ಕನ್ನಡಕ್ಕೆ ಆಪತ್ತು ತರುವ ಶಕ್ತಿ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ: ಬಸವರಾಜ ಬೊಮ್ಮಾಯಿ

Spread the love

ಕನ್ನಡಕ್ಕೆ ಆಪತ್ತು ತರುವ ಶಕ್ತಿ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ: ಕನ್ನಡದ ಪರಂಪರೆ ಶ್ರೀಮಂತವಾಗಿದ್ದು, ಎಂದೆಂದೂ ಕನ್ನಡ ಯಾವುದೇ ರಂಗದಲ್ಲಿ ಬಡವಾಗಿಲ್ಲ, ಶತ ಶತಮಾನದ ಕಾಲ ಶ್ರೀಮಂತವಾಗಿಯೇ ಇರುತ್ತದೆ, ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತದೆ. ಕನ್ನಡಕ್ಕೆ ಆಪತ್ತು ತರುವಂತಹ ಯಾವುದೇ ಶಕ್ತಿ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹಾವೇರಿಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನಕ ಶರೀಫ ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಶುಕ್ರವಾರದಂದು ಉದ್ಘಾಟಿಸಿ ಅವರು ಮಾತನಾಡಿ, ಕನ್ನಡ ಸಂಸ್ಕೃತಿಗೆ ದೊಡ್ಡ ಶಕ್ತಿ ಇದೆ. ಭಾವನೆ ಬದುಕನ್ನು ಕಟ್ಟಿ ಕೊಟ್ಟಿದ್ದು ನಮ್ಮ ಸಾಹಿತ್ಯ ಲೋಕ. ನಾಡಿನಲ್ಲಿ ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಬೇಕು, ಕನ್ನಡದ ಕಂಪನ್ನು ಪಸರಿಸಬೇಕು, ದೇಶದಲ್ಲಿ ಕನ್ನಡವನ್ನು ಆಳವಾಗಿ ಬಿತ್ತಬೇಕು, ಅದು ಹೆಮ್ಮರವಾಗಿ ಬೆಳೆಯಬೇಕೆಂಬುದು ಇಂತಹ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ ಎಂದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಡಾ. ದೊಡ್ಡರಂಗೇಗೌಡರು, ಜನಸಾಮಾನ್ಯರಿಗೆ ಸಾಮಾನ್ಯ ಭಾಷೆಯಲ್ಲಿ ಮಾರ್ಮಿಕವಾಗಿ ವಿಚಾರಧಾರೆಗಳನ್ನು ಅವರ ಸಾಹಿತ್ಯ, ಕವಿತೆ, ಹಾಡುಗಳ ಮೂಲಕ ನೀಡಿದ್ದಾರೆ. ರಂಗೇಗೌಡರು ಎಂಬ ಹೆಸರಿನಂತೆ ಕವಿತೆ, ಸಾಹಿತ್ಯ, ಸಿನಿಮಾ ಮುಂತಾದ ರಂಗಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು. ಕನ್ನಡಕ್ಕೆ ಹತ್ತು ಹಲವು ಸವಾಲುಗಳಿವೆ, ಕನ್ನಡ ಭಾಷೆಗೆ ಶಾಶ್ವತ ಕಾನೂನು ಸ್ವರೂಪ ಕೊಡುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ. ಬದುಕಿನ ಎಲ್ಲ ಆಯಾಮ, ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಉಳಿಸಿ, ಬೆಳೆಸಬೇಕೆನ್ನುವ ಉದ್ದೇಶದಿಂದ ಸಮಗ್ರ ಕಾನೂನು ಮಾಡಲು, ಲಾ ಕಮೀಷನ್ ಸ್ವರೂಪ ಕೊಟ್ಟಿದೆ. ಅದನ್ನು ಚರ್ಚೆಗೆ ಬಿಟ್ಟಿದ್ದೇವೆ. ವ್ಯಾಪಕ ಚರ್ಚೆಯಾಗಬೇಕೆಂಬುದು ನಮ್ಮ ಬಯಕೆ. ಆದಷ್ಟು ಬೇಗ ಕಾನೂನು ಸ್ವರೂಪ ಕೊಡುತ್ತೇವೆ. ಕನ್ನಡಿಗರಿಗೆ ಕೈಗಾರಿಕೆಗಳಲ್ಲಿ ಎಲ್ಲ ವೃಂದಗಳಲ್ಲಿ ಶೇ. 80 ರಷ್ಟು ಹುದ್ದೆಗಳನ್ನು ನೀಡಬೇಕು ಎಂಬ ನೂತನ ಕೈಗಾರಿಕಾ ನೀತಿ ತಂದಿದ್ದೇವೆ. ಗಡಿ ಭಾಗದ ರಕ್ಷಣೆಗೂ ನಾವು ಮುಂದಾಗಿದ್ದೇವೆ. ಹೀಗಾಗಿ ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ ಎಂದರು.

