ಕಪ್ಪಡಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾಮಹೋತ್ಸವ

Spread the love

ಕಪ್ಪಡಿಯಲ್ಲಿ ಒಂದು ತಿಂಗಳ ಕಾಲ ಜಾತ್ರಾಮಹೋತ್ಸವ

ಮೈಸೂರು: ಸಾಮಾನ್ಯವಾಗಿ ಜಾತ್ರೆಗಳು ಒಂದು, ಎರಡು ದಿನ, ವಾರಗಳ ಕಾಲ ನಡೆಯುತ್ತದೆ. ಆದರೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ವ್ಯಾಪ್ತಿಯ ಕಪ್ಪಡಿ ಕ್ಷೇತ್ರದಲ್ಲಿ ಶಿವರಾತ್ರಿಯಿಂದ ಆರಂಭವಾಗಿ ಯುಗಾದಿವರೆಗೆ ಅಂದರೆ ಸುಮಾರು ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ.

ಕಪ್ಪಡಿ ಕ್ಷೇತ್ರದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುತ್ತದೆ. ಹಲವರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆದು ಹೋಗುವುದರೊಂದಿಗೆ ಸಂಕಲ್ಪ ಮಾಡಿಕೊಂಡು ಹರಕೆಯನ್ನು ತೀರಿಸಿರಬಹುದು. ಈ ಕ್ಷೇತ್ರವು ಮೊದಲಿನಿಂದಲೂ ಸತ್ಯಾಸತ್ಯತೆಗೆ ಹೆಸರುವಾಸಿಯಾಗಿದ್ದು, ಬೇಡಿದ ವರವನು ಈಡೇರಿಸುವ ಪವಿತ್ರ ಸ್ಥಳವಾಗಿದೆ. ಜತೆಗೆ ಇಲ್ಲಿ ಇತರೆ ಕ್ಷೇತ್ರಗಳಂತೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ. ಬದಲಿಗೆ ಉರಿಗಣ್ಣ ರಾಚಪ್ಪಾಜಿಯವರ ಗದ್ದಿಗೆ ಮತ್ತು ಚೆನ್ನಮ್ಮಾಜಿಯವರ ಗದ್ದುಗೆಯಿದ್ದು, ಇದರ ದರ್ಶನ ಮಾಡಿ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತರು ಬೇಡಿಕೊಳ್ಳುತ್ತಾರೆ. ಇಲ್ಲಿನ ದೇವರ ಮಹಿಮೆ ಮತ್ತು ಪವಾಡಗಳ ಬಗ್ಗೆ ನೂರಾರು ನಿದರ್ಶನಗಳು ಸಿಗುತ್ತವೆ. ರಾಚಪ್ಪಾಜಿ ಮತ್ತು ಚೆನ್ನಮ್ಮಾಜಿಯ ಕುರಿತಂತೆ ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಅವರ ಕಾವ್ಯದಲ್ಲಿ ವರ್ಣಿಸಿರುವುದನ್ನು ನಾವು ಗಮನಿಸಬಹುದಾಗಿದೆ.

ಕಪ್ಪಡಿ ಜಾತ್ರೆಗೆ ಕೇವಲ ಮೈಸೂರು ವ್ಯಾಪ್ತಿಯಲ್ಲದೆ, ರಾಜ್ಯದ ವಿವಿಧ ಕಡೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುವುದನ್ನು ಕಾಣಬಹುದಾಗಿದೆ. ಜಾತ್ರಾ ಸಮಯದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸುವ ಜವಬ್ದಾರಿ ಪಾರಂಪರಿಕವಾಗಿ ಮಳವಳ್ಳಿ ಮತ್ತು ಬೊಪ್ಪೆಗೌಡನಪುರದ ಅರಸು ಗುರು ಮನೆತನದವರಿಗೆ ಬಂದಿದ್ದು, ಪ್ರತಿವರ್ಷವೂ ಒಬ್ಬರು ಜಾತ್ರಾ ಸಮಯದಲ್ಲಿ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಶಿವರಾತ್ರಿಯಿಂದ ಯುಗಾದಿವರೆಗೆ ಸುಮಾರು ಒಂದು ತಿಂಗಳ ಕಾಲ ನಡೆಯುವ ಜನ ಜಾತ್ರೆಯಲ್ಲಿ ಒಂದೊಂದು ದಿನವೂ ಒಂದೊಂದು ಗ್ರಾಮದ ಜನತೆ ದೇವರಿಗೆ ಹರಕೆ ಒಪ್ಪಿಸಿ ಪೂಜೆ ಸಲ್ಲಿಸುವುದು ವಾಡಿಕೆ, ಇದೇ ವೇಳೆ ಭಕ್ತರು ಕೋಳಿ, ಕುರಿ, ಮೇಕೆಯನ್ನು ಬಲಿಕೊಟ್ಟು ಹರಕೆ ತೀರಿಸುತ್ತಾರೆ. ದೇವರಿಗೆ ಹರಕೆಯಾಗಿ ಪ್ರಾಣಿ ಬಲಿ ನೀಡುವುದು ಇಲ್ಲಿನ ಸಂಪ್ರದಾಯವಾಗಿದೆ.

