
ಕನ್ನಡ ಭವನದಲ್ಲಿ ಕನ್ನಡ ಭಾಷಾ ಬೋಧನ ಕಾರ್ಯಗಾರ
ಮೂಡುಬಿದಿರೆ: ಉತ್ತಮ ಅಧ್ಯಯನದ ಮುಖಾಂತರ ತರಗತಿಯಲ್ಲಿ ಕನ್ನಡ ಭಾಷೆಯ ಮೇಲಿನ ಒಲವನ್ನು ಹೆಚ್ಚಿಸಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀಮತಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ (ರಿ.) ಜಂಟಿಯಾಗಿ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಕನ್ನಡ ಭಾಷಾ ಭೋಧಕರಿಗಾಗಿ ಆಯೋಜಿಸಿದ ಕನ್ನಡ ಭಾಷಾ ಬೋಧನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಪ್ರತಿಯೊಬ್ಬರ ಜವಬ್ದಾರಿ. ಕನ್ನಡದ ಬಗ್ಗೆ ನಮಗೆ ಗೌರವವಿರಬೇಕು. ಇತ್ತೀಚೆಗಿನ ದಿನಗಳಲ್ಲಿ ರಾಮಾಯಣ ಮಹಾಭಾರದಂತಹ ಪುರಾಣಗಳ ಚಿಂತನೆಯನ್ನು ಜನರಿಗೆ ತಲುಪಿಸಲು ಯಕ್ಷಗಾನದ ಬಳಕೆಯಾಗುತ್ತಿರುವುದು ಒಂದರ್ಥದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಸಹಕಾರಿ. ಕನ್ನಡ ಬಗ್ಗೆ ಶಿಕ್ಷಕರಲ್ಲಿ ಒಲವು ಇರಬೇಕು. ಇಂಗ್ಲೀಷ್ ಪರಿವರ್ತನೆಗೆ ಒಳಗಾಗುತ್ತಿರುವ ಶಿಕ್ಷಕರಿಗೆ ತರಗತಿಯಲ್ಲಿ ಕನ್ನಡ ಭಾಷಾ ಬೋಧನೆಯ ಕುರಿತು ಹಮ್ಮಿಕೊಂಡಿರುವ ವಿಶೇಷ ಕಾರ್ಯಗಾರ ಅವರ ಜ್ಞಾನ ಭಂಡಾರವನ್ನು ವೃದ್ಧಿಸಲು ಸಹಾಯವಾಗಲಿದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಉಳಿವಿಗೆ ಹಿಂದಿನಿಂದಲೂ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಂದೊಮ್ಮೆ ಸದನದಲ್ಲಿ ಕನ್ನಡ ವ್ಯಾಕರಣದ ಪಾಠ ಮಾಡಿದ ನೆನಪನ್ನು ಮೆಲುಕು ಹಾಕಿದರು ಹಾಗೂ ಇಂದಿಗೂ ಕೂಡ ಸಿದ್ಧರಾಮಯ್ಯ ಅವರು ಕಡತಗಳಿಗೆ ಕನ್ನಡದಲ್ಲೇ ಸಹಿ ಹಾಕುವುದು ಅನುಕರಣೀಯ ಎಂದರು.
ಕನ್ನಡ ಸಾಹಿತ್ಯಕ್ಕೆ , ಕನ್ನಡ ಭಾಷೆಗೆ ಕೊಡುಗೆ ನೀಡಿದವರ ಸಂಖ್ಯೆ ದೊಡ್ಡದಿದೆ. ಆದರೂ ಕನ್ನಡ ಭಾಷೆ ಅವನತಿಯನ್ನು ಹೊಂದುತ್ತಿದ್ದು, ಪ್ರತಿ ಶಾಲೆಯಿಂದ ಒಂದು ಮಗು ಬರುವಾಗ ಆ ಮಗುವಿಗೆ ಕನ್ನಡ ಓದಲು ಬರುವಂತೆ ಶಿಕ್ಷಕರಾದ ನಾವು ಮಾಡಬೇಕು ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ ರಾಜಶ್ರೀ ಹೇಳಿದರು.
ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯನ್ ಅವರು ಕಾರ್ಯಾಗಾರಕ್ಕೆ ಭೇಟಿ ನೀಡಿದರು.
ಕನ್ನಡ ಬೋಧಕರಿಗೆ ಇರಬೇಕಾದ ಪೂರ್ವ ಜ್ಞಾನದ ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ, ಕನ್ನಡ ಪಠ್ಯ-ಪದ್ಯಗಳ ವಾಚನ ಗಾಯನದ ಕುರಿತು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಮಪ್ರಸಾದ ಕಾಂಚೋಡು, ಕನ್ನಡ ಬೋಧನೆಯಲ್ಲಿ ಭಾಷಾ ಶುದ್ಧಿ ಕುರಿತು ಡಾ. ಪಾದೆಕಲ್ಲು ವಿಷ್ಣು ಭಟ್ ಹಾಗೂ ತರಗತಿಯಲ್ಲಿ ರಂಗ ಚಟುವಟಿಕೆಯ ಸಾಧ್ಯತೆ ಕುರಿತು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಕಾರ್ಯಾಗಾರ ನಡೆಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲಶೆಟ್ಟಿ, ಕಾರ್ಯದರ್ಶಿ ಸದಾನಂದ ನಾರಾವಿ, ಕೋಶಾದ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ ಉಪಸ್ಥಿತರಿದ್ದರು, ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.