
ಕನಕಪುರದಲ್ಲಿ ತಮ್ಮ ಎದುರಾಳಿ ಆರ್ ಅಶೋಕ್ ಗೆ ಪ್ರಚಾರಕ್ಕೆ ಮುಕ್ತ ಅವಕಾಶ – ಡಿ ಕೆ ಶಿವಕುಮಾರ್
ಕುಂದಾಪುರ: ಕನಕಪುರದಲ್ಲಿ ನಮ್ಮ ಎದುರಾಳಿಗಳು ಎಷ್ಟು ಬೇಕಾದರೂ ಪ್ರಚಾರ ಮಾಡಲಿ. ಅವರಿಗೆ ದೊಡ್ಡ ಅವಕಾಶ ಇದೆ. ಯಾರ ಮನವನ್ನು ಬೇಕಾದರೂ ಒಲಿಸಲಿ. ಮತದಾರರ ಬಳಿ ಏನು ಬೇಕಾದರೂ ಕೇಳಿಕೊಳ್ಳಲಿ. ಆರ್ ಅಶೋಕ್ ಅವರಿಗೆ ನಾವು ಯಾವುದೇ ಅಡಚಣೆ ಮಾಡುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಯಾರು ಮಾತನಾಡಬಾರದು. ಗೌರವದಿಂದ ನಡೆದುಕೊಳ್ಳಬೇಕು ಎಂದು ಕನಕಪುರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ.
ಕನಕಪುರದಲ್ಲಿ ಆರ್. ಅಶೋಕ್ ಅವರು ಕೆಲ ನಿಮಿಷದ ಮತ ಪ್ರಚಾರದ ಸುದ್ದಿಗೆ ಪ್ರತಿಕ್ರಿಯಿಸಿ ಅವರು ಸುದ್ದಿಗಾರರ ಪ್ರಶ್ನೆಗೆ ಬೈಂದೂರಿನಲ್ಲಿ ಉತ್ತರಿಸಿ ಮಾತನಾಡಿದರು.
ನಾನು ಟೆಂಪಲ್ ರನ್ ಮಾಡುತ್ತಿಲ್ಲ. ಪ್ರಚಾರ ಮಾಡುತ್ತಿದ್ದೇನೆ. ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ದೇವರ ಬಗ್ಗೆ ನನಗೆ ನಂಬಿಕೆ ಇದೆ. ನಾನು ಹೋದ ಕ್ಷೇತ್ರದ ಎಲ್ಲಾ ದೇವಸ್ಥಾನಗಳಿಗೂ ಭೇಟಿ ಕೊಟ್ಟು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಉಪ್ಪಿನಕಾಯಿ ಹಾಕಲು ಎಂದು ಹೇಳಿಕೆ ಕೊಟ್ಟ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ರಾಜ್ಯಾದ್ಯಂತ ಜಾಹೀರಾತನ್ನು ಕೊಟ್ಟಿದೆ ಯಾತಕ್ಕಾಗಿ? ಮಹಿಳೆಯರಿಗೆ 2-3 ಸಾವಿರ ಹಣ ಕೊಡುವ ಭರವಸೆ ಕೊಟ್ಟಿದ್ದಾರೆ. ಬಜೆಟ್ನಲ್ಲಿ 1000 ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಏಳರಿಂದ ಹತ್ತು ಗಂಟೆಗೆ ಕರೆಂಟ್ ಕೊಡುತ್ತೇವೆ ಎಂದಿದ್ದಾರೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದಾರೆ ಇದೆಲ್ಲಾ ಯಾವ ಕಾರ್ಡು ಎಂದು ಪ್ರಶ್ನಿಸಿದ ಡಿಕೆಶಿವಕುಮಾರ್ ಕಾಂಗ್ರೆಸ್ ನಲ್ಲಿ ಬದ್ಧತೆ ಇದೆ. ಮೊದಲ ಕ್ಯಾಬಿನೆಟ್ ನಲ್ಲಿ ಹೇಳಿದ್ದನ್ನು ಅನುಷ್ಠಾನಕ್ಕೆ ತರುತ್ತೇವೆ. ನಾವು ಅನುಷ್ಠಾನ ಮಾಡದಿದ್ದರೆ ಮುಂದೆ ನಾವು ಮತ ಕೇಳೋದಿಲ್ಲ ಎಂದರು.
ಮೈಸೂರಿನಲ್ಲಿ ಸೋಮಣ್ಣ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತಯಾಚನೆ ಮಾಡುವ ಹಕ್ಕಿದೆ. ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಹೋಗಬಾರದು. ಯಾರು ಎಲ್ಲಿ ಬೇಕಾದರೂ ಪ್ರಚಾರ ಮಾಡಬಹುದು ಎಂದು ಮೈಸೂರು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಸೂಚನೆ ನೀಡಿದರು.