರ ಮೇಲೆ ಒತ್ತಡ ಅವಲಂಬಿಸಿದೆ’ ಎಂದು ಉದಾಹರಣೆ ನೀಡಿದರು.
‘ನಾವು ಏನಾಗಬೇಕು ಎಂದು ಚಿಂತಿಸುತ್ತೇವೆಯೋ? ಅದೇ ಆಗುತ್ತೇವೆ. ಮನುಷ್ಯ ಅವನ ಆಲೋಚನೆಯ ಉತ್ಪನ್ನ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದಾರೆ’ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 581, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 390 ಹಾಗೂ ಮಂಗಳೂರು ವಿಶ್ವವಿದ್ಯಾಲಯದ 1397 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,368 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ನ್ಯಾ.ನಜೀರ್ ಪತ್ನಿ ಸಮೀರಾ ನಜೀರ್ ಇದ್ದರು. ಆಳ್ವಾಸ್   ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು. ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ರೋಶನ್ ಪಿಂಟೊ ಪದವಿ ಘೋಷಣೆ ಮಾಡಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ರ್ಯಾಂಕ್ ವಿಜೇತರ ಹೆಸರು ವಾಚಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.


Spread the love

Leave a Reply

Please enter your comment!
Please enter your name here