Home Mangalorean News Kannada News  ಕನ್ನಡ ಲಿಪಿ ಕೊಂಕಣಿಯ ಪ್ರಥಮ ಕಾದಂಬರಿಯ 75ರ ಸಂಭ್ರಮ ಆಚರಣೆ

 ಕನ್ನಡ ಲಿಪಿ ಕೊಂಕಣಿಯ ಪ್ರಥಮ ಕಾದಂಬರಿಯ 75ರ ಸಂಭ್ರಮ ಆಚರಣೆ

Spread the love

 ಕನ್ನಡ ಲಿಪಿ ಕೊಂಕಣಿಯ ಪ್ರಥಮ ಕಾದಂಬರಿಯ 75ರ ಸಂಭ್ರಮ ಆಚರಣೆ

ಮಂಗಳೂರು: ಕಾದಂಬರಿ ಚರಿತ್ರೆ ಅಲ್ಲ, ಆದರೆ ಕಾದಂಬರಿಯಲ್ಲಿ ಚರಿತ್ರೆ ಇರಬಹುದು. ಕಾದಂಬರಿ ಸವಿಸ್ತಾರವಾಗಿ ಜೀವನವನ್ನು ವಿಶ್ಲೇಷಣೆ ಮಾಡಬಲ್ಲುದು. ಆಂಜೆಲ್ 75 ವರ್ಷಗಳ ಹಿಂದಿನ ಜನಜೀವನವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ನಕೊಂಕಣಿ ಅಕಾಡಮಿಯು ಔಚಿತ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ನಗರದ ಸಂದೇಶ ಸಭಾಭವನದಲ್ಲಿ ರವಿವಾರ ಆಯೋಜಿಸಿದ ಕೊಂಕಣಿ ಕನ್ನಡ ಲಿಪಿಯ ಪ್ರಥಮ ಕಾದಂಬರಿ ಆಂಜೆಲ್‌ನ 75ನೇ ಸಂಭ್ರಮ ಆಚಾರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂತಹ ಕೃತಿಯಿಂದ ಮುಂದೆ ಸಾಹಿತ್ಯ ರಚಿಸುವವರಿಗೆ ಪ್ರೇರಣೆ ದೊರೆಯಲಿದೆ. ಅಕಾಡಮಿ ಸಾಹಿತ್ಯಾ ಸಕ್ತ ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕ್ರಮವಹಿಸಿದರೆ ಈ ಪರಂಪರೆ ಮುಂದುವರಿಯಲಿದೆ ಎಂದು ಡಾ. ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ ಅಕಾಡಮಿಯು ಹಿರಿಯ ಸಾಹಿತಿಗಳನ್ನು ಗೌರವಿಸುವಂತಹ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಸಾಹಿತ್ಯದ ಬಗ್ಗೆ ವಿನೂತನ ಆಲೋಚನೆಗಳನ್ನು ಅಕಾಡಮಿಗೆ ತಿಳಿಸಬಹುದು ಎಂದರು.

ಆಂಜೆಲ್ ಕೃತಿಯ ರಚನೆಕಾರ ದಿ. ಜೊ. ಸಾ. ಆಲ್ವಾರಿಸ್‌ರ ಪತ್ನಿ ಮೊನಿಕಾ ಆಲ್ವಾರಿಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಂಕಣಿ ನಾಟಕ ಸಭಾದ ಅಧ್ಯಕ್ಷ ವಂ. ರೊಕಿ ಡಿಕುನ್ಹಾ ಕಾದಂಬರಿಯ ಇ ಬುಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.

ಕೃತಿಯನ್ನು ಇ-ಬುಕ್‌ಗೆ ಅಣಿಗೊಳಿಸಿದ ಸಾಫ್ಟ್‌ವೇೀರ್ ತಜ್ಞ ಕೇರನ್ ಮಾಡ್ತಾ ಇಂದಿನ ದಿನಮಾನದಲ್ಲಿ ಸಾಹಿತ್ಯವನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವಲ್ಲಿ ಈ ಬುಕ್‌ನ ಪ್ರಸ್ತುತತೆ ಹಾಗೂ ಉಪಯೋಗಿ ಸುವ ಬಗ್ಗೆ ಮಾಹಿತಿ ನೀಡಿದರು. ಲೇಖಕಿ ಡಾ. ಡಿಂಪಲ್ ಫೆರ್ನಾಂಡಿಸ್ ಕೃತಿಯಲ್ಲಿನ ಸಾಹಿತ್ಯದ ಬಗ್ಗೆ ಒಳನೋಟಗಳನ್ನೂ, ಲೇಖಕ ರಿಚ್ಚಾರ್ಡ್ ಆಲ್ವಾರಿಸ್ ಅವರು ಜೊ ಸಾ ಆಲ್ವಾರಿಸ್‌ರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.

ಅಕಾಡಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಮರ್ಥ್ ಭಟ್ ಉಪಸ್ಥಿತರಿದ್ದರು. ಸಪ್ನಾ ಕ್ರಾಸ್ತಾ ಸ್ವಾಗತಿಸಿದರು. ನವೀನ್ ಲೋಬೊ ವಂದಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version