ಕಣಗಾಲ್ ಪುಟ್ಟಣ್ಣ ಭಾರತೀಯ ಚಿತ್ರರಂಗದ ದೊಡ್ಡಣ್ಣ: ಬನ್ನೂರು ರಾಜು

Spread the love

ಕಣಗಾಲ್ ಪುಟ್ಟಣ್ಣ ಭಾರತೀಯ ಚಿತ್ರರಂಗದ ದೊಡ್ಡಣ್ಣ: ಬನ್ನೂರು ರಾಜು

ಮೈಸೂರು: ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಕಂಡಂತಹ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರದು ಹೆಸರಷ್ಟೇ ಪುಟ್ಟಣ್ಣನಾದರೂ ಬಣ್ಣದ ಲೋಕದ ದೈತ್ಯ ಪ್ರತಿಭೆಯಾಗಿದ್ದ ಅವರು ಬೆಳ್ಳಿ ತೆರೆಯ ದೊಡ್ಡಣ್ಣನೆಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.

ನಗರದ ಪಡುವಾರಹಳ್ಳಿ ಸ್ನೇಹ ಬಳಗದಿಂದ ಅಭಿಮಾನ ಪೂರ್ವಕವಾಗಿ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಏರ್ಪಡಿಸಿದ್ದ ಸುವಿಖ್ಯಾತ ಚಲನಚಿತ್ರ ನಿರ್ದೇಶಕ ಎಸ್. ಆರ್. ಪುಟ್ಟಣ್ಣ ಕಣಗಾಲರ ಜನ್ಮದಿನೋತ್ಸವವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ಉದ್ಘಾಟಿಸಿದ ಅವರು, ಪುಟ್ಟಣ್ಣನವರು ಖ್ಯಾತ ಚಿತ್ರೋದ್ಯಮಿ ಬಿ.ಆರ್. ಪಂತಲು ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಪಳಗಿ ‘ಬೆಳ್ಳಿಮೋಡ’ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ತಮ್ಮ ಚಿತ್ರ ಪಯಣ ಆರಂಭಿಸಿ ‘ಮಸಣದ ಹೂ’ ಚಿತ್ರದ ತನಕ ಅಮೂಲ್ಯವಾದ 24 ಕನ್ನಡ ಚಿತ್ರಗಳನ್ನು ಹಾಗೂ ತಮಿಳಿನಲ್ಲಿ ಮೂರು, ತೆಲುಗಿನಲ್ಲಿ ಮೂರು, ಮಲಯಾಳಂನಲ್ಲಿ ಆರು, ಹಿಂದಿಯಲ್ಲಿ ಒಂದು ಸೇರಿದಂತೆ ಇತರೆ ಭಾಷೆಗಳಲ್ಲಿ 13 ಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತ ಬಹುಭಾಷಾ ಚಿತ್ರ ನಿರ್ದೇಶಕರೆಂದು ದೇಶದ ಗಮನ ಸೆಳೆದವರೆಂದರು.

