ಕಡಲ‌ ಮಕ್ಕಳನ್ನು ರೋಡಿಗಿಳಿಯಲು ಬಿಡಬೇಡಿ: ಎಸ್. ಮದನ್ ಕುಮಾರ್ ಎಚ್ಚರಿಕೆ

Spread the love

ಕಡಲ‌ ಮಕ್ಕಳನ್ನು ರೋಡಿಗಿಳಿಯಲು ಬಿಡಬೇಡಿ: ಎಸ್. ಮದನ್ ಕುಮಾರ್ ಎಚ್ಚರಿಕೆ

ಕುಂದಾಪುರ: ಪ್ರಕೃತಿ ವಿಕೋಪದಿಂದಾಗಿ 40ಕ್ಕೂ ಮಿಕ್ಕಿ ದೋಣಿಗಳು, ಅದರ ಸೊತ್ತುಗಳು ಸೇರಿದಂತೆ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ. ರಣಭೀಕರ ಮಳೆಯಿಂದಾಗಿ ನಿಲ್ಲಿಸಿದ ದೋಣಿಗಳು ಕೊಚ್ಚಿಕೊಂಡು ಹೋಗುವ ಸಂದರ್ಭದಲ್ಲಿ ಮೀನುಗಾರರು ತಮ್ಮ ತಮ್ಮ ದೋಣಿಗಳನ್ನು ಉಳಿಸಿಕೊಳ್ಳಲು ಬೆಳಗ್ಗಿನಿಂದ ಸಂಜೆಯ ತನಕ ಹೋರಾಟ ಮಾಡಿದರೂ ಕೂಡ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಏನಾಗಿದೆ ಎಂದು ಕೇಳುವ ಕನಿಷ್ಠ ಸೌಜನ್ಯವೂ ತೋರಿಲ್ಲ. ಮೀನುಗಾರಿಕಾ ಸಚಿವರು ಹಾಗೂ ನಮ್ಮ ಜಿಲ್ಲೆಯವರೇ ಆದ ಇಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವರು ಪರಿಹಾರ ಕೊಡುವುದ ಬಿಡಿ. ಇದುವರೆಗೂ ಸಾಂತ್ವಾನ ಹೇಳಲು ಬಂದಿಲ್ಲ. ಮೀನುಗಾರರ ಬಗ್ಗೆ ಯಾಕೆ ಇಷ್ಟೊಂದು ಅಸಡ್ಡೆ ಎನ್ನುವುದು ತಿಳಿಯುತ್ತಿಲ್ಲ. ಆದರೆ ಒಂದಂತು ಗಮನಿಸಬೇಕು. ಯಾವ ಕಾರಣಕ್ಕೂ ಕಡಲ ಮಕ್ಕಳನ್ನು ರೋಡಿಗೆ ಬರಲು ಬಿಡಬೇಡಿ. ಕಡಲ ಮಕ್ಕಳು ರೋಡಿಗೆ ಬಂದರೆ ಹಿಂದೆ ಏನೆಲ್ಲಾ ಆಗಿದೆ ಎಂದು ಹಿಂದಿನ ಚರಿತ್ರೆಗಳನ್ನು ತೆಗೆದು ನೋಡಿ ಎಂದು ಮೀನುಗಾರ ಮುಖಂಡ ಎಸ್. ಮದನಕುಮಾರ್ ಉಪ್ಪುಂದ ಎಚ್ಚರಿಕೆ ನೀಡಿದ್ದಾರೆ.

