ಕಡಬ: ಆನೆ ದಾಳಿಗೆ ಯುವತಿ ಸೇರಿ ಇಬ್ಬರು ಸಾವು

Spread the love

ಕಡಬ: ಆನೆ ದಾಳಿಗೆ ಯುವತಿ ಸೇರಿ ಇಬ್ಬರು ಸಾವು
 
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ಆನೆ ದಾಳಿಯಿಂದ ಒಬ್ಬ ಯುವತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿಗಳಾದ ರಂಜಿತಾ (21) ಹಾಗೂ ರಮೇಶ್ ರೈ ನೈಲ (55) ಮೃತಪಟ್ಟವರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ‌.

ರಂಜಿತಾ ಅವರು ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿ. ಅವರು ಬೆಳಿಗ್ಗೆ ಸೊಸೈಟಿಗೆ ಕಾಡು ದಾರಿಯಲ್ಲಿ ಹೋಗುತ್ತಿದ್ದ ವೇಳೆ ನೈಲದಲ್ಲಿ ಆನೆ ದಾಳಿ ನಡೆಸಿತ್ತು.

ಆನೆಯನ್ನು ಕಂಡು ರಂಜಿತಾ ಅವರು ಬೊಬ್ಬೆ ಹೊಡೆದಿದ್ದರು. ಅವರನ್ನು ರಕ್ಷಿಸಲು ಧಾವಿಸಿದ ರಮೇಶ್ ಅವರ ಮೇಲೂ ಆನೆ ದಾಳಿ ನಡೆಸಿತ್ತು. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಮೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಿತಾ ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ‌.

ಈ ಪರಿಸರದಲ್ಲಿ ಅನೇಕ ತಿಂಗಳುಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಮನುಷ್ಯರ ಮೇಲೆ ದಾಳಿ ನಡೆಸಿದ್ದು ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆ.


Spread the love