ಕಡಿಯಾಳಿಯಲ್ಲಿ ನಡೆದಿದ್ದು ಪವಾಡವಲ್ಲದೆ ಮತ್ತೇನು ?

Spread the love

ಕಡಿಯಾಳಿಯಲ್ಲಿ ನಡೆದಿದ್ದು ಪವಾಡವಲ್ಲದೆ ಮತ್ತೇನು ?

ಮಹಿಷ ಮರ್ದಿನಿ ದೇವಾಲಯ ಮೈದಾಳಿ ನಿಲ್ಲಬೇಕಿದ್ದರೆ ಕಡಿಯಾಳಿಯ ಊರು ಕನಿಷ್ಠ ಒಂದು ತಿಂಗಳು ಇದಕ್ಕಾಗಿ ತನ್ನ ನಿದ್ದೆ ಸುಟ್ಟುಕೊಂಡಿದೆ. ಹೌದು ಕಳೆದ ಒಂದು ತಿಂಗಳಿನಿಂದ ಕಡಿಯಾಳಿ ಮಲಗಿಲ್ಲ. ಪ್ರತಿನಿತ್ಯ ಸಾವಿರ ಸಾವಿರ ಭಕ್ತರ ಧಾರೆ ದೇಗುಲಕ್ಕೆ ಹರಿದು ಬಂದರೂ ಅಲ್ಲಿನ ಗ್ರಾಮದ ಸ್ವಯಂಸೇವಕರು ಮಾತ್ರ ತೇಲುಗಣ್ಣಿನಲ್ಲಿ ತೇಲಾಡುತ್ತಲೇ ದುಡಿಯುತ್ತಿದ್ದಾರೆ. ತಾಯ ವೈಭವಕ್ಕೆ ಎಳ್ಳಷ್ಟೂ ಕುಂದಾಗಬಾರದು ಎಂಬ ಭಕ್ತಿ ಅವರದಾದರೆ, ಜನ್ಮಜನ್ಮಾಂತರದ ಮಾತೃ ಋಣವನ್ನು ಮಕ್ಕಳು ಈ ಜನ್ಮದಲ್ಲೇ ಕಳೆದು ಪುಣ್ಯ ಭಾಜನರಾಗಲಿ ಎಂಬ ಸಂಕಲ್ಪ ತಾಯಿ ಮಹಿಷಮರ್ದಿನಿಯದ್ದು.

ಜೂನ್ ಒಂದನೇ ತಾರೀಕು ದೇಗುಲದ ಸುತ್ತು ಪೌಳಿ ಸಮರ್ಪಣೆಗೆ ಮುಖ್ಯಮಂತ್ರಿ ಆಗಮಿಸಿದ್ದರು. ಅದರ ಹಿಂದಿನ ರಾತ್ರಿ ಎರಡು ಗಂಟೆಯವರೆಗೂ ತಾಮ್ರದ ಮುಚ್ಚಿಗೆ ಹಾಸುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿತ್ತು. ಆದರೆ ಇನ್ನೂ 25% ಕೆಲಸ ಬಾಕಿ ಇದ್ದಿದ್ದನ್ನು ನಾನು ಕಂಡಿದ್ದೆ. ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಮರಮಟ್ಟುಗಳು ಕಾಂಕ್ರೀಟ್ ಯಂತ್ರಗಳು 10 ಲೋಡಿಗೆ ಆಗುವಷ್ಟು ಸರಕುಗಳು ಅಡ್ಡಾದಿಡ್ಡಿ ಬಿದ್ದಿದ್ದವು. ಶುಚಿತ್ವದ ಕೆಲಸ ಭರದಿಂದ ಸಾಗುತ್ತಿತ್ತು. ಮುಂಜಾನೆಯವರೆಗೂ ಅಕ್ಕಪಕ್ಕದ ಮನೆಯವರಿಗೆ ತಗಡು ಬಡಿಯುವ ಸದ್ದು ಕೇಳಿದೆ. ಬೆಳಗಿನ ಸೂರ್ಯನ ರಶ್ಮಿ ಕಡಿಯಾಳಿಯ ಶಿಖರಕ್ಕೆ ಸೋಕುತ್ತಿದ್ದಂತೆ ಕಂಡವರೆಲ್ಲಾ ಕಣ್ಣನ್ನೇ ನಂಬದಂತಾದರು. ಸಂಪೂರ್ಣ ನಿರ್ಮಾಣಗೊಂಡು ರಾಜಗಾಂಭೀರ್ಯದಿಂದ ಕಂಗೊಳಿಸುವ ದ್ವಿತಲದ ಸುತ್ತು ಪೌಳಿ..ತೊಳೆದಿಟ್ಟು ಶುಭ್ರವಾದ ಪ್ರಾಂಗಣ , ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸರ್ವಸಿದ್ಧತೆ. ನಿದ್ದೆ ಹಸಿವು ದಣಿವುಗಳನ್ನೆಲ್ಲಾ ಮಿಂದ ನೀರಲ್ಲಿ ಹರಿಸಿ, ಎಂದೂ ಬತ್ತದ ನವೋತ್ಸಾಹದಿಂದ ಎದ್ದುಬಂದು ಭಕ್ತರ ಸೇವೆಗೆ ಸಿದ್ಧವಾದ ಕಾರ್ಯಕರ್ತರ ದಂಡು… ಇದು ಪವಾಡವಲ್ಲದೆ ಮತ್ತೇನು ?

