ಕನ್ನಡ ಬಳಕೆಯ ಅಗತ್ಯ ಹಾಗೂ ಸಾಧ್ಯತೆಗಳು: ವಿಶೇಷ ಉಪನ್ಯಾಸ

Spread the love

ಕನ್ನಡ ಬಳಕೆಯ ಅಗತ್ಯ ಹಾಗೂ ಸಾಧ್ಯತೆಗಳು: ವಿಶೇಷ ಉಪನ್ಯಾಸ

ಮೂಡುಬಿದಿರೆ: ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡವನ್ನು ಹೆಚ್ಚು ಬಳಸುವುದರ ಮೂಲಕ ಭಾಷೆಯನ್ನು ಬೆಳಸಬಹುದು ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ಪ್ರೌಢ ಶಾಲೆಯ ಅಧ್ಯಾಪಕ ಅರವಿಂದ ಚೊಕ್ಕಾಡಿ ನುಡಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಬಳಕೆಯ ಅಗತ್ಯ ಹಾಗೂ ಸಾಧ್ಯತೆಗಳ’ ಬಗ್ಗೆ ಮಾತನಾಡಿದರು.

ಅನುಭವವನ್ನು ಕನ್ನಡದಲ್ಲಿ ವ್ಯಕ್ತ ಪಡಿಸಲಿ
ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಭಾಷೆ ಒಂದು ಪ್ರಮುಖ ಅಂಶ. ನಮ್ಮ ಅನೇಕ ಅನುಭವಗಳ ಸಾಂದ್ರೀಕೃತ ರೂಪವೇ ಭಾಷೆÀ. ಅಂತರಂಗದ ಅನುಭವಗಳು ಇದರ ಮೂಲಕ ಅಭಿವ್ಯಕ್ತವಾಗುತ್ತವೆ. ಭಾಷಾ ಸೂಕ್ಷತೆಗಳನ್ನು ಅರಿತಾಗ ನಾವು ಬಳಸುವ ಭಾಷೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕನ್ನಡ ಭಾಷೆಯನ್ನು ಅನ್ನ ನೀಡುವ ಭಾಷೆಯಾಗಿ ಬೆಳೆಸುವ ಅಗತ್ಯ ನಮಗಿದೆ. ಕನ್ನಡ ಇಂದು ಕರುಳಿನ ಕೂಗಾಗದೆ, ಕೊರಳಿನ ಕೂಗಾಗಿ ನಮ್ಮ ನಡುವೆ ಒದ್ದಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಕನ್ನಡ ಭಾಷೆಯಲ್ಲಿ ವ್ಯಕ್ತಪಡಿಸಲು ಮುಂದಾಗಬೇಕು. ಈ ಪ್ರಕ್ರಿಯೆಯಲ್ಲಿ ಪ್ರಬಂಧ, ಕವಿತೆ, ಭಾಷಣವನ್ನು ವೇದಿಕೆಯಾಗಿ ಬಳಸಿಕೊಳ್ಳಬೇಕು ಎಂದರು.

ಅರಿವಿನ ಪರಿಧಿ ವಿಸ್ತರಿಸಲು
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕ ರಾಮಪ್ರಸಾದ ಕಾಂಚೋಡು, ಬಲ್ಲವರಿಂದ ನಮ್ಮ ಅರಿವಿನ ಪರಿಧಿಯನ್ನು ಬಲಪಡಿಸಿಕೊಳ್ಳಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭವಿಷ್ಯದ ಅಗತ್ಯತೆಗಳಿಗೆ ಸರಿಯಾಗಿ ಭಾಷೆಯನ್ನು ಸಂಪನ್ನಗೊಳಿಸುವ ಅಗತ್ಯವಿದೆ. ಭಾಷೆಯನ್ನು ಸಂಪತ್ತಾಗಿ, ಜೀವನ ಸಂಪದವಾಗಿ ಮಾಡಿಕೊಳ್ಳಬೇಕಾಗಿದೆ ಎಂದರು.

ಸರ್ವರ ಹಿತವೇ ಸಾಹಿತ್ಯದ ಮೂಲ ದ್ರವ್ಯ
ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೋ ಸದಾಕತ್, ಸರ್ವರ ಹಿತವೇ ಸಾಹಿತ್ಯದ ಮೂಲ ದ್ರವ್ಯ. ಸಾಹಿತ್ಯ ಸದಾ ಪರರ ಹಿತದ ಮೂಲಕ ತನ್ನ ಸುಖವನ್ನು ಕಂಡುಕೊಳ್ಳುತ್ತದೆ. ವಿಜ್ಞಾನದ ನಾಗಾಲೋಟದಿಂದಾಗಿ ನಮ್ಮಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಈ ಪ್ರಪಂಚವನ್ನು 50 ಬಾರಿ ನಾಶಮಾಡುವಷ್ಟು ಅಣುಬಾಂಬುಗಳು ನಮ್ಮಲ್ಲಿ ಸಂಗ್ರಹವಿದೆ ಎಂದರು.

ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ದಿವ್ಯಾಶ್ರೀ ಡೆಂಬಳ ನಿರೂಪಿಸಿ, ಉಪನ್ಯಾಸಕ ಗಣಪತಿ ನಾಯ್ಕ ಅತಿಥಿಯನ್ನು ಪರಿಚಯಿಸಿ, ಉಪನ್ಯಾಸಕರಾದ ಹೇಮಾವತಿ ಸ್ವಾಗತಿಸಿ, ಸಹನಾ ವಂದಿಸಿದರು.


Spread the love

Leave a Reply

Please enter your comment!
Please enter your name here