ಕಡಬ :40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯ ಬಂಧನ

Spread the love

ಕಡಬ :40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯ ಬಂಧನ

ಕಡಬ: ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ . ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕಾಡೂರು ಕೊಡಿಗೆ ಗ್ರಾಮದ ಅಬ್ಬುಬಕ್ಕರ್ (63) ಬಂಧಿತ ಆರೋಪಿ.

1984 ರಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀಗಂಧ ಹಾಗೂ ವಾಹನ ಕಳವು ಮಾಡಿದ ಬಗ್ಗೆ ಆರೋಪಿಯ ವಿರುದ್ದ ಅರಣ್ಯ ಕಾಯ್ದೆ ಹಾಗೂ ಕಳ್ಳತನ ಪ್ರಕರಣ ದಾಖಲಾಗಿತ್ತು. ಸುಮಾರು 38 ವರ್ಷಗಳಷು ಹಳೇಯ ಈ ಕೇಸಿನಲ್ಲಿ ಆರೋಪಿ ಪತ್ತೆಯಾಗದ ಹಿನ್ನಲೆಯಲ್ಲಿ ನ್ಯಾಯಾಲಯವು ದೀರ್ಘ ಕಾಲದಿಂದ ಬಾಕಿ ಇರುವ ಪ್ರಕರಣ ಎಂದು ಪರಿಗಣಿಸಿ ಕಡತವನ್ನು ಮುಕ್ತಾಯಗೊಳಿಸಿತ್ತು.

ಆದರೇ ಕಡಬ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಶೋಧ ಕಾರ್ಯಾಚರಣೆ ನಡೆಸಿದ ತಂಡದ ವಿಶೇಷ ಪ್ರಯತ್ನದಿಂದ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯವು ಈ ಪ್ರಕರಣದ ಮರು ವಿಚಾರಣೆ ನಡೆಸಲಿದ್ದು ಇದಕ್ಕೆ ಕಾರಣೀಭೂತರಾದ ಪೊಲೀಸ್ ಇಲಾಖೆಯ ಸಿಬಂದಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದೆಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಆರೋಪಿಯನ್ನು ಮೂಡಿಗೆರೆ ತಾಲೂಕು ಬಾಳೂರು ಎಂಬಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕಡಬ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಾದ ರಾಜು ನಾಯಕ್, ಭವಿತ್ ರಾಜ್ ಸಿಬ್ಬಂದಿ ಸಿರಾಜುದ್ದೀನ್ ಭಾಗಿಯಾಗಿದ್ದರು. ಆರೋಪಿಯ ವಿರುದ್ದ ರಾಣೇಬೆನ್ನೂರು ಹಾಗೂ ಮೈಸೂರು ವಿವಿ ಪುರಂ ಠಾಣೆಗಳಲ್ಲಿ ಇನ್ನೆರಡು ಪ್ರಕರಣಗಳಿದ್ದೂ ವಾರೆಂಟ್ ಜಾರಿಯಾಗಿದೆ.


Spread the love