ಕಡಿಯಾಳಿಯಲ್ಲಿ ನಿರ್ಮಾಣವಾಗಿರುವುದು ಆಡಂಬರವಿಲ್ಲದ ಆಯಪ್ರಮಾಣದ ಅಚ್ಚುಕಟ್ಟಾದ ಆಲಯ. ಮಲೆನಾಡಿನ ತಪ್ಪಲಿನ ರಣ ಮಳೆ ಹಿತವಾದ ಗಾಳಿ ಸಮಶೀತೋಷ್ಣ ಕ್ಕೆ ಪೂರಕವಾಗಿ ನಮ್ಮ ಹಿರಿಯರು ಆವಿಷ್ಕರಿಸಿದ ತೌಳವ ಶೈಲಿಯಲ್ಲೇ ಈ ದೇಗುಲ ನಿರ್ಮಾಣವಾಗಿದೆ. ಈ ಪಗೋಡ ಮಾದರಿಯ ದೇಗುಲಗಳು ನೇಪಾಳ ಕೇರಳ ತುಳುನಾಡು ಮೊದಲಾಗಿ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಕಂಡುಬರುತ್ತದೆ. ಅಷ್ಟಕ್ಕೂ ಇಡಿಯ ಭಾರತಕ್ಕೆ ದೇಗುಲ ಶಾಸ್ತ್ರವನ್ನು ಕಲಿಸಿದ್ದು ಕರ್ನಾಟಕ. ಇಂದು ನಾವು ಕಾಣುತ್ತಿರುವ ನಾಗರ ವೇಸರ ದ್ರಾವಿಡ ಈ ಮೂರು ಮಾದರಿಗಳನ್ನು ಬಾದಾಮಿ ಚಾಲುಕ್ಯರು ಅಭಿವೃದ್ಧಿಪಡಿಸಿದರು. ಹೀಗಾಗಿ ಬಾದಾಮಿ ಮತ್ತು ಐಹೊಳೆಯನ್ನು ಭಾರತೀಯ ದೇಗುಲಗಳ ತೊಟ್ಟಿಲು ಎಂದು ಶಾಸ್ತ್ರಜ್ಞರು ಗುರುತಿಸುತ್ತಾರೆ. ಚಾಲುಕ್ಯರ ಕಾಲದಲ್ಲಿ ಒರಿಸ್ಸಾದ ವರೆಗೆ ಸಂಚರಿಸಿ ನಮ್ಮ ಶಿಲ್ಪಿಗಳು ದೇಗುಲ ನಿರ್ಮಾಣವನ್ನು ಮಾಡಿದರು. ಕನ್ನಡಿಗ ರಾಷ್ಟ್ರಕೂಟರು ನಿರ್ಮಿಸಿದ ಭೂಕೈಲಾಸ ಎಂದೇ ಖ್ಯಾತಿವೆತ್ತ ಎಲ್ಲೋರದ ಕೈಲಾಸನಾಥ ದೇವಾಲಯ, ತಮಿಳುನಾಡಿನ ಚೋಳರನ್ನು ಅಗಾಧವಾಗಿ ಪ್ರಭಾವಿಸಿತು. ಈ ಗುಹಾ ದೇವಾಲಯದ ಮಾದರಿಯಿಂದ ಪ್ರೇರಣೆ ಪಡೆದು ಐರಾವತೇಶ್ವರನಿಂದ ಬೃಹದೀಶ್ವರ ದೇವಾಲಯದವರೆಗೆ ಚೋಳ ಶೈಲಿಯ ದೇಗುಲಗಳನ್ನು ಚೋಳ ಅರಸರು ಕಟ್ಟಿ ನಿಲ್ಲಿಸಿದರು. ಇವರೆಲ್ಲರಿಗೂ ದೇವಾಲಯ ಆಗಮ ಶಾಸ್ತ್ರವನ್ನು ಪರಿಚಯಿಸಿದ್ದು ಕನ್ನಡದ ಶಿಲ್ಪಿಗಳು. ಆ ಶಿಲ್ಪರ್ಶಿಗಳು ಸಾವಿರದ ಐದುನೂರು ವರ್ಷಗಳಿಗೂ ಪೂರ್ವದಲ್ಲಿ ಕೆತ್ತಿದ ಅಪೂರ್ವವಾದ ಮಹಿಷಮರ್ದಿನಿಯ ವಿಗ್ರಹ ಕಡಿಯಾಳಿಯಲ್ಲಿದೆ.

