ಕನ್ನಡ ಎಂದರೆ ಬರೀ ಭಾಷೆಯಲ್ಲ, ಭಾವನಾತ್ಮಕ ಸಂಬಂಧ – ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ.

Spread the love

ಕನ್ನಡ ಎಂದರೆ ಬರೀ ಭಾಷೆಯಲ್ಲ, ಭಾವನಾತ್ಮಕ ಸಂಬಂಧ – ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ.

ಕುಂದಾಪುರ: ಭಾಷಾವಾರು ಪ್ರಾಂತ್ಯಗಳ ರಚನೆ, ಏಕೀಕರಣ, ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಮತ್ತು ಇದಕ್ಕಾಗಿ ದುಡಿದ ಮಹನೀಯರ ಸ್ಮರಿಸುವ ಮಹತ್ವದ ದಿನವಿದುರಿದು ಕಾಡು, ದೈವ-ದೇವರು ನಂಬಿಕೆ ಸಾಹಸಗಳ ಮಹಿಮೆ ಬಣ್ಣಿಸಿದ ಕಾಂತಾರ ದಂತಕಥೆಯ ನೆಲ. ನಾಡು ನುಡಿ ಬಗೆಗಿನ ಅಭಿಮಾನದ ಜೊತೆಗೆ ಅಭಿವೃದ್ಧಿಯ ಹೆಜ್ಜೆಗಳ ವೇಗಗೊಳಿಸುವ ಅಗತ್ಯತೆಯೂ ನಮ್ಮ ಮೇಲಿದೆ. ಭಾಷೆ ಹಾಗೂ ಬದುಕಿನ ಪ್ರಗತಿಗೆ ಒಗ್ಗಟ್ಟಿನ ಪ್ರಯತ್ನ ಅಗತ್ಯವಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಹೇಳಿದರು.

ಕುಂದಾಪುರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ರಾಷ್ಟ್ರದ್ವಜ ನೆರವೇರಿಸಿ, ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ, ಗೌರವ ವಂದನೆ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.

ಕನ್ನಡ ಎಂದರೆ ಬರೀ ಭಾಷೆಯಲ್ಲ. ಇದೊಂದು ಭಾವನಾತ್ಮಕ ಸಂಬಂಧ, ಮಹಾಸಾಗರದ ಹೆಬ್ಬಾಗಿಲಿನಂತಿರುವ ಕರಾವಳಿ ಪರಂಪರೆ, ವೈವಿಧ್ಯತೆ, ಇತಿಹಾಸ, ಆಚಾರ ವಿಚಾರ, ಸಂಸ್ಕೃತಿ ಸೊಗಡು, ವಿಶಿಷ್ಟತೆಗಳ ಮೂಲಕ ಹೆಸರಾಗಿದೆ. ಮತ್ತೊಮ್ಮೆ ಜಗತ್ತಿನ ಗಮನ ಸೆಳೆದ ಕಾಮನ್‍ವೆಲ್ತ್ ಪಂದ್ಯಾಟದಲ್ಲಿ ಸಾಧನೆ ಮಾಡಿದ ಗುರುರಾಜ್ ಪೂಜಾರಿ ಸೇರಿಂದತೆ ಹಲವು ಕ್ಷೇತ್ರಗಳಲ್ಲಿ ಈ ಪ್ರದೇಶ ಕರ್ನಾಟಕದ ಹಿರಿಮೆಯ ಮುಕುಟವಾಗಿದೆ ಎಂದರು.

ಕುಂದಾಪುರ ಠಾಣಾಧಿಕಾರಿ ಸದಾಶಿವ ಆರ್. ಗವರೋಜಿ ನೇತೃತ್ವದಲ್ಲಿ ವಿವಿಧ ಶಾಲಾ ಮಕ್ಕಳ ಸ್ಕೌಟ್, ಗೈಡ್, ಸೇವಾದಳ, ಎನ್‍ಸಿಸಿ, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಪೌರಕಾರ್ಮಿಕರಿಂದ ಪಥ ಸಂಚಲನ ನಡೆಯಿತು. ಪಥಸಂಚಲನದಲ್ಲಿ ಸೈಂಟ್ ಜೋಸೆಫ್ ಪ್ರೌಢಶಾಲೆ ಮಕ್ಕಳ ಬ್ಯಾಂಡ್ ವಾದನ ಗಮನ ಸೆಳೆಯಿತು. ವಿಕೆಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಸಂಗೀತ ಶಿಕ್ಷಕ ಪ್ರಕಾಶ್ ಮತ್ತು ವಿದ್ಯಾರ್ಥಿಗಳು, ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ನಡೆಯಿತು. ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ, ಸೈಂಟ್ ಮೆರೀಸ್ ಹಿರಿಯ ಪ್ರಾಥಮಿಕ ಶಾಲೆ, ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯಿತು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಸ್.ದೇವಾಡಿಗ, ಕುಂದಾಪುರ ಡಿಎಸ್ಪಿ ಶ್ರೀಕಾಂತ್ ಕೆ., ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಸದಸ್ಯರಾದ ದೇವಕಿ ಪಿ.ಸಣ್ಣಯ್ಯ, ಶ್ರೀಧರ ಶೇರೆಗಾರ್, ವಿತ್ಸಲಾ, ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ, ಸಿಡಿಪಿಒ ಶ್ವೇತಾ ಎನ್., ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಇದ್ದರು.

ಕುಂದಾಪುರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್. ವಂದಿಸಿದರು.


Spread the love