ಕಡಿಮೆ‌ ಅಂಕಕ್ಕೆ ಮನನೊಂದು ಸೇತುವೆಯಿಂದ‌ ನದಿಗೆ ಜಿಗಿದ ವಿದ್ಯಾರ್ಥಿ

Spread the love

ಕಡಿಮೆ‌ ಅಂಕಕ್ಕೆ ಮನನೊಂದು ಸೇತುವೆಯಿಂದ‌ ನದಿಗೆ ಜಿಗಿದ ವಿದ್ಯಾರ್ಥಿ

  • ನೀಟ್ ಪರೀಕ್ಷೆ ಅಂಕವೇ ಯುವಕನ ಆತುರದ ನಿರ್ಧಾರಕ್ಕೆ ಕಾರಣವಾಯಿತೇ?

 
ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದರಿಂದ ಮನನೊಂದ ವಿದ್ಯಾರ್ಥಿಯೋರ್ವ ಸೇತುವೆ ಮೇಲಿನಿಂದ ತುಂಬಿ ಹರಿಯುತ್ತಿರುವ ನದಿಗೆ ಹಾರಿಕೊಂಡಿರುವ ಆಘಾತಕಾರಿ ಘಟನೆ ಇಲ್ಲಿನ ಸಂಗಮ್ ಸಮೀಪದಲ್ಲಿ ನಡೆದಿದೆ.

ನದಿಗೆ ಹಾರಿ ನಾಪತ್ತೆಯಾಗಿರುವ ಯುವಕನನ್ನು ಕುಂದಾಪುರದ ವಡೇರಹೋಬಳಿ ಜೆಎಲ್‌ಬಿ ರಸ್ತೆಯ ನಿವಾಸಿ ರಘುವೀರ್ ಶೆಟ್ಟಿ ಎನ್ನುವವರ ಪುತ್ರ ಸಾಯೀಶ್ ಶೆಟ್ಟಿ (18) ಎಂದು ಗುರುತಿಸಲಾಗಿದೆ.

ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಸಾಯೀಶ್ ಶೆಟ್ಟಿ ಸೈಕಲ್‌ನಲ್ಲಿ ಹೇರಿಕುದ್ರು ಸೇತುವೆಯ ಮೇಲೆ ಬಂದು, ಬಳಿಕ ಸೈಕಲ್ ಹಾಗೂ ಮೊಬೈಲ್ ಅನ್ನು ಮೇಲೆ ಇಟ್ಟು ನದಿಗೆ ಹಾರಿದ್ದಾರೆ. ಇದನ್ನು ದೂರದಿಂದ ಗಮನಿಸಿದ್ದ ಸ್ಥಳೀಯ ಕೆಲವರು ಅಲ್ಲಿಗೆ ಬಂದು ಅವರನ್ನು ರಕ್ಷಿಸುವ ಮೊದಲೇ ಅವರು ನದಿಗೆ ಹಾರಿದ್ದಾರೆ ಎನ್ನಲಾಗುತ್ತಿದೆ.

ಶಿವಮೊಗ್ಗದ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸದ ವೇಳೆ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ ಸಾಯೀಶ್ ಶೆಟ್ಟಿ, ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅವರು, ಇಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸೈಬರ್‌ ಕೇಂದ್ರಕ್ಕೆ ತೆರಳಿ ಫಲಿತಾಂಶ ನೋಡಿದ್ದಾರೆ ಎನ್ನಲಾಗುತ್ತಿದೆ. ಪರೀಕ್ಷೆಯಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಅವರು ನದಿಗೆ ಹಾರಿರಬಹುದು ಎನ್ನುವ ಶಂಕೆ ಇದೆ.

ಸೇತುವೆ ಮೇಲಿಂದ ಯುವಕನೊರ್ವ ನದಿಗೆ ಹಾರುತ್ತಿರುವುದನ್ನು ಗಮನಿಸಿದ ವಾಹನ ಸವಾರರು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಮುಳುಗು ತಜ್ಞರು ಹಾಗೂ ಸ್ಥಳೀಯರ ಸಹಾಯದಿಂದ ನಾಪತ್ತೆಯಾಗಿರುವ ವಿದ್ಯಾರ್ಥಿಯ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಬುಧವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದ ನದಿ ನೀರಿನ ಹರಿವು ಹೆಚ್ಚಿದ್ದು, ನೀರಿನ ಮಟ್ಟ ಜಾಸ್ತಿ ಇರುವುದರಿಂದ ಹಾಗೂ ಮಳೆ ಸುರಿಯುತ್ತಿರುವುದರಿಂದ ಶೋಧ ಕಾರ್ಯಾಚರಣೆಗೆ ತೊಡಕಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್.ಕೆ ಭೇಟಿ ನೀಡಿದ್ದಾರೆ. ಕುಂದಾಪುರ ಠಾಣೆಯ ಎಸ್‌ಐ ಸದಾಶಿವ ಗವರೋಜಿ ಸ್ಥಳದಲ್ಲಿದ್ದು, ಶೋಧ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.


Spread the love

Leave a Reply

Please enter your comment!
Please enter your name here