ಅಜ್ಜ ತನ್ನ ಪುಟ್ಟ ಮೊಮ್ಮಗುವನ್ನು ಖುಷಿಪಡಿಸಲು ಕುದುರೆ ಯಾಗುತ್ತಾನೆ ಆನೆಯಾಗುತ್ತಾನೆ ಕಪ್ಪೆಯಂತೆ ಕುಪ್ಪಳಿಸುತ್ತಾನೆ. ಅದೇ ರೀತಿ ಸ ಭೂಮಿಂ ವಿಶ್ವತೋ ವೃತ್ತ ಅತ್ಯತಿಷ್ಠದ್ದಶಾಂಗುಲಂ ಎಂದು ಬಣ್ಣಿಸಲಾದ ಇಡೀ ಸೃಷ್ಟಿಯನ್ನು ಆವರಿಸಿ 10 ಅಂಗುಲದಷ್ಟು ಮೇಲಿರುವ ಆ ಅನಂತ ಚೈತನ್ಯ ತನ್ನ ಭಕ್ತರ ಕೋರಿಕೆಗೆ ಅನುಗುಣವಾಗಿ ವಿಗ್ರಹ ಮಧ್ಯಕ್ಕೆ ಆವಾಹನೆ ಗೊಳ್ಳುತ್ತದೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ. ಇದೇ ಹಿನ್ನೆಲೆಯಲ್ಲಿ ಉಪಾಸನೆಗೆ ಅನೇಕ ಮೂರ್ತಿಗಳನ್ನು ಧ್ಯಾನ ಶ್ಲೋಕಗಳನ್ನು ನಮ್ಮಋಷಿಮುನಿಗಳು ನಮಗೆ ಕರುಣಿಸಿದ್ದಾರೆ. ಉಪಾಸನಾನಾಮ್ ಕಾರ್ಯಾರ್ಥಂ ಬ್ರಹ್ಮಣೋ ಮೂರ್ತಿ ಕಲ್ಪನಾ.. ಹೀಗೆ ನಮಗೆ ಕಡಿಯಾಳಿ ಯಲ್ಲಿ ಆ ಪರಾಶಕ್ತಿ ಆದಿಮಾಯೆ ಮಹಿಷಮರ್ದಿನಿಯಾಗಿ ಕಾಣಿಸಿಕೊಂಡಿದ್ದಾಳೆ. ಏನಿದು?ಮಹಿಷ ಮರ್ದಿನಿ ಕಲ್ಪನೆ?

