ಕಟ್ಟಡ ಕಾರ್ಮಿಕರ ಆಹಾರಧಾನ್ಯ ಕಿಟ್ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರ ತೀವ್ರತರವಾದ ಹೋರಾಟಕ್ಕೆ ನಿರ್ಧಾರ

Spread the love

ಕಟ್ಟಡ ಕಾರ್ಮಿಕರ ಆಹಾರಧಾನ್ಯ ಕಿಟ್ ವಿತರಣೆಯಲ್ಲಿ ವ್ಯಾಪಕ ಅವ್ಯವಹಾರ ತೀವ್ರತರವಾದ ಹೋರಾಟಕ್ಕೆ ನಿರ್ಧಾರ 

ಮಂಗಳೂರು: ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ನೀಡುವ ಆಹಾರಧಾನ್ಯ ಕಿಟ್ ವಿತರಣೆಯಲ್ಲಿ ವ್ಯಾಪಕವಾದ ಅವ್ಯವಹಾರ ನಡೆದಿದ್ದು, ತೀವ್ರ ತರವಾದಂತಹ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ಇದರ ದ.ಕ.ಜಿಲ್ಲಾ ಅಧ್ಯಕ್ಷರಾದ ವಸಂತ ಆಚಾರಿಯವರು ಘೋಷಿಸಿದರು.

ಅವರು  ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮಂಗಳೂರು ಇದರ ಮುಂದುಗಡೆ ನಡೆದ ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಹೋರಾಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 2020 ರಲ್ಲಿ ಕೂಡಾ ಕೋಟ್ಯಾಂತರ ಹಣ ಬಿಡುಗಡೆ ಮಾಡಿ ಯಾವುದೇ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ನೀಡದೆ, ಬಿಜೆಪಿ ಮತ್ತು ಇತರ ಶಾಸಕರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಲ್ಲದ ಜನರಿಗೆ ವಿತರಣೆ ಮಾಡಿ, ವ್ಯಾಪಕ ಭ್ರಷ್ಟಾಚಾರ ಮಾಡಿದ್ದು, ಈಗ 2021 ರಲ್ಲಿ ಆಹಾರಧಾನ್ಯ ವಿತರಣೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಯನ್ನು ಬಿಡುಗಡೆ ಮಾಡಿ ಸ್ಥಳೀಯ ಶಾಸಕರ ಹೆಸರಿನಲ್ಲಿ ಬಹುತೇಕ ಕಟ್ಟಡ ಕಾರ್ಮಿಕರಲ್ಲದ ಜನರಿಗೆ ವಿತರಣೆ ಮಾಡಿದ್ದು ಬೆಳಕಿಗೆ ಬಂದಿದೆ. ಆಹಾರ ಕಿಟ್‍ನಲ್ಲಿ ಕಳಪೆ ಆಹಾರ ಸಾಮಾಗ್ರಿಗಳು ಮಾತ್ರವಲ್ಲದೆ, ವ್ಯತ್ಯಾಸಭರಿತ ಆಹಾರಧಾನ್ಯಗಳನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದರು. ಜಿಲ್ಲೆಯಲ್ಲಿ ಸಾವಿರಾರು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡದೆ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ದುರುಪಯೋಗಪಡಿಸಿರುವುದಕ್ಕೆ ಸಿಐಟಿಯು ಬಲವಾಗಿ ವಿರೋಧಿಸುತ್ತದೆ ಎಂದು ಅವರು ಹೇಳಿದರು.

