Home Mangalorean News Kannada News ಕನ್ನಡ ನುಡಿ ಕಟ್ಟುವ, ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕನ್ನಡ ನುಡಿ ಕಟ್ಟುವ, ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love

ಕನ್ನಡ ನುಡಿ ಕಟ್ಟುವ, ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ವಿವಿಧ ಸಂಸ್ಕೃತಿ, ಭಾಷೆ ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರಾಂತ್ಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂಬ ಕನಸು ಮಹಾತ್ಮ ಗಾಂಧೀಜಿಯವರದ್ದಾಗಿತ್ತು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು, ಸ್ಥಳೀಯ ಭಾಷೆಯ ಮೂಲಕ ಆಡಳಿತ ನಡೆಸಬೇಕೆಂಬುದು ಅವರ ಆಶಯವೂ ಆಗಿತ್ತು. ಅದರಂತೆ ನಮ್ಮ ಸರ್ಕಾರ ರಾಜ್ಯದ ಆಡಳಿತ ಹಾಗೂ ಶಿಕ್ಷಣವನ್ನು ಕನ್ನಡದಲ್ಲಿ ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ಇಲ್ಲಿನ ಅಜ್ಜರಕಾಡಿನ ಮಹಾತ್ಮಗಾಂಧಿ ಮೈದಾನದಲ್ಲಿ ಬುಧವಾರ ನಡೆದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಏಳಿಗೆ ಇಲ್ಲ ಎಂಬ ಭೀತಿ ನಿರಾಧಾರವಾದುದು. ಕನ್ನಡ ಶಾಲೆಗಳಲ್ಲಿ ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಓದಿದ ಸರ್.ಎಂ ವಿಶ್ವೇಶ್ವರಯ್ಯ, ಪ್ರೊ. ಸಿ.ಎನ್.ಆರ್ ರಾವ್ ರವರು ಭಾರತ ರತ್ನಗಳಾಗಿ ವಿಶ್ವವಿಖ್ಯಾತರಾಗಿರುವುದು ನಮ್ಮ ಕಣ್ಣ ಮುಂದಿದೆ ಎಂದರು.

ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರ. ನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಬೆನಗಲ್ ರಾಮರಾಯರು, ಕೋಟ ಶಿವರಾಮ ಕಾರಂತರು, ಪಂಜೆ ಮಂಗೇಶರಾಯರು ಮತ್ತಿತರ ಹಿರಿಯರು ಕನ್ನಡ ಕಹಳೆಯನ್ನು ರಾಜ್ಯಾದ್ಯಂತ ಮೊಳಗಿಸಿದರು.

ನಂದಳಿಕೆ ಲಕ್ಷ್ಮೀನಾರಾಯಣ, ಗುಲ್ವಾಡಿ ವೆಂಕಟರಾಯರು, ಕೆ.ಶಿವರಾಮ ಕಾರಂತ, ಹಾವಂಜೆ ಲಕ್ಷ್ಮೀನಾರಾಯಣಪ್ಪಯ್ಯ, ಹಟ್ಟಿಯಂಗಡಿ ನಾರಾಯಣರಾಯರು, ಐರೋಡಿ ಶಿವರಾಮಯ್ಯ, ಮೊಗೇರಿ ಗೋಪಾಲಕೃಷ್ಣ ಅಡಿಗ, ಕಡೆಕಾರು ರಾಜಗೋಪಾಲಕೃಷ್ಣರಾಯ, ಎಸ್.ಯು ಪಣಿಯಾಡಿ, ಕೊರಡ್ಕಲ್ ಶ್ರೀನಿವಾಸರಾವ್, ಪಾ.ವೆಂ.ಆಚಾರ್ಯ, ಪಿ ಗುರುರಾಜ ಭಟ್, ಮಟಪಾಡಿ ರಾಜಗೋಪಾಲಾಚಾರ್ಯ ಮುಂತಾದ ಅನೇಕ ಕವಿಗಳು ಸೇರಿದಂತೆ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಿಗೆ ಈ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಕನ್ನಡ ಭಾಷೆಯೊಂದೇ ಇಲ್ಲ. ಸ್ಥಳೀಯ ಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಮತ್ತಿತರ ಭಾಷೆಗಳಿವೆ. ಇವೆಲ್ಲವನ್ನು ಬೇರೆ ಎಂದು ನಾವು ಎಂದೂ ಭಾವಿಸಿಯೇ ಇಲ್ಲ. ಈ ಅಚ್ಚ ಕನ್ನಡದ ಜಿಲ್ಲೆಯಲ್ಲಿ ಯಾರನ್ನೂ “ಇವನಾರವ ಇವನಾರವ ಎನ್ನದೇ” ಅಣ್ಣ ಬಸವಣ್ಣ ಹೇಳಿದಂತೆ “ಇವ ನಮ್ಮವ- ಇವ ನಮ್ಮವ’ ಎಂದು ಕೊಂಡಿದ್ದೇವೆ ಎಂದರು.

ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಾಡಿನ ಯುವ ಸಮುದಾಯದ ಮೇಲಿದೆ. ಭಾಷೆ ನವ ಚೈತನ್ಯವನ್ನು ಮೂಡಿಸಿಕೊಂಡು ಬೆಳೆಯಬೇಕಾದರೆ ಅದು ಯುವ ಸಮುದಾಯದಿಂದ ಮಾತ್ರ ಸಾಧ್ಯ. ಯುವ ಜನರು ತಮ್ಮ ದೈನಂದಿನ ಜೀವನದಲ್ಲಿ ಕನ್ನಡ ಬಳಸುವುದರಿಂದ ಮಾತ್ರ ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಜಿಲ್ಲೆಯ 29 ಮಂದಿ ಹಾಗೂ 5 ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ಈ ವೇಳೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದ ಲಿಂಗಪ್ಪ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.


Spread the love

Exit mobile version