ಪ್ರಕೃತಿಯ ವಿಸ್ಮಯಗಳನ್ನು ಬೆರಗುಗಣ್ಣಿನಿಂದ ನೋಡುತ್ತ ಪ್ರಕೃತಿ ಸಹಜವಾಗಿ ಬದುಕುತ್ತಿದ್ದ ಮನುಷ್ಯ ಒಂದು ಹಂತದಲ್ಲಿ ಈ ಜಗತ್ತಿನ ಆಗುಹೋಗುಗಳ ಹಿಂದೆ ನಿಯಾಮಕ ಶಕ್ತಿ ಯೊಂದರ ಕೈಚಳಕ ಇದೆ ಎನ್ನುವುದನ್ನು ಅರಿತುಕೊಂಡ. ಅದರ ಜೊತೆಗಿನ ಅನುಸಂಧಾನಕ್ಕಾಗಿ ಆ ಕಾಲದ ಜನಪದರು ಅನೇಕ ನಂಬಿಕೆ ನಡಾವಳಿಗಳನ್ನು ರೂಪಿಸಿಕೊಂಡರು. ಅಂದೆ ಆರಂಭವಾಯಿತು ಮಾತೃ ಆರಾಧನೆ. ಈ ಜನಪದಿಯ ಮಾತೃ ಆರಾಧನೆಯಿಂದ ಬೆಳೆದು ಬಂತು ಶಾಕ್ತ ತಾಂತ್ರಿಕ ಪರಂಪರೆ. ಮುಂದೆ ಋಗ್ವೇದ ಕಾಲದಲ್ಲಿ ಅಂಬ್ರಣ ಮಹರ್ಷಿಯ ಮಗಳು ವಾಕ್ ಎಂಬಾಕೆ ದೇವಿ ಸೂಕ್ತವನ್ನು ರಚಿಸುವ ಮೂಲಕ ಸಚ್ಚಿದಾನಂದ ಪರಬ್ರಹ್ಮ ಸ್ವರೂಪವನ್ನು ಮಹಾಮಾತೆಯ ಕಲ್ಪನೆಯಲ್ಲಿ ಜಗತ್ತಿನ ಮುಂದೆ ತೆರೆದಿಡುತ್ತಾಳೆ.

ಇಲ್ಲಿಂದ ಮುಂದೆ ಪೌರಾಣಿಕ ಕಾಲಘಟ್ಟದಲ್ಲಿ ಮಾರ್ಕಂಡೇಯ ಮುನಿಗಳು ಕೌಶ್ಟ್ರಕಿ ಗೆ ಇಡೀ ಸೃಷ್ಟಿಯಲ್ಲಿ ಶಕ್ತಿಯ ಪಾತ್ರವೇನು ಎನ್ನುವುದನ್ನು ದೇವಿಮಹಾತ್ಮೆಯ ಮೂಲಕ ವರ್ಣಿಸುತ್ತಾರೆ. ನಮಗೆ ಮಹಿಷಮರ್ದಿನಿ ಸಿಗುವುದು ಇಲ್ಲೇ.. ರಜೋಗುಣ ಪ್ರವರ್ತಕಳಾದ ಮಹಾಲಕ್ಷ್ಮಿಯು ಮಹಿಷನ ಸಂಹಾರಕ್ಕಾಗಿ ದೇವತೆಗಳ ಮುಖಮಂಡಲದಿಂದ ಹೊರಟ ತೇಜಃಪುಂಜ ದಿಂದ ಅವತರಿಸುತ್ತಾಳೆ. ಮುಖದಲ್ಲಿ ಶಂಭುವಿನ ತೇಜಸ್ಸು ಬಾಹುಗಳಲ್ಲಿ ವಿಷ್ಣುವಿನ ಬಲ ಪಾದಗಳಲ್ಲಿ ಬ್ರಹ್ಮನ ತೇಜಸ್ಸನ್ನು ಹೊಂದಿದ ಈ ಮಹಾ ಮಾತೆಗೆ ದೇವತೆಗಳು ತಮ್ಮ ತಮ್ಮ ಅಸ್ತ್ರ ಶಸ್ತ್ರಗಳನ್ನು ನೀಡಿ ಶರಣಾಗುತ್ತಾರೆ.

