ಕನ್ನಡವೆಂಬುದು ಕೇಳಿದ್ದು ಕೊಡುವ ಕಾಮಧೇನು: ಬನ್ನೂರು ರಾಜು

Spread the love

ಕನ್ನಡವೆಂಬುದು ಕೇಳಿದ್ದು ಕೊಡುವ ಕಾಮಧೇನು: ಬನ್ನೂರು ರಾಜು

ಮೈಸೂರು: ಜಗತ್ತಿನ ಪ್ರಾಚೀನ ಭಾಷೆಗಳಲ್ಲೊಂದಾದ ಸುಮಾರು ಮೂರು ಸಾವಿರ ವರ್ಷಗಳ ಸುಧೀರ್ಘ ಚರಿತ್ರೆಯುಳ್ಳ ನಮ್ಮ ಕನ್ನಡ ಭಾಷೆಯಲ್ಲಿ ಏನಿಲ್ಲ ಎನ್ನುವಂತಿಲ್ಲ. ಇಲ್ಲಿ ಎಲ್ಲವೂ ಇದ್ದು, ಬಯಸಿದ್ದೆಲ್ಲವನ್ನೂ, ಕೇಳಿದ್ದೆಲ್ಲವನ್ನೂ ಕೊಡುವಂತಹ ಕಾಮಧೇನು ಕನ್ನಡವೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಚಾಮುಂಡಿಪುರಂನ ರಾಮಾನುಜ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ವಿದ್ಯಾ ಸಂಸ್ಥೆಯ ವತಿಯಿಂದ ಸೆಂಟ್ ಮೇರಿಸ್ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಸೆಂಟ್ ಮೇರಿಸ್ ಪ್ರೌಢಶಾಲೆ ಒಟ್ಟಾಗಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ’ ಎಂಬ ಕವಿ ವಾಣಿಯಂತೆ ಬದುಕಿಗಾಗಿ ಎಷ್ಟು ಭಾಷೆಗಳನ್ನು ಕಲಿತರೂ ಈ ನೆಲದೊಡಲಿನ ಪ್ರತಿಯೊಬ್ಬರಿಗೂ ಕನ್ನಡವೇ ಸರ್ವಸ್ವವೆಂದರು.

ತನ್ನ ಮುದ್ದು ಮುದ್ದಾದ ಸುಂದರ ಅಕ್ಷರಗಳಿಂದ ಲಿಪಿಗಳರಾಣಿ ಎಂದು ಕರೆಸಿಕೊಳ್ಳುವ ಕನ್ನಡ ಭಾಷೆ ಕಲಿಯುವವರಿಗೆ ಅತ್ಯಂತ ಸುಲಭವಾಗಿದ್ದು ಕನ್ನಡೇತರರೂ ಕೂಡ ಬಹುಬೇಗ ಕನ್ನಡವನ್ನು ಕಲಿಯಬಹುದಾಗಿದೆ. ಅತ್ಯಂತ ಹೆಚ್ಚು ಎನ್ನುವಂತೆ ಸಾಹಿತ್ಯ ಕ್ಷೇತ್ರದಲ್ಲಿ ದಾಖಲಾರ್ಹ ಪ್ರತಿಷ್ಠಿತ ಎಂಟು ಜ್ಞಾನಪೀಠ ಪ್ರಶಸ್ತಿಗಳ ಸಾಹಿತ್ಯ ಸಾಧಕರನ್ನು ಪಡೆದಿರುವ ನಮ್ಮ ಕನ್ನಡಮ್ಮ , ಕಲೆ, ಸಾಹಿತ್ಯ, ಸಂಸ್ಕೃತಿ,ಸಂಗೀತ,ಜಾನಪದ,ವಿಜ್ಞಾನ,ಧಾರ್ಮಿಕ, ಕೃಷಿ, ಕ್ರೀಡೆ, ರಾಜಕೀಯ,ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೂರಾರು, ಸಾವಿರಾರು ಸಾಧಕರನ್ನು ಸೃಷ್ಟಿಸಿದ್ದಾರೆ. ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಇದರ ಮೂಲಕ ಏನು ಬೇಕಾದರೂ ಸಾಧಿಸ ಬಹುದೆಂಬುದನ್ನು ಕನ್ನಡದ ಸಾಧಕ ಮಹನೀಯರು, ಪ್ರತಿಭಾ ಸಂಪನ್ನರು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಕನ್ನಡ ಎಂದೂ ನಶಿಸದ ಜೀವಂತ ಭಾಷೆ.ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸುವ ಹೊಣೆ ವಿದ್ಯಾರ್ಥಿಗಳು ಮತ್ತು ಯುವಜನರ ಮೇಲಿದ್ದು ಸರ್ವರ ತಾಯಿಯಾಗಿರುವ ಕನ್ನಡಮ್ಮನ ಸಂರಕ್ಷಿಸುವತ್ತ ಪ್ರತಿಯೊಬ್ಬ ಕನ್ನಡಿಗರೂ ಕ್ರಿಯಾಶೀಲರಾಗಬೇಕೆಂದು ತಿಳಿಸಿದರು.

ವಿದ್ಯಾರ್ಥಿನಿ ರೇಷ್ಮಾಅವರು ಕನ್ನಡ ನಾಡಿನ ಏಕೀಕರಣ ಹಾಗೂ ನಂತರ ಮೈಸೂರು ರಾಜ್ಯ ಕರ್ನಾಟಕವೆಂದು ಹೆಸರಾದ ಬಗೆಯನ್ನು ಕುರಿತಂತೆ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸುಧೀರ್ಘವಾಗಿ ಭಾಷಣ ಮಾಡಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಕರ್ನಾಟಕದ ಚರಿತ್ರೆಯನ್ನು ತಿಳಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ವಿಶೇಷ ಹಾಗೂ ವಿಶಿಷ್ಟವೆನಿಸುವ ಕನ್ನಡದ ಹಿರಿಮೆಯನ್ನು ಸಾರುವ ಖ್ಯಾತ ಕವಿಗಳ ಹಾಡುಗಳಿಗೆ ವರ್ಣ ರಂಜಿತ ವೇದಿಕೆಯಲ್ಲಿ ನೃತ್ಯ ಮಾಡಿದ ವಿದ್ಯಾರ್ಥಿಗಳು ಅಕ್ಷರಶಃ ರಾಜ್ಯೋತ್ಸವವನ್ನು ಕನ್ನಡದ ಹಬ್ಬವಾಗಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಆಂತೋನಿ ಮೇರಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರೆಸಾ ವರ್ಗೀಸ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸ್ಟೆಲ್ಲಾ ಮೇರಿ, ಶಿಕ್ಷಕಿಯರಾದ ಶಶಿಕಲಾ ಮತ್ತು ಶೃತಿ ಹಾಗೂ ಶಿಕ್ಷಕ ಎ.ದೀಪಕ್ ಮುಂತಾದವರು ಉಪಸ್ಥಿತರಿದ್ದರು.


Spread the love