
ಕನ್ನಡ ಶಾಲೆಗಳ ಉಳಿವಿಗೆ ಖಾಸಗಿಯವರ ಸಹಭಾಗಿತ್ವ ಅಗತ್ಯ – ಡಾ. ಮೋಹನ್ ಆಳ್ವ
ಕುಂದಾಪುರ: ಜ್ಞಾನ ದೇಗುಲವಾದ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳು ಕಳೆಗುಂದುತ್ತಿರುವುದು ಬೇಸರದ ವಿಚಾರ. ಕನ್ನಡ ಶಾಲೆಗಳ ಉಳಿವಿಗಾಗಿ ಸರ್ಕಾರದೊಂದಿಗೆ ಖಾಸಗಿಯವರ ಸಹಭಾಗಿತ್ವವೂ ಅಗತ್ಯವಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರವರ್ತಕ ಡಾ. ಎಂ ಮೋಹನ್ ಆಳ್ವ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಕೊಡ್ಲಾಡಿ-ಬಾಂಡ್ಯದ ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ ಇವರಿಂದ ದತ್ತು ಸ್ವೀಕೃತವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುಕುಲ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ನೂತನ ಶಾಲಾ ಕಟ್ಟಡ ‘ ಕದಂಬ ’ ವನ್ನು ಶನಿವಾರ ಸಂಜೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಾಲ ಕಾಲಕ್ಕೆ ಉನ್ನತೀಕರಣ ಕಾಣದ ಕನ್ನಡ ಶಾಲೆಗಳು ನಿರೀಕ್ಷಿತ ಅಭಿವೃದ್ಧಿಯಿಂದ ಹಿಂದಕ್ಕೆ ಉಳಿದಿದೆ. ಹೆಚ್ಚು ಹೆಚ್ಚು ಶಾಲೆಗಳನ್ನು ಮಾಡುವುದಕ್ಕಿಂತ, ಇದ್ದ ಶಾಲೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯವಾಗಬೇಕು. ನಮ್ಮ ದೇಶಕ್ಕೆ ಆಗಿರುವಂತೆ ಇಂಗ್ಲೀಷ್ ಭಾಷಾ ದಾಳಿಯಿಂದ ತತ್ತರಿಸಿದ ಜಗತ್ತಿನ ವಿವಿಧ ಕಡೆಗಳಲ್ಲಿ ಮಾತೃ ಭಾಷೆಗಳು ಪುನರುತ್ಥಾನಗೊಂಡ ಇತಿಹಾಸಗಳು ನಮ್ಮ ಮುಂದಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ವಸತಿ ನಿಲಯದಲ್ಲಿ ಇರುವ ಕನ್ನಡ ಮಾಧ್ಯಮ ಶಾಲೆಯ ೬೦೦ ವಿದ್ಯಾರ್ಥಿಗಳಿಗೆ ವಾರ್ಷಿಕ ಅಂದಾಜು ೭ ಕೋಟಿ ರೂ. ಗಳನ್ನು ಖರ್ಚು ಮಾಡಲಾಗುತ್ತಿದೆ. ರಾಜ್ಯದ 15,000 ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಮಾದರಿಯನ್ನಾಗಿಸಿ ಅಭಿವೃದ್ಧಿ ಮಾಡಿದರೇ, ಖಂಡಿತವಾಗಿಯೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ನಾವು ಬೆಳೆಯುವುದರ ಜೊತೆಯಲ್ಲಿ ಸಮಾಜವನ್ನು ಬೆಳೆಸಬೇಕು ಎನ್ನುವ ಪರಿಕಲ್ಪನೆ ಹೊಂದಿರುವ ಗುರುಕುಲ ಶಿಕ್ಷಣ ಸಂಸ್ಥೆ ಕೊಡ್ಲಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿಯ ಚಿಂತನೆ ಮಾಡಿರುವುದು ಮಾದರಿಯಾಗಿದ್ದು, ನಾಡಿಗೆ ಒಳ್ಳೆಯ ಸಂದೇಶ ನೀಡಿದ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಡಾ.ವಾದಿರಾಜ ಗೋಪಾಡಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಕನ್ನಡಿ. ಅನೇಕ ಸಾಧಕರು ಕನ್ನಡ ಮಾಧ್ಯಮದಿಂದಲೇ ಸಾಧನೆ ಮಾಡಿದ್ದಾರೆ. ಮಾತೃ ಭಾಷೆಯಿಂದ ಮಾತೃ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ. ಡಾ.