ದೇವ ಸೈನ್ಯ ಮತ್ತು ರಾಕ್ಷಸ ಗಣದ ನಡುವೆ ಘನ ಘೋರವಾದ ಕದನ ನಡೆದು ರಕ್ಕಸರ ಸೇನೆಯನ್ನು ಚಂಡಾಡಿದ ದೇವಿಯು ನೇರವಾಗಿ ಮಹಿಷನನ್ನು ಎದುರುಗೊಳ್ಳುತ್ತಾಳೆ. ದುರ್ಗಾಸಪ್ತಶತಿಯ ಮಧ್ಯಮ ಚರಿತ್ರೆಯಲ್ಲಿ ಈ ಯುದ್ಧದ ವರ್ಣನೆ ಇದೆ. ಹೆಣ್ಣೊಬ್ಬಳಿಂದಲೇ ನನ್ನ ಅಂತ್ಯವಾಗಬೇಕು ಎಂಬ ಮಹಿಷಾಸುರನ ಮಹದಾಸೆಯನ್ನು ತಾಯಿ ಈಡೇರಿಸಿದ ಕ್ಷಣವದು. ಮಹಿಷನ ಪಕ್ಷದಲ್ಲಿದ್ದ ಚಿಕ್ಷುರ ಚಾಮರ ಉದಗ್ರ, ಕರಾಲ ಉದ್ಧಾತ ತಾಮ್ರಾಸುರ ಅಂಧಕಾಸುರ ಉಗ್ರಸ್ಯ, ಉಗ್ರವೀರ್ಯ, ಮಹಾಹನು,ದುರ್ಧಾರ, ದೂರ್ಮುಖ, ಹೀಗೆ ಆತನ ಸೇನೆಯಲ್ಲಿದ್ದ ಅತಿರಥ-ಮಹಾರಥ ಅಸುರರು ಯುದ್ಧಭೂಮಿಯಲ್ಲಿ ಸತ್ತು ಬಿದ್ದರು. ಕೊನೆಗೆ ಉಪಾಯವಿಲ್ಲದೆ ಮಹಿಷಾಸುರ ಕಣಕ್ಕಿಳಿದ.

ವೇಗ ಭ್ರಮಣವಿಕ್ಷುಣ್ಣಾ ಮಹೀತಸ್ಯ ವ್ಯಶೀರ್ಯತ
ಲಾಂಗೂಲೇನಾ ಹತಾಶ್ಚಾಬ್ಧಿ ಪ್ಲಾವಯಾಮಾಸ ಸರ್ವತಃ

ಹೂಂಕರಿಸುತ್ತಾ ಧೂಳೆಬ್ಬಿಸಿದ ಮಹಿಷನ ಪದಾಘಾತಕ್ಕೆ ಭೂಮಿ ಬಿರಿಯಿತು. ಆಗಸದಿಂದ ತೂರಿಬಂದ ಆತನ ಬಾಲದ ಹೊಡೆತಕ್ಕೆ ಕಡಲು ಉಕ್ಕಿ ತೀರ ಪ್ರದೇಶಗಳೆಲ್ಲ ಕೊಚ್ಚಿ ಹೋದವು. ಆ ದೈತ್ಯನ ಹೂಂಕಾರಕ್ಕೆ ಹೊರಚೆಲ್ಲಿದ ಉಸಿರು ಭೂಮಿ ಆಕಾಶಗಳನ್ನು ಒಂದು ಮಾಡುವ ಪ್ರಚಂಡ ಸುಂಟರಗಾಳಿಯಾಗಿ ಅಗಾಧ ಪರ್ವತಗಳನ್ನೇ ಬುಡಮೇಲು ಮಾಡಿತು. ಪ್ರಳಯಾಂತಕ ಸನ್ನಿವೇಶದಲ್ಲಿ ದೇವಕಾರ್ಯ ಸಮುದ್ಭವ ಎಂಬಂತೆ ನಭದಲ್ಲಿ ಕಾಣಿಸಿಕೊಂಡವಳು ಮಹಾಲಕ್ಷ್ಮಿ.. ಅವಳೇ ಮಹಿಷಮರ್ದಿನಿ. ಕೋಣದ ರೂಪದಲ್ಲಿದ್ದ ರಾಕ್ಷಸನನ್ನು ಬಾಲದಲ್ಲಿ ಹಿಡಿದು ನೆಲಕ್ಕೆ ಅಪ್ಪಳಿಸಿ ಅದರ ರುಂಡವನ್ನು ಕಡಿದು ಅದರೊಳಗೆ ಅವಿತಿದ್ದ ಮಹಾದೈತ್ಯನನ್ನು ಹೊರಗೆಳೆದು , ಆತನ ಎದೆಯನ್ನು ತನ್ನ ಶೂಲದಿಂದ ತಿವಿಯುತ್ತಾಳೆ.
ಇದೇ ಆಕೆಯ ಕಡಿಯಾಳಿಯಲ್ಲಿರುವ ಪ್ರತಿಮಾ ಲಕ್ಷಣ. ಚತುರ್ಭುಜೆಯಾಗಿರುವ ಮಹಿಷಮರ್ದಿನಿಯು ಕೋಣ ಒಂದನ್ನು ಕಾಲಡಿ ಕೆಡವಿಕೊಂಡು ಶೂಲದಲ್ಲಿ ಇರಿಯುವ ಭಂಗಿಯಲ್ಲಿದೆ ಇಲ್ಲಿನ ಮೂಲ ವಿಗ್ರಹ.