ಅಗಸ್ಟ್ 2ರಂದು ಶಿರೂರು ಭಾಗದಲ್ಲಿ ನಡೆದ ಪ್ರಾಕೃತಿಕ ವಿಕೋಪದಿಂದಾಗಿ ಮೀನುಗಾರರು ಸಾಕಷ್ಟು ನಷ್ಟ ಅನುಭವಿಸಿದರೂ ಅವರಿಗೆ ಸ್ಪಂದಿಸದೇ ಮೀನುಗಾರ ಸಮುದಾಯವನ್ನು ಕಡೆಗಣಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಡೆಯನ್ನು ಖಂಡಿಸಿ ಉಪ್ಪುಂದ ಭಾಗದ ಮೀನುಗಾರರು ಶುಕ್ರವಾರ ಬೈಂದೂರು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೀನುಗಾರರು ವೈಯಕ್ತಿಯವಾಗಿ ಬೇರೆ ಬೇರೆ ಪಕ್ಷ, ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಮೀನುಗಾರರ ಸಮಸ್ಯೆ ಎಂದು ಬಂದಾಗ ಎಲ್ಲವನ್ನೂ ಮೀರಿ ಒಗ್ಗಟ್ಟಾಗುತ್ತೇವೆ. ನಮ್ಮ ಸಹನೆಯನ್ನು ಪರೀಕ್ಷಿಸುವ ಕೆಲಸ ಯಾರೊಬ್ಬರೂ ಮಾಡುವುದು ಬೇಡ. ಜಿಲ್ಲೆಯಲ್ಲಿ ಮೀನುಗಾರರು ಅಷ್ಟೇ ಅಲ್ಲದೇ ಮೀನುಗಾರೇತರರು ಸಾವಿರಾರು ಸಂಖ್ಯೆಯಲ್ಲಿ ಇದೇ ಉದ್ಯಮವನ್ನು ಅವಲಂಬಿಸಿಕೊಂಡಿದ್ದಾರೆ. ಶಿರೂರು ಭಾಗದಲ್ಲಿ ನಡೆದ ನಷ್ಟಕ್ಕೆ ಸರಿಯಾದ ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದರೇ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಮೀನುಗಾರ ಮುಖಂಡರಾದ ವೆಂಕಟರಣ ಖಾರ್ವಿ ಮಾತನಾಡಿ, ಮೀನುಗಾರರ ಸಮಸ್ಯೆ ಅರಣ್ಯರೋದನವಾಗುತ್ತಿದೆ. ಪ್ರತಿಭಾರಿಯೂ ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ ಸೇರಿ ಭರವಸೆ ನೀಡುತ್ತಿದ್ದಾರೆ ಹೊರತು ಸಮಸ್ಯೆ ಪರಿಹಾರದ ಬಗ್ಗೆ ಯೋಚಿಸುತ್ತಿಲ್ಲ. ಭಾರಿ ನಷ್ಟ ಉಂಟಾದ ಸಂದರ್ಭದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ನೂರಾರು ಕಾನೂನು ತೊಡಕುಗಳನ್ನು ತಂದಿಟ್ಟು ಪರಿಹಾರ ಸಿಗದಂತೆ ಮಾಡಿದ ಸಂದರ್ಭವೂ ಇದೆ. ಶಿರೂರು ಘಟನೆಯ ಸಂದರ್ಭದಲ್ಲಿ ಯಾರೊಬ್ಬರೂ ಸ್ಪಂದಿಸಿಲ್ಲ. ಪಕ್ಕದ ಭಟ್ಕಳಕ್ಕೆ ಬರುವ ಮುಖ್ಯಮಂತ್ರಿಗಳು, ಶಿರೂರು ಭಾಗದಲ್ಲಿ ಆದ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ. ಮೀನುಗಾರರನ್ನು ಇಷ್ಟು ಹಗುರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೈಂದೂರು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಅವರ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿ ಕಂದಾಯ ಇಲಾಖೆಯಿಂದ ಸಾಧ್ಯವಿರುವಷ್ಟು ನಷ್ಟ ಭರಿಸಲು ಕ್ರಮಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮೀನುಗಾರ ಮುಖಂಡರಾದ ಜಗನ್ನಾಥ, ಕುಮಾರ ಖಾರ್ವಿ, ತಿಮ್ಮಪ್ಪ ಖಾರ್ವಿ,  ನಾಗರಾಜ ಖಾರ್ವಿ, ಕೆ. ನಾಗೇಶ್ ಖಾರ್ವಿ, ಬಿ. ದಾಮೋದರ ಖಾರ್ವಿ, ಬಿ. ಭಾಸ್ಕರ ಖಾರ್ವಿ, ಡಿ. ರಾಮಚಂದ್ರ ಖಾರ್ವಿ, ನಾಗೇಶ ಖಾರ್ವಿ ಸೇರಿದಂತೆ ಒಂದೂವರೆ ಸಾವಿರಕ್ಕೂ ಅಧಿಕ ಮೀನುಗಾರರು ಭಾಗವಹಿಸಿದ್ದರು.


Spread the love

Leave a Reply

Please enter your comment!
Please enter your name here