ಕನ್ನಡ ಬದುಕಿನ ಭಾವದ ಭಾಷೆ :ಸಾಹಿತಿ ಸಜಗೌ

Spread the love

ಕನ್ನಡ ಬದುಕಿನ ಭಾವದ ಭಾಷೆ :ಸಾಹಿತಿ ಸಜಗೌ

ಮೈಸೂರು: ಕನ್ನಡ ಭಾಷೆ ನಮ್ಮ ಭಾವದ ಭಾಷೆ, ಜೊತೆಗೆ ಬದುಕಿನ ಭಾಷೆ. ಅದಕ್ಕೆ ನಾವು ಸದಾ ಮೊದಲ ಆದ್ಯತೆ ನೀಡಬೇಕು. ಸ್ಪಷ್ಟವಾಗಿ ಮಾತನಾಡುವ ಮತ್ತು ಬರೆಯುವ ಮೂಲಕ ನಮ್ಮ ಕನ್ನಡ ಭಾಷೆಯನ್ನು ನಾವು ಜೀವಂತವಾಗಿ ಇಡುವ ಬದ್ಧತೆ ತೋರಬೇಕು ಎಂದು ಸಾಹಿತಿ – ಶಿಕ್ಷಕ ಟಿ. ಸತೀಶ್ ಜವರೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತಾಲ್ಲೂಕಿನ ಮೆಲ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ನಡೆದ ‘ನನ್ನ ನಾಡು ನನ್ನ ಹಾಡು – ಕೋಟಿ ಕಂಠ ಗಾಯನ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ‘ಕನ್ನಡ ಭಾಷಾ ಸಂಕಲ್ಪ ವಿಧಿ’ ಬೋಧಿಸಿ ಅವರು ಮಾತನಾಡಿದರು.

ಭಾಷೆ ಬೆಳೆಯುವುದು ಮತ್ತು ಉಳಿಯುವುದು ಬಳಸುವ ಪ್ರಕ್ರಿಯೆಯಿಂದ. ಆದ್ದರಿಂದ, ನಾವು ಮನೆಯಲ್ಲಿ, ಕಚೇರಿಗಳಲ್ಲಿ, ಸಮಾಜದಲ್ಲಿ ಕನ್ನಡ ಭಾಷೆಯನ್ನೇ ಬಳಸಬೇಕು. ಇದರಿಂದ ಭಾಷೆ ಜೀವಂತವಾಗಿರುತ್ತದೆ. ಕನ್ನಡ ಭಾಷೆ ಉಳಿದರೆ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತಷ್ಟು ವಿಕಾಸವಾಗುತ್ತದೆ ಎಂದರು.

ಕನ್ನಡದ ಕವಿಗಳು ತಮ್ಮ ಕವಿತೆಗಳಲ್ಲಿ ನಮ್ಮ ನಾಡು ಮತ್ತು ನುಡಿಯ ವೈಭವವನ್ನು ಮನದುಂಬಿ ಬಣ್ಣಿಸಿದ್ದಾರೆ. ಇದರಲ್ಲಿ ನಮ್ಮ ನಾಡಿನ ಪರಂಪರೆ ಹುದುಗಿದೆ. ಇಂತಹ ಕವಿತೆಗಳನ್ನು ಓದಬೇಕು. ಅದರ ಸಾರವನ್ನು ಅರಿಯುವುದರ ಜೊತೆಗೆ, ರಚಿಸಿರುವ ಕವಿಗಳ ಬಗ್ಗೆಯೂ ಗೌರವ ಬೆಳೆಸಿಕೊಳ್ಳಬೇಕು ಎಂದು ನುಡಿದರು.

ಮುಖ್ಯ ಶಿಕ್ಷಕಿ ಕೆ.ವಿ. ಪುಷ್ಪಲತಾ ಮಾತನಾಡಿ, ಮಕ್ಕಳಿಗೆ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿದ್ದರೂ ಸಹ, ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯಬೇಕು. ಕನ್ನಡ ಭಾಷೆಯನ್ನು ತಪ್ಪಿಲ್ಲದೆ, ಓದುವುದು, ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ಭಾಷಾ ಶಿಕ್ಷಕ ರಂಗಸ್ವಾಮಿ, ಹಿರಿಯ ಶಿಕ್ಷಕಿಯರಾದ ಪಿ.ಎಲ್. ಭಾಗ್ಯ, ಪಿ.ಎನ್. ವೀಣಾ, ಎನ್.ಆರ್. ಸುಜಾತ, ಬಿ. ಸರಸ್ವತಿ, ಕೆ. ವಸಂತಲಕ್ಷ್ಮಿ, ಅತಿಥಿ ಶಿಕ್ಷಕಿ ಸೌಮ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕುವೆಂಪು, ಹುಯಿಲಗೋಳ ನಾರಾಯಣರಾಯ, ಡಿ.ಎಸ್. ಕರ್ಕಿ, ಚೆನ್ನವೀರ ಕಣವಿ, ಹಂಸಲೇಖ ರಚನೆಯ ಆರು ಕನ್ನಡ ಗೀತೆಗಳನ್ನು ಸಾಮೂಹಿಕವಾಗಿ ಹಾಡಿ, ‘ಕನ್ನಡ ಸಂಕಲ್ಪ ಪ್ರತಿಜ್ಞಾ ವಿಧಿ’ ಸ್ವೀಕರಿಸಿದರು.


Spread the love