ಕಠಿಣ ಪರಿಶ್ರಮ ಇದ್ದಲ್ಲಿ ಉತ್ತಮ ಫಲಿತಾಂಶ ಸಾಧ್ಯ – ವೆರೋನಿಕಾ ಕರ್ನೆಲಿಯೊ

Spread the love

ಕಠಿಣ ಪರಿಶ್ರಮ ಇದ್ದಲ್ಲಿ ಉತ್ತಮ ಫಲಿತಾಂಶ ಸಾಧ್ಯ – ವೆರೋನಿಕಾ ಕರ್ನೆಲಿಯೊ

ಉಡುಪಿ: ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಪಡೆದ ಸಹಾಯವನ್ನು ಉದ್ಯೋಗ ದೊರೆತ ಬಳಿಕ ಇನ್ನೊಂದು ಬಡ ವಿದ್ಯಾರ್ಥಿಯ ಕಲಿಕೆ ನೆರವಾಗುವ ಮೂಲಕ ಸಮಾಜದ ಋಣವನ್ನು ತೀರಿಸಬೇಕು ಈ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬಹುದು ಎಂದು ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಹೇಳಿದರು.

ಅವರು ಭಾನುವಾರ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ದಿವಂಗತ ತೆರೆಸಾ ಕರ್ನೆಲಿಯೋ ಹಾಗೂ ರೋಸಿ ರಸ್ಕಿನ್ಹಾ ಇವರ ಸ್ಮರಣಾರ್ಥ ಉನ್ನತ ಶಿಕ್ಷಣ ಪಡೆಯುವ ಅರ್ಹ ಬಡ ವಿದ್ಯಾರ್ಥಿಗಳಿಗೆ ನೀಡಲಾದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ನಿರ್ದಿಷ್ಟ ಗುರು ಹೊಂದಿರಬೇಕು ಈ ಗುರಿ ಸಾಧನೆಯ ಯಶಸ್ಸಿನ ಕನಸನ್ನು ಸದಾ ಕಾಣುತ್ತ ಅದಕ್ಕೆ ಅಡ್ಡಿಯಾಗುವ ಆರ್ಥಿಕ, ಸಾಮಾಜಿಕ ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗುವುದರೊಂದಿಗೆ ಜೀವನದಲ್ಲಿ ಯಶಸ್ಸು ಕಾಣಬೇಕು. ವಿದ್ಯಾರ್ಥಿಗಳು ಸಾಧನೆಯನ್ನು ತೋರಲು ಕಠಿಣ ಪರಿಶ್ರಮದೊಂದಿಗೆ ಉತ್ತಮ ಪ್ರಯತ್ನ ಮಾಡಿದಾಗ ಅದರ ಫಲಿತಾಂಶ ನಮಗೆ ಸಿಕ್ಕೆ ಸಿಗುತ್ತದೆ ಎಂದರು. ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೇರಿ ಡಿ’ಸೋಜಾ ಮಾತನಾಡಿ ಸಮುದಾಯದಲ್ಲಿನ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಕಾರ್ಯವನ್ನು ಕಥೊಲಿಕ್ ಸಭಾ ಹಲವಾರು ವರ್ಷಗಳಿಂದ ಮಾಡುತ್ತಿದ್ದು, ವಿದ್ಯಾರ್ಥಿಗಳು ಇಲ್ಲಿ ಪಡೆದ ನೆರವನ್ನು ಮೆರೆಯದೆ ಉತ್ತಮ ಅಂಕ ಗಳಿಸಿ ಮುಂದೆ ಸಮಾಜದಲ್ಲಿ ಉನ್ನತ ಹುದ್ದೆ ಪಡೆದು ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ದಿವಂಗತ ತೆರೆಸಾ ಕರ್ನೆಲಿಯೋ ಹಾಗೂ ರೋಸಿ ರಸ್ಕಿನ್ಹಾ ಇವರ ಸ್ಮರಣಾರ್ಥ ಹಾಗೂ ಇತರ ದಾನಿಗಳ ನೆರವಿನೊಂದಿಗೆ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ 32 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ರೂ. 3 ಲಕ್ಷಕ್ಕೂ ಅಧಿಕ ಮೊತ್ತದ ಆರ್ಥಿಕ ನೆರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಸಿ ರಸ್ಕಿನ್ಹಾ ಕುಟುಂಬದ ಲಿಗೋರಿ ಡಿ’ಸೋಜಾ, ಕಥೊಲಿಕ್ ಸಭಾದ ಪ್ರಧಾನ ಕಾರ್ಯದರ್ಶಿ ಗ್ರೆಗರಿ ಪಿಕೆ ಡಿ’ಸೋಜಾ, ಕಾರ್ಯ್ಕಕ್ರಮದ ಸಂಚಾಲಕರಾದ ಡಾ| ಜೆರಾಲ್ಡ್ ಪಿಂಟೊ, ಕಥೊಲಿಕ್ ಸಭಾದ ಮಾಜಿ ಅಧ್ಯಕ್ಷರುಗಳಾದ ವಲೇರಿಯನ್ ಫೆರ್ನಾಂಡಿಸ್, ಅಲ್ಫೋನ್ಸ್ ಡಿ’ಕೊಸ್ತಾ, ವಾಲ್ಟರ್ ಸಿರಿಲ್ ಪಿಂಟೊ, ಆಲ್ವಿನ್ ಕ್ವಾಡ್ರಸ್, ವಲಯ ಸಮಿತಿಗಳ ಪದಾಧಿಕಾರಿಗಳೂ ಉಪಸ್ಥಿತರಿದ್ದರು.


Spread the love