ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿದ ಹಿಂದಿನ ಬಿಜೆಪಿ ಸರಕಾರದ ಅಕ್ರಮಗಳನ್ನು ಬಯಲಿಗೆಳೆಯಿರಿ – ಸುನಿಲ್ ಕುಮಾರ್ ಬಜಾಲ್

Spread the love

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿದ ಹಿಂದಿನ ಬಿಜೆಪಿ ಸರಕಾರದ ಅಕ್ರಮಗಳನ್ನು ಬಯಲಿಗೆಳೆಯಿರಿ – ಸುನಿಲ್ ಕುಮಾರ್ ಬಜಾಲ್

ಕಟ್ಟಡ ಕಾರ್ಮಿಕರ ಉತ್ತಮ ಬದುಕಿಗಾಗಿ ಕಳೆದ 16 ವರ್ಷಗಳ ಹಿಂದೆ ರಚನೆಗೊಂಡ ಕಲ್ಯಾಣ ಮಂಡಳಿಯ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ ರೀತಿಯ ಅವೈಜ್ಞಾನಿಕ ಯೋಜನೆಗಳ ಹೆಸರಿನಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಗುಳುಂ ನಡೆಸಿದ್ದು, ಈ ಎಲ್ಲಾ ಹಗರಣಗಳನ್ನು ಸೂಕ್ತ ತನಿಖೆ ನಡೆಸುವ ಮೂಲಕ ಬಿಜೆಪಿ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯಬೇಕು. ಮಾತ್ರವಲ್ಲದೆ ಕಟ್ಟಡ ಕಾರ್ಮಿಕರಿಗೆ ಮೀಸಲಾದ ನಿಧಿಯನ್ನು ಸಂಪೂರ್ಣವಾಗಿ ಅವರ ಶ್ರೇಯೋಭಿವೃದ್ಧಿಗಾಗಿ ವಿನಿಯೋಗಿಸಬೇಕೆಂದು CITU ದ. ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಅವರು ಕಳೆದ 3 ದಿನಗಳಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಟ್ಟಡ ಕಾರ್ಮಿಕರು ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಕಟ್ಟಡ ಕಾರ್ಮಿಕರ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ ಹಾಗೂ ಹಾಜರಾತಿ ಪಟ್ಟಿ ನೀಡಬೇಕೆಂಬ ಮಂಡಳಿಯ ತೀರ್ಮಾನ ತೀರಾ ಅವೈಜ್ಞಾನಿಕವಾಗಿದೆ. ಕಟ್ಟಡ ಕಾರ್ಮಿಕರಲ್ಲಿ ಶೇಕಡಾ 90ರಷ್ಟು ಕಾರ್ಮಿಕರು ತೀರಾ ಸಣ್ಣ ಪ್ರಮಾಣದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಅವರಿಗೆ ವೇತನ ಚೀಟಿಯಾಗಲೀ,ಹಾಜರಾತಿ ಪಟ್ಟಿಯಾಗಲೀ ಯಾರು ನೀಡುತ್ತಾರೆ ಎಂದು ಪ್ರಶ್ನಿಸಿದ ಅವರು, ಸರಕಾರ ಹಾಗೂ ಮಂಡಳಿಯ ತೀರಾ ಬೇಜವಾಬ್ದಾರಿ ವರ್ತನೆಯಿಂದಾಗಿ ಬೋಗಸ್ ಕಾರ್ಡ್‌ಗಳು ಮಿತಿ ಮಿರುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಬದಲು ಪ್ರಾಮಾಣಿಕವಾಗಿ ವರ್ಷಗಟ್ಟಲೆಯಿಂದ ದುಡಿಯುತ್ತಿರುವ ಕಟ್ಟಡ ಕಾರ್ಮಿಕರಿಗೆ ತೊಂದರೆ ಕೊಡುವುದು ತೀರಾ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ, ಈ ಹಿಂದಿನ ಬಿಜೆಪಿ ಸರ್ಕಾರವು ಶಿಶುವಿಹಾರ ಕೇಂದ್ರ, ಮೊಬೈಲ್ ಕ್ಲಿನಿಕ್, ಬಸ್ ಪಾಸ್ ಮುಂತಾದ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿ ಕೋಟ್ಯಂತರ ಹಣವನ್ನು ನುಂಗಿ ಹಾಕಿದೆ. ಮಾತ್ರವಲ್ಲದೆ ವಿವಿಧ ಸವಲತ್ತುಗಳಿಗಾಗಿ ಹಾಕಿದ ಅರ್ಜಿಗಳನ್ನು ವಿನಃ ಕಾರಣ ತಿರಸ್ಕರಿಸಿ ಅನ್ಯಾಯವೆಸಗಳಾಗಿದೆ. ಕೇವಲ ಪಿಂಚಣಿ ಯೋಜನೆಗಾಗಿ ಜೀವಿತಾವಧಿಯ ಪ್ರಮಾಣ ಪತ್ರಕ್ಕಾಗಿ ಕಟ್ಟಡ ಕಾರ್ಮಿಕರನ್ನು ಅಲೆದಾಡಿಸುವ ಸರ್ಕಾರದ ನೀತಿ ಖಂಡನೀಯವಾಗಿದೆ ಎಂದು ಹೇಳಿದರು

ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನ ಮೋಗರುರವರು ಕಟ್ಟಡ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುತ್ತಾ ಸರಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ತೀವ್ರವಾಗಿ ಟೀಕಿಸಿದರು.

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ, ಜಯಂತ ನಾಯಕ್, ದಿನೇಶ್ ಶೆಟ್ಟಿ, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ದಿನೇಶ್ ಇರುವೈಲ್, ವಿಶ್ವನಾಥ ಸುಳ್ಯ, ಪ್ರಸಾದ್ ಪೆಲ್ತಾಡ್ಕ, ಲೋಕೇಶ್ ಅಳಪೆ, ಯಶೋಧಾ, ಪಾಂಡುರಂಗ, ಶಂಕರ ಮೂಡಬಿದ್ರಿ, ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್ ಮುಂತಾದವರು ಭಾಗವಹಿಸಿದ್ದರು.


Spread the love