ಗಡಿ ಭಾಗಗಳ ಶಾಲೆ ಉಳಿಸಿ ಬೆಳೆಸಲು ಅನುದಾನ ಒದಗಿಸುತ್ತಿದ್ದೇವೆ. ಗಡಿ ಭಾಗದ ಹೊರಗಿನ ಕನ್ನಡಿಗರಿಗೂ ಸಾಹಿತ್ಯ, ಶಾಲೆಗಳನ್ನು ಬೆಳೆಸುವಂತಹ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಮಹತ್ವದ್ದಾದ ಗೋಷ್ಠಿಗಳಿವೆ. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ, ಉತ್ತಮ ಚರ್ಚೆಯಾಗಲಿ, ಇಲ್ಲಿ ಚರ್ಚಿಸಿ ಕೈಗೊಳ್ಳಲಾಗುವ ನಿರ್ಣಯಗಳಿಗೆ ನಮ್ಮ ಸರ್ಕಾರ ಪಾಲಿಸುವ ಕಾರ್ಯ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಶ್ರೇಷ್ಠತೆ ನಮ್ಮ ರಾಜ್ಯದ್ದು. ವಚನಸಾಹಿತ್ಯ ಮತ್ತು ದಾಸ ಸಾಹಿತ್ಯ ಇವರೆಡೂ ಕನ್ನಡವನ್ನು ಶ್ರೀಮಂತಗೊಳಿಸಿವೆ. ಕನ್ನಡಿಗರ ಭಾಷೆ ನಮ್ಮ ರಾಜ್ಯದಲ್ಲಿ ವಿವಿಧತೆಯನ್ನು ಏಕತೆಯನ್ನು ಹೊಂದಿದೆ. ನಡುನಾಡು ಕನ್ನಡ, ಗಡಿನಾಡು ಕನ್ನಡ, ದಕ್ಷಿಣ, ಉತ್ತರ, ಕರಾವಳಿ, ಕಲ್ಯಾಣ ಕರ್ನಾಟಕದ ಕನ್ನಡ ಹೀಗೆ ತನ್ನದೇ ಆದ ಭಾಷೆಯ ಸೊಗಡು, ಅಲ್ಲಿಯ ಬದುಕಿನ ಜೊತೆಗೆ ಹಾಸುಹೊಕ್ಕಾಗಿ, ಅದೂ ಕೂಡ ಬೆಳೆಯುತ್ತಿದೆ. ಕನ್ನಡ ಭಾಷೆಗೆ ದೊಡ್ಡ ಪರಂಪರೆ ಇದೆ. ಹರಿದು ಹಂಚಿಹೋದ ಕನ್ನಡ ಮನಸುಗಳನ್ನು ಸ್ವಾತಂತ್ರ್ಯ ಹೋರಾಟದ ಬಳಿಕ ಕನ್ನಡ ಏಕೀಕರಣದ ಹೋರಾಟದ ಮೂಲಕ ಬೆಸೆಯಲಾಗಿದೆ. ಏಕೀಕರಣ ಹೋರಾಟದಲ್ಲಿ ಅನೇಕರು ಸೇರಿ ಕನ್ನಡವನ್ನು ಒಂದಾಗಿಸಿದ್ದಾರೆ. ಕುವೆಂಪು, ಸಿದ್ದಪ್ಪ ಹೊಸಮನಿ, ಅಂದಾನಪ್ಪ ದೊಡ್ಡಮೇಟಿ, ಎಸ್ ನಿಜಲಿಂಗಪ್ಪ, ಇವರೆಲ್ಲರನ್ನು ನಾವು ಸ್ಮರಿಸಬೇಕಿದೆ. ಅಲ್ಲದೆ ಮೈಲಾರ ಮಹದೇವಪ್ಪ ಅವರ ಹೋರಾಟ, ತ್ಯಾಗ ಬಲಿದಾನವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮೇಳನದ ಅಂಗವಾಗಿ ಹೊರತಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ 86 ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಅವರು ಸಾಹಿತ್ಯ ಸಮ್ಮೇಳನದ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನೀಲ್ ಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರೆಬೈಲ್ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರುಣ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಸಲೀಂ ಅಹ್ಮದ್, ಆರ್.ಶಂಕರ್, ಪ್ರದೀಪ ಶೆಟ್ಟರ್, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಾಕರಸಾಸಂ ಉಪಾಧ್ಯಕ್ಷ ಬಸವರಾಜ ಕೆಲಗಾರ, ಮಾಜಿ ಸಚಿವರಾದ ಬಸವರಾಜ ಶಿವಣ್ಣವರ, ಮನೋಹರ ತಹಸೀಲ್ದಾರ, ರುದ್ರಪ್ಪ ಲಮಾಣಿ, ನಿಕಟಪೂರ್ವ ಕಸಾಪ ರಾಜಾಧ್ಯಕ್ಷ ಮನು ಬಳಿಗಾರ ಮತ್ತಿತರರು ವೇದಿಕೆಯಲ್ಲಿದ್ದರು.

ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ನೆಹರು ಓಲೇಕಾರ ಸ್ವಾಗತಿಸಿದರು, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಆಶಯ ಮಾತುಗಳನ್ನಾಡಿದರು.


Spread the love

Leave a Reply

Please enter your comment!
Please enter your name here