ಮೋಹನ್ ಆಳ್ವಾರಂತಹ ಸಾಧಕರ ಜೊತೆ ಸಮಾಜ ಒಗ್ಗೂಡಿ ನಿಲ್ಲಬೇಕು. ಬ್ರಿಟೀಷರು ಅಮೂಲ್ಯವಾದ ಗುರುಕುಲ ಶಿಕ್ಷಣವನ್ನು ಬಿಟ್ಟರೆ, ನಾವು ಅದನ್ನು ಮರೆತು ಬಿಟ್ಟಿದ್ದೇವೆ. ಅಂಕಪಟ್ಟಿಗೆ ಸೀಮಿತವಾದ ಶಿಕ್ಷಣ ಪದ್ಧತಿ ಬದಲಾಗಿ, ಉದ್ಯೋಗದ ಅವಕಾಶಕ್ಕೆ ಬದಲಾಗುತ್ತಿದೆ. ಪಾವಿತ್ರ್ಯದ ಜ್ಞಾನವನ್ನು ನೀಡುವ ಶಿಕ್ಷಣ ವ್ಯವಸ್ಥೆ ಮಾರಾಟ ವ್ಯವಸ್ಥೆಯಿಂದ ಬದಲಾಗಿ ಉಚ್ಚ್ರಾಯಸ್ಥಿತಿ ತಲುಪಬೇಕು. ನಾಲ್ಕು ಗೋಡೆಗಳ ಶಿಕ್ಷಣಕ್ಕಿಂತ, ಅನುಭವದ ಶಿಕ್ಷಣವೇ ಶ್ರೇಷ್ಠವಾದುದು. ಪರೀಕ್ಷೆಗಳು ಕೆಲವೇ ಪ್ರಶ್ನೆಯ ಆಯ್ಕೆಗೆ ಸೀಮಿತವಾಗುವ ಕಾಲಘಟ್ಟದಲ್ಲಿ ಇದ್ದೇವೆ. ಮಾರಾಟ ವಸ್ತುಗಳಿಗೆ ಬೆಲೆ ಕೊಡುವ ವ್ಯವಸ್ಥೆಯನ್ನು ಕಾಣುತ್ತಿದ್ದೇವೆ. ಬ್ರಿಟೀಷರು ಬರುವುದಕ್ಕಿಂತ ಮೊದಲು ಇದ್ದ ರಾಜರ ವ್ಯವಸ್ಥೆಯಲ್ಲಿ ಸಮಾಜಕ್ಕೆ ಏನು ತೊಂದರೆ ಇರಲಿಲ್ಲ. ಆದರೆ ಇಂದು ರಾಜಕೀಯ ಶಕ್ತಿಗಳೇ ಸಮಾಜವನ್ನು ನಡೆಸುವ ವಿಪರ್ಯಾಸದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಮಾಜದ ಭೃಷ್ಟತೆಯ ವ್ಯವಸ್ಥೆ ಬದಲಾಗಬೇಕಾದರೆ, ನಮ್ಮ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ನೀಡಬೇಕು ಎಂದು ಅವರು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು, ಗುಲಾಮಗಿರಿಯ ಸಂಕೇತವಾಗಿರುವ ಇಂಗ್ಲೀಷ್ ಭಾಷೆಯ ಬದಲು ಮಾತೃ ಭಾಷೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಬೇಕು.ಮಾತೃ ಭಾಷೆಗೆ ಇರುವ ಗೌರವ ಹಾಗೂ ಭಾವನೆ ಬೇರೆ ಭಾಷೆಗಳಿಗೆ ಇರೋದಿಲ್ಲ. ನಮ್ಮ ಅಹಂನ್ನು ಬಿಟ್ಟು ಮಾತೃ ಭಾಷೆಯ ಪಾವಿತ್ರ್ಯತೆ ಹಾಗೂ ಅಗತ್ಯತೆಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಪ್ರಯತ್ನವಾದರೆ ನಮ್ಮ ಸಮಾಜ ಶಾಂತಿ-ನೆಮ್ಮದಿಯಿಂದ ಇರುತ್ತದೆ ಎಂದರು.
ಸ್ಥಳೀಯ ಪ್ರಮುಖರಾದ ಬಾಂಡ್ಯಾ ಸುಬ್ಬಣ್ಣ ಶೆಟ್ಟಿ, ಗುರುಕುಲ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮಾ ಎಸ್. ಶೆಟ್ಟಿ ಇದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಶೆಟ್ಟಿ ಅಂಪಾರು ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಆಕರ್ಷಿಕ ಸಾಂಸ್ಕೃತಿಕ ಕಾರ್ಯಗಳು ನಡೆಯಿತು.
ಗುರುಕುಲ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಕೆ.ಸಿ ರಾಜೇಶ್ ಪ್ರಸ್ತಾವನೆ ಮಾಡಿದರು. ಶಾಲೆಯ ಮುಖ್ಯಶಿಕ್ಷಕ ಸಂತೋಷ್ಕುಮಾರ ಶೆಟ್ಟಿ ಸ್ವಾಗತಿಸಿದರು, ಗುರುಕುಲ ಪಬ್ಲಿಕ್ ಶಾಲೆಯ ಸಂಯೋಜಕಿ ವಿಶಾಲಾ ಶೆಟ್ಟಿ ನಿರೂಪಿಸಿದರು, ಕೊಡ್ಲಾಡಿ ಶಾಲೆಯ ಸಹಶಿಕ್ಷಕಿ ಆಶ್ರಿತಾ ವಂದಿಸಿದರು.