ಸುಳ್ಯದಂತಹ ಕಡೆಗಳಲ್ಲಿ ಕಲ್ಯಾಣ ಮಂಡಳಿಯ ಹೆಸರನ್ನು ಮರೆಮಾಚಿ ಭಾರತೀಯ ಜನತಾ ಪಾರ್ಟಿಯ ಸ್ಟಿಕ್ಕರ್ ಅಂಟಿಸಿ ಬಿಜೆಪಿಯ ಕೊಡುಗೆ ಎಂದು ಪ್ರಚಾರ ಮಾಡಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಬಿಜೆಪಿಯ ಕಚೇರಿಗಳಲ್ಲಿ ಕಿಟ್ ವಿತರಣೆ ಮಾಡಿದ್ದು, ಭಜನಾ ಮಂದಿರ ಮತ್ತು ಇತರ ಧಾರ್ಮಿಕ ಕೇಂದ್ರಗಳಲ್ಲಿ ವಿತರಣೆ ಮಾಡಿದ್ದು ಹಿಂದೂಯೇತರ ಕಟ್ಟಡ ಕಾರ್ಮಿಕರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಟ್ಟಡ ಕಾರ್ಮಿಕರು ಕಿಟ್ ಪಡೆಯದಂತೆ ತಡೆ ಒಡ್ಡಲಾಗಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು. ತಾಲೂಕು ಪಂಚಾಯತ್ ಸದಸ್ಯರ ಹೆಸರಿನಲ್ಲಿ ಆಹಾರ ಕಿಟ್ ಅನ್ನು ವಿತರಿಸಲಾಗಿದೆ ಎಂಬ ರೀತಿಯು ಕಟ್ಟಡ ಕಾರ್ಮಿಕರಿಗೆ ಮೋಸ ಮಾಡುವ ಹುನ್ನಾರದಿಂದ ಕೂಡಿದೆ. ಮಾತ್ರವಲ್ಲದೆ, ಆಹಾರ ಧಾನ್ಯ ಕಿಟ್ ನೀಡುವ ಹೆಸರಿನಲ್ಲಿ ಕಟ್ಟಡ ಕಾರ್ಮಿಕರಲ್ಲದ ಜನರನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗೆ ನೋಂದಾಯಿಸುತ್ತಿರುವುದು ಕಂಡು ಬರುತ್ತಿದೆ. ಕಟ್ಟಡ ಕಾರ್ಮಿಕರಲ್ಲದ ಜನರು ಕಲ್ಯಾಣ ಮಂಡಳಿಯಿಂದ ಸವಲತ್ತು ಪಡೆಯುತ್ತಿರುವುದನ್ನು ತನಿಖೆಗೊಳಪಡಿಸಿ ಶಿಕ್ಷಸೆಗೊಳಪಡಿಸಬೇಕೆಂದು ಅವರು ಒತ್ತಾಯಿಸಿದರು. ನಿಜವಾದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಗೆ ನೀಡಬೇಕಾದಂತಹ ಆಹಾರಧಾನ್ಯದ ಕಿಟ್ ಮತ್ತು ರೂ.3,000/- ನೇರ ನಗದು, 2020ರ ರೂ.5,000 ಲಾಕ್‍ಡೌನ್ ಪರಿಹಾರ ಕೂಡಲೇ ನೀಡದಿದ್ದರೆ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದುಗಡೆ ಜುಲಾಯಿ ಕೊನೇ ವಾರದಲ್ಲಿ ಅನಿರ್ದಿಷ್ಟವಾದಿ ಹಗಲು ರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಲಾಗಿದ್ದು, ಎಲ್ಲಾ ಕಟ್ಟಡ ಕಾರ್ಮಿಕರು ಭಾಗವಹಿಸಬೇಕೆಂದು ಅವರು ವಿನಂತಿಸಿದರು.

