ಕಪಾಳಕ್ಕೆ ಹೊಡೆದು ಸಚಿವ ಸೋಮಣ್ಣ ತನ್ನ ಮಹಿಳಾ ವಿರೋಧಿ ಮನಸ್ಥಿತಿ ತೋರಿಸಿದ್ದಾರೆ – ರಮೇಶ್ ಕಾಂಚನ್

Spread the love

ಕಪಾಳಕ್ಕೆ ಹೊಡೆದು ಸಚಿವ ಸೋಮಣ್ಣ ತನ್ನ ಮಹಿಳಾ ವಿರೋಧಿ ಮನಸ್ಥಿತಿ ತೋರಿಸಿದ್ದಾರೆ – ರಮೇಶ್ ಕಾಂಚನ್

ಉಡುಪಿ: ಗುಂಡ್ಲುಪೇಟೆಯಲ್ಲಿ ಅಹವಾಲು ಹೇಳಲು ಬಂದ ಬಡ ಮಹಿಳೆಗೆ ಸಚಿವ ವಿ ಸೋಮಣ್ಣ ಕಪಾಳಕ್ಕೆ ಹೊಡೆದು ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಸಚಿವರ ಈ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಬಿಜೆಪಿ ಪಕ್ಷವು ಚುನಾವಣೆ ಬರುವ ಸಂದರ್ಭದಲ್ಲಿ ಶೃದ್ಧೆಯ ತಾಯಂದಿರೇ, ಮಾತೆಯರೇ, ಅಕ್ಕ-ತಂಗಿಯವರೇ, ಸ್ತ್ರೀಯ ಬಗ್ಗೆ ಗೌರವಯುತವಾಗಿ ಮಾತನಾಡುತ್ತಾರೆ. ಮಹಿಳೆಯರಿಗೆ ಗೌರವ ಕೊಡುವ ನಾಟಕವಾಡುತ್ತಾರೆ. ಆದರೆ ಸ್ತ್ರೀಯ ಮೇಲೆ ಇರುವ ಗೌರವ ಈಗ ಎಲ್ಲಿ ಹೋಯಿತು ?

ತನ್ನ ಕಷ್ಟವನ್ನು ಸರಕಾರದ ಬಳಿ ಹೇಳಲು ಬಂದ ಮಹಿಳೆಗೆ ಸಚಿವ ವಿ ಸೋಮಣ್ಣ ಕಪಾಳಕ್ಕೆ ಹೊಡೆದು ತಮ್ಮ ಮಹಿಳಾ ವಿರೋಧಿ ಮನಸ್ಥಿತಿಯನ್ನು ನಗ್ನಗೊಳಿಸಿದ್ದಾರೆ. ಸುರತ್ಕಲ್ ಟೋಲ್ ಗೇಟ್ ಹೋರಾಟದಲ್ಲಿ ಭಾಗಿಯಾಗಿದ್ದ ಪ್ರತಿಭಾ ಕುಳಾಯಿಯ ಕುರಿತು ಬಿಜೆಪಿ ಕಾರ್ಯಕರ್ತನೊಬ್ಬ ಅಸಭ್ಯವಾಗಿ ಮಾತನಾಡಿ ಈಗಾಗಲೇ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈ ಹಿಂದೆ ಬಿಜೆಪಿಯ ಪ್ರಭಾವಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಬ್ಬರು ಅಹವಾಲು ಹೇಳಲು ಬಂದಾಗ ಅಸಭ್ಯವಾಗಿ ಬೈದು ಅವಾಝ್ ಹಾಕಿ ಸುದ್ದಿಯಾಗಿದ್ದರು. ಪದೇ ಪದೇ ಮಹಿಳಾ ವಿರೋಧಿಯಾಗಿ ವರ್ತಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಬಿಜೆಪಿ ಪಕ್ಷ ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ಮಹಿಳಾ ವಿರೋಧಿ ನಿಲುವನ್ನು ಪ್ರದರ್ಶಿಸುತ್ತಿದೆ.

ದೀಪಾವಳಿ ಹಬ್ಬ ಎಂದರೆ ಭಾರತದಲ್ಲಿ ಸ್ತ್ರೀಯನ್ನು ಗೌರವಯುತವಾಗಿ ನೋಡುವ ಹಬ್ಬ. ಇಂತಹ ಪವಿತ್ರ ಹಬ್ಬದ ಸಂದರ್ಭದಲ್ಲಿ ತನ್ನ ಕಷ್ಟ ಹೇಳಲು ಬಂದ ಸ್ತ್ರೀಗೆ ಕಪಾಳಮೋಕ್ಷ ಮಾಡಿ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ ಸಚಿವ ವಿ ಸೋಮಣ್ಣ ಅವರ ಈ ಕೃತ್ಯದ ಕುರಿತು ಬಿಜೆಪಿ ಪಕ್ಷವು ಯಾಕೆ ಮೌನವಹಿಸಿದೆ ? ಸಂಸದೆ ಶೋಭಾ ಕರಂದ್ಲಾಜೆ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ? ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯಾಕೆ ಈ ಕುರಿತು ಪ್ರತಿಕ್ರಿಯಿಸಿಲ್ಲ ? ಸಚಿವ ವಿ ಸೋಮಣ್ಣ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು  ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love