
ಕಡಬ: ಕಾಡಾನೆ ಹಿಡಿದು ತೆರಳುತ್ತಿದ್ದ ಅರಣ್ಯ ಅಧಿಕಾರಿ, ಪೊಲೀಸರಿಗೆ ಕಿಡಿಗೇಡಿಗಳಿಂದ ಹಲ್ಲೆ
ಕಡಬ: ಕಾಡಾನೆಯೊಂದನ್ನು ಸೆರೆ ಹಿಡಿದ ನಂತರ ಉಳಿದ ಆನೆಗಳನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಿಡಿಗೇಡಿಗಳು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಜೀಪ್ ಗೆ ಹಾನಿಗೈದಿರುವ ಘಟನೆ ವರದಿಯಾಗಿದೆ.
ನರಹಂತಕ ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಿದ ನಂತರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದು, ಇದಕ್ಕೊಪ್ಪದ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಕಿಡಿಗೇಡಿಗಳು ಇಲಾಖೆಯ ವಾಹನಗಳಿಗೆ ಹಾನಿ ಉಂಟುಮಾಡಿ, ಅಧಿಕಾರಿಗಳಿಗೆ ಹಲ್ಲೆಗೈದಿದ್ದು, ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆ ಬಳಿಯ ಮುಜೂರು, ಮಂಡೆಕರ ಭಾಗದಲ್ಲಿ ನಾಲ್ಕು ಕಾಡಾನೆ ಇದೆ ಎಂಬ ಮಾಹಿತಿಯಂತೆ ಕಾರ್ಯಾಚರಣೆ ತಂಡ ಪತ್ತೆ ಕಾರ್ಯ ನಡೆಸಿದ್ದರು.
ಸುಂಕದಕಟ್ಟೆ-ಕೊಂಬಾರು ರಸ್ತೆಯ ಬಳಿ ಕಾಡಾನೆ ಇರುವುದನ್ನು ತಂಡ ಪತ್ತೆ ಹಚ್ಚಿ ವ್ಯವಸ್ಥಿತವಾಗಿ ಕಾಡಾನೆ ಇರುವಲ್ಲಿ ತೆರಳಿ ವೈದ್ಯರು ಗನ್ ಮೂಲಕ ಅರೆವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ಆನೆಯ ಪ್ರಜ್ಞೆ ಹೋದ ಬಳಿಕ ಕಾಡಾನೆಯನ್ನು ಕಟ್ಟಿ ಹಾಕುವ ಕಾರ್ಯ ನಡೆಸಲಾಗಿದೆ.
ಸೋಮವಾರ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾಗಿದ್ದರು. ಬಳಿಕ ಕಾಡಾನೆ ಸೆರೆಗೆ ಐದು ಸಾಕಾನೆಗಳನ್ನು ತರಿಸಲಾಗಿ, ಮಂಗಳವಾರದಿಂದ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು.