ಕಣ್ಮನ ಸೆಳೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನ

Spread the love

ಕಣ್ಮನ ಸೆಳೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನ

ಮೈಸೂರು: ಮೈಸೂರು ದಸರಾ ಫಲಪುಷ್ಪ ಪ್ರದರ್ಶನಕ್ಕೆ ಪುಷ್ಪಪ್ರೇಮಿಗಳು ಲಗ್ಗೆಯಿಡುತ್ತಿದ್ದು, ಇಲ್ಲಿ ಪುಷ್ಪಗಳಲ್ಲಿ ಅರಳಿರುವ ವಿಶೇಷತೆಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ.

ಈ ಬಾರಿ ಫಲಪುಷ್ಪಪ್ರದರ್ಶನದಲ್ಲಿ ದೆಹಲಿಯಲ್ಲಿನ ರಾಷ್ಟ್ರಪತಿ ಭವನ ಕುಪ್ಪಣ್ಣ ಪಾರ್ಕ್‌ನಲ್ಲಿ ಮೈದಳೆದಿದೆ. ಉದ್ಯಾನದ ಗಾಜಿನ ಮನೆಯಲ್ಲಿ 3.5 ಲಕ್ಷ ಗುಲಾಬಿ, ಸೇವಂತಿ ಹೂಗಳಲ್ಲಿ ರಾಷ್ಟ್ರಪತಿ ಭವನ ಅರಳಿ ನಿಂತಿದ್ದು, ಎಲ್ಲರನ್ನೂ ಸೆಳೆಯುತ್ತಿದೆ.

ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಆಗಮಿಸಿದ್ದ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆ 50 ಅಡಿ ಅಗಲ 30ಅಡಿ ಉದ್ದ 27 ಅಡಿ ಎತ್ತರದ ಪ್ರತಿಕೃತಿಯನ್ನು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ನಿರ್ಮಿಸಿರುವುದು ಕಣ್ಮನ ಸೆಳೆಯುತ್ತಿದೆ. 50 ಕಾರ್ಮಿಕರ ಪರಿಶ್ರಮದಿಂದ ಮೂರು ದಿನಗಳಲ್ಲಿ ಕಲಾಕೃತಿ ನಿರ್ಮಿಸಲಾಗಿದೆ. 2 ಲಕ್ಷ ಕೆಂಗುಲಾಬಿ, 50 ಬಿಳಿ ಗುಲಾಬಿ ಹಾಗೂ 1 ಲಕ್ಷ ಸೇವಂತಿಗೆ ಹೂಗಳನ್ನು ಬಳಸಲಾಗಿದ್ದು, ಗುಣಮಟ್ಟದ ಹೂಗಳನ್ನು ರೈತರಿಂದಲೇ ನೇರ ಖರೀದಿಸಲಾಗಿದೆ.

ರಾಷ್ಟ್ರಪತಿ ಭವನದೊಂದಿಗೆ ವರನಟ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಶಿಲ್ಪಗಳ ಜೊತೆ ಗಾಜನೂರಿನ ಮನೆಯನ್ನು ನಿರ್ಮಿಸಿರುವುದು ವಿಶೇಷ. ಗಾಜಿನ ಮನೆ ಪ್ರವೇಶ ಪಥದಲ್ಲಿ ಮುಸುಕಿನ ಜೋಳದ ಹಸಿರು ಚಪ್ಪರ ನಿರ್ಮಿಸಲಾಗಿದ್ದು, ತಂಪೆರೆಯುತ್ತಿದೆ. ಅದರೊಂದಿಗೆ 50 ಸಾವಿರ ಹೂ ಕುಂಡಗಳು ಉದ್ಯಾನದಲ್ಲಿವೆ.

ಮಕ್ಕಳನ್ನು ಆಕರ್ಷಿಸುವ ಹನಿ ಬೀ ಕಾರ್ಟೂನ್ ಲೋಕ ಅಂಗಳದಲ್ಲಿ ಅರಳಿದೆ. 7 ಅಡಿ ಎತ್ತರದ ಹನಿ ಬೀ ಜತೆಗೆ ಸೇಬು, ಮಾವು, ಸ್ಟ್ರಾಬೆರಿ ಪಾತ್ರಗಳು ಇವೆ. ಹಳದಿ, ಕೆಂಪು, ಹಸಿರು ದಪ್ಪ ಮೆಣಸಿನಕಾಯಿಯಿಂದ (ಕ್ಯಾಪ್ಸಿಕಂ) ನಿರ್ಮಿಸಲಾದ ಮನೆಯೂ ಕಣ್ಮನ ಸೆಳೆಯುತ್ತದೆ. ಶ್ವೇತ ವರ್ಣದ ನಂದಿ, ಗಣೇಶ, ಏರೋಪ್ಲೇನ್ ಚಿಟ್ಟೆ, ಮತ್ಸಲೋಕದ ನಕ್ಷತ್ರ ಮೀನು, ಹಸಿರು ಡಾಲ್ಫಿನ್ ಜೋಡಿ, ಕಪ್ಪೆಚಿಪ್ಪಿನ ಮುತ್ತನ್ನು ಸೇವಂತಿಗೆ, ಗುಲಾಬಿ ಹೂಗಳಿಂದ ಅಲಂಕರಿಸಲಾಗಿದೆ. ಸಂಗೀತ ನೃತ್ಯ ಕಾರಂಜಿ ಹಾಗೂ ಜಿರಾಫೆ ಕಲಾಕೃತಿ ಗಮನ ಸೆಳೆಯುತ್ತಿದೆ.

ರಾಜ್ಯದ ವಿವಿಧ ಭಾಗದ ತಿನಿಸಿನ ಸವಿಯನ್ನೂ ಫಲಪುಷ್ಪ ಪ್ರದರ್ಶನದಲ್ಲಿ ಸವಿಯಬಹುದಾಗಿದ್ದು, 50ಕ್ಕೂ ಹೆಚ್ಚು ಮಳಿಗೆಗಳು ಇವೆ. ಅವುಗಳೊಂದಿಗೆ ಮನರಂಜನಾ ಉದ್ಯಾನವೂ ಇದೆ. ಮಕ್ಕಳು ಹಾಗೂ ವಯಸ್ಕರಿಗೆ ತೂಗುವ ತೊಟ್ಟಿಲು, ದೋಣಿ, ಹೆಲಿಕಾಪ್ಟರ್ ಸೇರಿದಂತೆ ಆಟಿಕೆಗಳು ಇಲ್ಲಿವೆ. ಫಲಪುಷ್ಪ ಪ್ರದರ್ಶನ ಅ.5ರವರೆಗೆ ಇರಲಿದ್ದು, ಸೆ.30ರಂದು ಹೂಗಳನ್ನು ಮತ್ತೆ ಬದಲಿಸಲಾಗುತ್ತದೆ.


Spread the love