ಮಹಿಷ ಮತ್ತ್ಯಾರು ಅಲ್ಲ ನಮ್ಮ ನಿಮ್ಮೊಳಗೆ ಮಡುಗಟ್ಟಿರುವ ಜಡ ತನವೇ ಮಹಿಷ.. ಆ ಜಡ ತನವನ್ನು ಕಳೆಯದೆ ಇದ್ದರೆ ಜೀವನದಲ್ಲಿ ಯಾವ ಸಾಧನೆಯೂ ಅಸಾಧ್ಯ. ಅಸಡ್ಡೆ ಅನಾಸಕ್ತಿ ಸೋಮಾರಿತನ ಪ್ರೊಕ್ರಾಸ್ಟಿನೇಶನ್, ಜಿಡ್ಡು ಜಾಡ್ಯ, ಏನು ಬೇಕಾದರೂ ಕರೆಯಿರಿ. ನಿಮ್ಮ ಯಶಸ್ಸಿನ ದಾರಿಗೆ ದೊಡ್ಡ ತಡೆಗೋಡೆಯದು. ಅದನ್ನು ಗೆಲ್ಲಬೇಕಿದ್ದರೆ ಇಚ್ಚಾಶಕ್ತಿ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಅತ್ಯಗತ್ಯ. ಮಹಾ ಕಾಳಿಯಿಂದ ಇಚ್ಛಾಶಕ್ತಿ, ಮಹಾಲಕ್ಷ್ಮಿಯಿಂದ ಕ್ರಿಯಾಶಕ್ತಿ ಮತ್ತು ಮಹಾಸರಸ್ವತಿಯಿಂದ ಜ್ಞಾನ ಶಕ್ತಿಯನ್ನು ಪಡೆದು ನಾವು ನಮ್ಮೊಳಗಿರುವ ಜಡತನವನ್ನು ಅಳಿಸಿದರೆ ಬದುಕಿನ ಅನಂತ ಸಾಧ್ಯತೆಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇದು ಮಹಿಷಮರ್ದಿನಿಯ ಒಳಮರ್ಮ.

ಅತ್ಯಂತ ಪ್ರಾಚೀನ ಮತ್ತು ಅತ್ಯಂತ ಅಪರೂಪದ ಈ ವಿಗ್ರಹವನ್ನು ಹಿಂದಿನ ಋಷಿ-ಮುನಿಗಳು ಯಾವ ಆಗಮದಲ್ಲಿ ಪ್ರತಿಷ್ಠಾಪಿಸಿದ್ದಾರೋ ಯಾರಿಗೂ ತಿಳಿದಿಲ್ಲ. ಹೀಗಾಗಿ ಈ ವಿಗ್ರಹವನ್ನು ಸ್ಥಾನಪಲ್ಲಟಗೊಳಿಸುವ ಸಾಹಸಕ್ಕೆ ಈವರೆಗೆ ಯಾರೂ ಕೈಹಾಕಿಲ್ಲ. ಕೆಲವು ದಶಕಗಳ ಹಿಂದೆ ಇದರ ಗರ್ಭಗ್ರಹದ ಕೆಲಸ ನಡೆದ ಸಂದರ್ಭದಲ್ಲಿಯೂ ಮೂಲವಿಗ್ರಹವನ್ನು ಮುಟ್ಟಲು ಹೋಗಿಲ್ಲ. ಈ ಬಾರಿ ಕೂಡ ಹೊರಗಿನ ಸುತ್ತು ಪೌಳಿಯನ್ನು ಮಾತ್ರ ಬಿಚ್ಚಿ ಕಟ್ಟಲಾಗಿದೆ.

ಬರಹ: ಶ್ರೀಕಾಂತ್‌ ಶೆಟ್ಟಿ ಕಾರ್ಕಳ


Spread the love