ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಅಡ್ಡಂಡ ಕಾರ್ಯಪ್ಪ

Spread the love

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ: ಅಡ್ಡಂಡ ಕಾರ್ಯಪ್ಪ

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕಡೆಗಣಿಸದೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಮತ್ತು ಸಚಿವರನ್ನು ನೀಡಬೇಕು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮನವಿ ಮಾಡಿದ್ದಾರೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಮೈಸೂರು ರಂಗಾಯಣ ಮಾತ್ರ ಇತ್ತು. ಈಗ ಆರು ರಂಗಾಯಣ ಆಗಿದೆ. ಮೊದಲು ಒಂದು ರಂಗಾಯಣಕ್ಕೆ ನೀಡುತ್ತಿದ್ದ ಅನುದಾನವನ್ನು ಎಲ್ಲ ರಂಗಾಯಣಗಳಿಗೂ ಹಂಚಿಕೆ ಮಾಡಲಾಗುತ್ತದೆ. ಇದರಿಂದ ರಂಗಾಯಣವನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ರಂಗಾಯಣಗಳಿಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಬೇಕು. ರಂಗಾಯಣಗಳ ಸಂಖ್ಯೆ ಹತ್ತು ದಾಟಬೇಕು ಎಂದು ಹೇಳಿದ್ದಾರೆ.

ಈ ಬಾರಿ ಬಹುರೂಪಿಗೆ ರಾಜ್ಯ ಸರ್ಕಾರ ಕೇವಲ 25 ಲಕ್ಷ ರೂ. ಅನುದಾನ ನೀಡಿತ್ತು. ಆದರೆ, ಉತ್ಸವಕ್ಕೆ 40 ಲಕ್ಷ ರೂ. ಖರ್ಚಾಗಿದೆ. ರಂಗಾಯಣದ ಬೇರೆ ಹಣವನ್ನು ಉತ್ಸವದ ಖರ್ಚಿಗೆ ಬಳಸಿಕೊಳ್ಳಲಾಗಿದೆ. ಕಳೆದ ಮೂರು ವರ್ಷದಿಂದ ಬಹುರೂಪಿಯನ್ನು ರಾಜ್ಯದ ಉತ್ಸವ ಎಂದು ಸರ್ಕಾರ ಪರಿಗಣಿಸಿದೆ. ಹಾಗಾಗಿ ಮೂರು ವರ್ಷದಿಂದ ಹೆಚ್ಚಿನ ಜವಾಬ್ದಾರಿ ವಹಿಸಿ ಬಹುರೂಪಿ ನಡೆಸಿದ್ದೇವೆ. ನನ್ನ ಅವಧಿಯಲ್ಲಿ ಮೊದಲ ವರ್ಷ ಬಹುರೂಪಿಗೆ 1 ಕೋಟಿ ರೂ., ಎರಡನೇ ವರ್ಷ 50ಲಕ್ಷ ರೂ. ಅನುದಾನ ದೊರೆತಿದೆ ಎಂದು ತಿಳಿಸಿದ್ದಾರೆ.

ಮೈಸೂರಿನ ಅರವಿಂದ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿರುವ 2 ಎಕರೆ ಜಾಗ ಇದ್ದು, ಅದನ್ನು ರಂಗಾಯಣಕ್ಕೆ ನೀಡುವಂತೆ ಬಹುರೂಪಿ ಉದ್ಘಾಟನೆ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ನಮ್ಮ ರಂಗಾಯಣಕ್ಕೆ ಜಾಗದ ಕೊರತೆ ಇದೆ. ಅರವಿಂದ ನಗರದಲ್ಲಿ 2 ಎಕರೆ ಖಾಲಿ ಜಾಗ ಇದೆ. ಅದನ್ನು ಗಾಂಧಿ ವಿಚಾರ ಪರಿಷತ್‌ಗೆ ನೀಡಿಲ್ಲ. ಆದರೆ, ಖಾಸಗಿ ಟ್ರಸ್ಟ್‌ನವರು ಆ ಜಾಗವನ್ನು ಕಬಳಿಸಲು ಪ್ರಯತ್ನಿಸಿದ್ದರು. ಸದ್ಯ ಅವರು ಹಾಕಿದ್ದ ಬೋರ್ಡ್‌ನ್ನು ತೆರವು ಮಾಡಲಾಗಿದ್ದು, ಆ ಜಾಗವನ್ನು ರಂಗಾಯಣಕ್ಕೆ ನೀಡುವಂತೆ ಕೋರಿದ್ದೇವೆ. ಶೀಘ್ರದಲ್ಲೇ ಆರಂಭವಾಗಲಿರುವ ಬೆಳಗಾವಿ ಅಧಿವೇಶನದ ಸಮಯದಲ್ಲೂ ಸ್ಥಳೀಯ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರ ಸಮ್ಮುಖದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಯಾವುದೇ ಅಡೆ ತಡೆಗಳಿಲ್ಲದೆ ಬಹುರೂಪಿ ಮುಕ್ತಾಯಗೊಂಡಿದೆ. ಭಾರತೀಯತೆ ಪರಿಕಲ್ಪನೆ ಅಡಿಯಲ್ಲಿ ನಡೆದ ವಿವಿಧ ಭಾಷೆಯ ನಾಟಕ, ಚಲನಚಿತ್ರೋತ್ಸವ, ಜನಪದೋತ್ಸವ, ಕರಕುಶಲ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ, ವಿಚಾರಸಂಕಿರಣ, ಭಾಷಣ ಸ್ಪರ್ಧೆ-ಹೀಗೆ ಎಲ್ಲ ಚಟುವಟಿಕೆಗಳೂ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದ್ದಾರೆ.


Spread the love