ಓಲೈಕೆ, ಕುಟುಂಬ ರಾಜಕಾರಣ ತಿರಸ್ಕರಿಸಿ: ಪ್ರತಾಪ್ ಸಿಂಹ

Spread the love

ಓಲೈಕೆ, ಕುಟುಂಬ ರಾಜಕಾರಣ ತಿರಸ್ಕರಿಸಿ: ಪ್ರತಾಪ್ ಸಿಂಹ

ಪಿರಿಯಾಪಟ್ಟಣ: ಕಾಂಗ್ರೆಸ್ಸಿಗರ ಓಲೈಕೆ ಹಾಗೂ ಜೆಡಿಎಸ್ ನವರ ಕುಟುಂಬ ರಾಜಕಾರಣ ತಿರಸ್ಕರಿಸಿ ಅಭಿವೃದ್ಧಿ ಹಿತದೃಷ್ಟಿಯಿಂದ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಸಿ.ಎಚ್ ವಿಜಯ್ ಶಂಕರ್ ಪರ ಮತಯಾಚಿಸಿ ಪಟ್ಟಣದ ದೇವೇಗೌಡನ ಕೊಪ್ಪಲು ವಾರ್ಡ್ ನಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನೀಡಿರುವ ಎಲ್ಲ ವರ್ಗಗಳ ಮೀಸಲಾತಿ ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡುತ್ತೇವೆ ಎಂದು ಓಲೈಕೆ ಮಾಡಿ ಪಠ್ಯದಲ್ಲಿ ಟಿಪ್ಪುವಿನ ಇತಿಹಾಸ ಅಳವಡಿಸಲು ಹೊರಟಿದ್ದಾರೆ. ಜೆಡಿಎಸ್ ನಲ್ಲಿ ಕುಟುಂಬದವರೆಲ್ಲ ಕಣ್ಣೀರಿಡುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಕಣ್ಣೀರು ಸಮುದಾಯಕ್ಕೆ ಅಧಿಕಾರ ಕುಟುಂಬಕ್ಕೆ ಎಂದು ಪ್ರಶ್ನಿಸಿ ಎರಡು ಪಕ್ಷಗಳಿಂದ ಬೇಸತ್ತ ರಾಜ್ಯದ ಜನತೆ ಡಬಲ್ ಇಂಜಿನ್ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ತೀರ್ಮಾನಿಸಿದ್ದಾರೆ ಎಂದರು.

9,500 ಕೋಟಿ ವೆಚ್ಚ ಮಾಡಿ ಬೆಂಗಳೂರು ಮೈಸೂರು ಹೈವೇ ನಿರ್ಮಾಣ 4,100 ಕೋಟಿ ವೆಚ್ಚದಲ್ಲಿ ಮೈಸೂರು ಕುಶಾಲನಗರ ಎಕ್ಸ್ ಪ್ರೆಸ್ ಹೈವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ತಾಲ್ಲೂಕಿನ 303 ಹಳ್ಳಿಗಳಿಗೆ ಕಾವೇರಿ ನದಿಯಿಂದ 285 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ, ಪಿರಿಯಾಪಟ್ಟಣ ಟೌನ್ ಮತ್ತು ಕುಶಾಲನಗರಕ್ಕೆ 110 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 26 ಸಾವಿರ ತಂಬಾಕು ಬೆಳೆಗಾರರಿಗೆ ಪರವಾನಗಿ ದೊರಕಿಸಲು ಶ್ರಮಿಸುತ್ತಿದ್ದು ಇದು ಯಶಸ್ವಿಯಾಗಲು ಸಿ.ಎಚ್ ವಿಜಯ್ ಶಂಕರ್ ಶಾಸಕರಾಗುವ ಅಗತ್ಯವಿದೆ. ತಾಲ್ಲೂಕಿನಲ್ಲಿ ವೆಂಕಟೇಶಣ್ಣ ಮತ್ತು ಮಹದೇವಣ್ಣ ಅವರಿಗೆ ಅಧಿಕಾರ ನೀಡಿರುವುದು ಸಾಕು ಕುರುಬ ಜನಾಂಗದ ಅಭಿವೃದ್ಧಿ ಹಾಗೂ ಭವನ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದು ವಿಜಯ್ ಶಂಕರ್ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿ ಎಂದು ಮನವಿ ಮಾಡಿದರು.

ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ ಬಸವರಾಜು ಮಾತನಾಡಿ ತಾಲ್ಲೂಕಿನ ಜನತೆ ಜೆಡಿಎಸ್ ಮತ್ತು ಕಾಂಗ್ರೆಸ್ ನೋಡಿ ಬೇಸತ್ತಿದ್ದು ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಸಂಸದರ ಅಭಿವೃದ್ಧಿ ಕಾರ್ಯ ಪುನರಾವರ್ತನೆಯಾಗಲು ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಆಯ್ಕೆ ಅನಿವಾರ್ಯ ಎಂದರು. ಮುಖಂಡರಾದ ಪಿ.ಪ್ರಶಾಂತ್ ಗೌಡ ಹಾಗು ವಿ.ರಾಜೇಂದ್ರ ಅವರು ಮಾತನಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವರ್ತನೆಯಿಂದ ಬೇಸತ್ತು ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದು ಸರಳ ಸಜ್ಜನಿಕೆಗೆ ಹೆಸರಾದ ಸಿ.ಎಚ್ ವಿಜಯ್ ಶಂಕರ್ ಅವರನ್ನು ಗೆಲ್ಲಿಸುವ ಮೂಲಕ ತಾಲೂಕಿನ ರಾಜಕೀಯ ದೃವೀಕರಣಕ್ಕೆ ಸಾಕ್ಷಿಯಾಗಬೇಕು ಎಂದರು.

ಈ ವೇಳೆ ಹುಣಸವಾಡಿ ಸರ್ಕಲ್, ಹಾರನಹಳ್ಳಿ, ಕೊಪ್ಪ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ತಮಿಳುನಾಡು ರಾಜ್ಯ ಮಹಿಳಾ ಮೋರ್ಚಾ ಖಜಾಂಚಿ ಮಾಲಿನಿ ಜಯಚಂದ್ರನ್, ತಾಲ್ಲೂಕು ಘಟಕ ಅಧ್ಯಕ್ಷ ಎಂ.ಎಂ ರಾಜೇಗೌಡ, ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್, ಮುಖಂಡರಾದ ಜಿ.ಸಿ ವಿಕ್ರಮ್ ರಾಜ್, ಟಿ.ರಮೇಶ್, ಶೋಭ, ರವಿ, ನಳಿನಿ, ಗೀತಾ, ಭಾನು, ಲಕ್ಷ್ಮೀನಾರಾಯಣ್, ದೇವರಾಜ್, ದೇವೇಂದ್ರ, ಸ್ವಾಮಿ ಮತ್ತಿತರಿದ್ದರು.


Spread the love