‘ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್’ ಎಂಬುದು ಕೇವಲ ಒಂದು ಹೆಸರಲ್ಲ. ಸಿನಿಮಾ ಲೋಕದ ಸೀಮಾಪುರುಷರವರು. ಸಿಂಹಪುರುಷರೂ ಹೌದು. ಬೆಳ್ಳಿ ತೆರೆಯ ತೇರನ್ನೆಳೆದು ಏಕತಾನತೆಯಿಂದ ಅದೇ ರಾಗ ಅದೇ ಹಾಡು ಎಂಬಂತಿದ್ದ ಕನ್ನಡ ಚಿತ್ರರಂಗದ ದಿಕ್ಕು-ದೆಸೆಗಳನ್ನೆಲ್ಲಾ ಬದಲಾಯಿಸಿ ಪ್ರಯೋಗಾತ್ಮಕ ಸ್ಪರ್ಶ ನೀಡಿದ ಚಿತ್ರಬ್ರಹ್ಮ.ತಮ್ಮದೇ ಆದ ಚಿತ್ರ ಪರಂಪರೆ ಸೃಷ್ಟಿಸಿ ನೆಟ್ಟಗೆ ಏನೇನೂ ಇರದಿದ್ದ ಕಾಲದಲ್ಲೇ ಸೃಜನಾತ್ಮಕತೆಯನ್ನು ನೆಟ್ಟು ತಾಂತ್ರಿಕವಾಗಿ ಭವ್ಯತೆಯನ್ನು ಭಿತ್ತಿದ ಭವ್ಯಕಲ್ಪ. ಚಲನಚಿತ್ರಗಳನ್ನು ಹೀಗೂ ತೆಗೆಯಬಹುದೆಂಬ ಪರಿಕಲ್ಪನೆ ನೀಡಿ ಇತರೇ ಭಾಷಿಕರಿಗೂ ದಿಕ್ಸೂಚಿಯಾದ ದಿವ್ಯದಿಗ್ಧರ್ಶಕ, ಕಲಾವಿದ-ಕಲಾವಿದೆಯರೆಂದರೆ ಹೀಗಿರಬೇಕೆಂದು ಕೆತ್ತಿ ತೋರಿಸಿದ ಕಲಾಶಿಲ್ಪಿ. ಚಿತ್ರ ತೆಗೆಯುತ್ತಾ ತೆಗೆಯುತ್ತಾ ಅದರೊಳಗೇ ತಲ್ಲೀನರಾಗಿ ಚಿತ್ರರಸಿಕರ ಮನೋ ಭೂಮಿಕೆಯನ್ನೇ ವಶಪಡಿಸಿಕೊಳ್ಳುತ್ತಿದ್ದ ಭಾವಶಿಲ್ಪಿ. ಕ್ಯಾಮರಾ ಜೊತೆ ನಿಂತರೆ ಸಾಕು ಫ್ರೇಮ್ ಟು ಫ್ರೇಮ್ ದೃಶ್ಯ ಕಾವ್ಯ ಸೃಷ್ಠಿಸಿ, ಚಿತ್ರಕಾವ್ಯ ಕಟ್ಟುತ್ತಿದ್ದ ಕಾವ್ಯ ಶಿಲ್ಪಿ.ಕಥೆ, ಚಿತ್ರಕಥೆ, ಗೀತೆ, ಅಭಿನಯ, ಛಾಯಾಗ್ರಹಣ, ಶಬ್ದಗ್ರಹಣ, ಸಂಗೀತ, ಹಿನ್ನೆಲೆ, ಮುನ್ನೆಲೆ ಹೀಗೆ ಎಲ್ಲದರಲ್ಲೂ ತಮ್ಮದೇ ಆದ ಸಿನಿಮಾ ಪ್ರಜ್ಞೆಯಿಂದ ಮಹತ್ತರ ಬದಲಾವಣೆ ತಂದು ಕನ್ನಡ ಚಿತ್ರರಂಗವನ್ನು ಕಟ್ಟುವಲ್ಲಿ ಹಗಲಿರುಳು ಶ್ರಮಿಸಿದ ಅದ್ಭುತ ನಿರ್ದೇಶಕ ಎಂದು ಹೇಳಿದರು.

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ಪಡುವಾರಹಳ್ಳಿಎಂ.ರಾಮಕೃಷ್ಣ ಅವರು ಮಾತನಾಡಿ ‘ಪಡುವಾರಹಳ್ಳಿ ಪಾಂಡವರು’ ಎಂಬ ಚಲನಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಮ್ಮ ಪಡುವಾರಹಳ್ಳಿಯನ್ನು ಸಿನಿಮಾ ಲೋಕದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿರಸ್ಥಾಯಿಗೊಳಿಸಿದ ಕೀರ್ತಿ ಪುಟ್ಟಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿ.ರೇವಣ್ಣ, ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್.ಕೃಷ್ಣಕುಮಾರ್, ಬಿ.ಕುಮಾರ್, ಕೇಬಲ್ ಕಿಟ್ಟಿ, ವಿಜಿಲಿನ್ಸ್ ಕಮಿಟಿಯ ಸದಸ್ಯ ಎಂ. ಶಿವಪ್ರಕಾಶ್, ರಾ.ಸಿದ್ಧರಾಮು,ಸುರೇಂದ್ರ ಕುಮಾರ್, ಸಿ.ಸಂತೋಷ್, ಈ.ಬಸವರಾಜು ಮುಂತಾದವರಿದ್ದರು.


Spread the love