2006 ರಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗುವಲ್ಲಿ 15 ವರ್ಷಗಳ ಕಾಲ ನಿರಂತರ ರಾಜ್ಯ ಮಟ್ಟದಲ್ಲಿ ಸಿಐಟಿಯು ನಡೆಸಿದ ಹೋರಾಟ, ಅದರಿಂದಾಗಿ ಲಕ್ಷಾಂತರ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗಿದ್ದು, ರಾಜ್ಯದ ಬಿಜೆಪಿ ಸರಕಾರ ಕಲ್ಯಾಣ ಮಂಡಳಿಯ ಹಣವನ್ನು ಅವ್ಯವಹಾರ ಮತ್ತು ಭ್ರಷ್ಟಾಚಾರ ಮುಖಾಂತರ ದುರುಪಯೋಗಪಡಿಸುತ್ತಿದೆ ಎಂದು ಫೆಡರೇಶನ್‍ನ ಜಿಲ್ಲಾ ಕಾರ್ಯದರ್ಶಿ ಯು.ಜಯಂತ ನಾಯ್ಕ್ ಆರೋಪಿಸಿ ಮಾತನಾಡಿದರು. ರೂ.10,000 ನೇರ ನಗದಾಗಿ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ವರ್ಗಾವಣೆ ಮಾಡಬೇಕೆಂದು ಬೇಡಿಕೆ ಇದ್ದರೂ ಆಹಾರಧಾನ್ಯದ ಕಿಟ್‍ಗಾಗಿ ಹಣ ಬಿಡುಗಡೆ ಮಾಡುವಲ್ಲಿ ಭ್ರಷ್ಟಾಚಾರ ಮಾಡುವ ಹುನ್ನಾರ ಅಡಗಿದೆ ಎಂದರು. ಗ್ರಾಮ ಪಂಚಾಯತ್ ಅಥವಾ ಸರಕಾರಿ ಕಚೇರಿಗಳ ಮುಖಾಂತರ ಕಾರ್ಮಿಕ ಇಲಾಖೆಯ ಮುಖಾಂತರ ನೀಡಬೇಕಾದ ಕಲ್ಯಾಣ ಮಂಡಳಿಯ ಆಹಾರಧಾನ್ಯ ಕಿಟ್ ಶಾಸಕರು ಮತ್ತು ರಾಜಕೀಯ ಮುಂದಾಳುಗಳ ಮುಖಾಂತರ ನೀಡುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬಾಕಿ ಇರುವ ಎಲ್ಲಾ ಸವಲತ್ತು ಪಡೆಯುವ ತನಕ ಸಿಐಟಿಯು ಸಂಘಟನೆ ವಿರಮಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. 10,000 ರೂ.ಲಾಕ್‍ಡೌನ್ ಪರಿಹಾರ ಘೋಷಿಸಬೇಕು, ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಸಹಾಯಧನ ನೀಡಬೇಕು, ಹೆರಿಗೆ ಸಹಾಯಧನವನ್ನು ಪುರುಷ ಫಲಾನುಭವಿಗಳ ಪತ್ನಿಯರಿಗೂ ವಿತರಿಸಬೇಕು, ಅಡುಗೆ ಅನಿಲ ಉಚಿತವಾಗಿ ವಿತರಿಸಬೇಕು, ವೈದ್ಯಕೀಯ ಪರಿಹಾರವನ್ನು ಶೇ.100 ರಷ್ಟು ಪಾವತಿ ಮಾಡಬೇಕೆಂಬ ಬೇಡಿಕೆಯ ಬಗ್ಗೆ ಅವರು ವಿವರಿಸಿದರು.

ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಪಾಂಡುರಂಗ, ಅಶೋಕ್ ಶ್ರೀಯಾನ್, ಉಮೇಶ್ ಶಕ್ತಿನಗರ, ಮನೋಜ್ ಉರ್ವಸ್ಟೋರ್, ಜನಾರ್ಧನ ಕುತ್ತಾರ್, ರೋಹಿದಾಸ್ ತೊಕ್ಕೊಟ್ಟು, ದಯಾನಂದ ಕೊಪ್ಪಲಕಾಡು, ಮೋಹನ್ ಜಲ್ಲಿಗುಡ್ಡೆ ಮುಂತಾದವರು ವಹಿಸಿದ್ದರು. ಪ್ರಾರಂಭದಲ್ಲಿ ಮಂಗಳೂರು ನಗರ ಅಧ್ಯಕ್ಷರಾದ ರವಿಚಂದ್ರ ಕೊಂಚಾಡಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೊನೆಯಲ್ಲಿ ದಿನೇಶ್ ಶೆಟ್ಟಿ ಜಪ್ಪಿನಮೊಗರು ಧನ್ಯವಾದ ನೀಡಿದರು.


Spread the love