ಜಾತ್ರೆ ದಿನಗಳು ಮಾತ್ರವಲ್ಲದೆ, ಇತರೆ ದಿನಗಳಲ್ಲಿಯೂ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆಗಳನ್ನು ತೀರಿಸುತ್ತಾರೆ. ಅಷ್ಟೇ ಅಲ್ಲದೆ, ತಾಲೂಕು ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಆಸ್ತಿ, ಪಾಸ್ತಿ, ಯಾವುದೇ ವ್ಯವಹಾರದಲ್ಲಿ ಲೋಪ, ತಕರಾರು, ಪ್ರಕರಣಗಳು, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಘರ್ಷಣೆ, ಒಡಕು, ಉದ್ಬವವಾದಾಗ ರಾಚಪ್ಪಾಜಿಯವರ ಮೇಲೆ ಆಣೆ ಪ್ರಮಾಣ ಮಾಡುತ್ತಾರೆ. ಇವತ್ತಿಗೂ ಕೋರ್ಟ್, ಕಚೇರಿ, ಪಂಚಾಯಿತಿಗಳಲ್ಲಿ ಇತ್ಯರ್ಥವಾಗದ ಹಲವಾರು ಪ್ರಕರಣಗಳನ್ನು ಜನರು ಸನ್ನಿಧಿಗೆ ಬಂದು ಆಣೆ ಪ್ರಮಾಣ ಮಾಡಿ ಬಗೆಹರಿಸಿಕೊಳ್ಳುವುದನ್ನು ಕಾಣಬಹುದಾಗಿದೆ.

ಧರೆಗೆ ದೊಡ್ಡವರೆಂದೇ ಹೆಸರಾದ ರಾಚಪ್ಪಾಜಿ ಚೆನ್ನಮ್ಮಾಜಿ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರಾಗಿದ್ದು, ಇವರು ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು, ಮಾರ್ಗವಾಗಿ ಬಂದು ಕಾವೇರಿ ನದಿ ತಟದ ದಟ್ಟ ಕಾಡಿನಿಂದ ಆವೃತವಾಗಿದ್ದ ಕಪ್ಪಡಿಯಲ್ಲಿ ನೆಲೆಸಿದರೆಂಬ ಪುರಾಣ ಐಹಿತ್ಯವಿದೆ.

ಇನ್ನೊಂದೆಡೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿ ತಮಗೆ ಶಿವಯೋಗ ಮಂದಿರವನ್ನು ನಿರ್ಮಿಸುವಂತೆ ಕೇಳಿಕೊಂಡರಂತೆ ಅದರಂತೆ ಗುರುವಿನೆಡೆಗೆ ಬಂದ ಉಪ್ಪಲಗಶೆಟ್ಟಿ ಬಾವಿಯನ್ನು ತೋಡಿ ನಂದಾದೀವಿಗೆ ಗೂಡನ್ನು ಕೊರೆದು ವರವೊಂದನ್ನು ಬೇಡಿದನಂತೆ. ಅದಕ್ಕೆ ಗುರು ಒಪ್ಪಿದಾಗ ಉಪ್ಪಲಗಶೆಟ್ಟಿಯು ತಮ್ಮ ನಂತರದ ದಿನ ಉರಿಗದ್ದುಗೆಯ ಮೇಲಿರುವ ರುಮಾಲು ಪಡೆಯಬೇಕೆಂದು ಅಣತಿ ಮಾಡುತ್ತಾನೆ.

ಆಗ ಈ ಮನುಷ್ಯನ ಹಂಗು ತಮಗಿನ್ನು ಬೇಡವೆಂದು ರಾಚಪ್ಪಾಜಿ ತಂಗಿ ಚೆನ್ನಮ್ಮಾಜಿಯವರೊಡನೆ ಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದರು ಎಂಬ ಕಥೆಗಳು ಇವೆ. ಅಷ್ಟೇ ಅಲ್ಲದೆ, ಅಂದಿನಿಂದ ಕಪ್ಪಡಿಯಲ್ಲಿ ಪೂಜಾ ಕಾರ್ಯಗಳು ಆರಂಭಗೊಂಡವೆಂದೂ, ಕಾಲಾಂತರದಲ್ಲಿ ಮೈಸೂರು ಅರಸರು ಪೂಜಾ ಕೈಂಕರ್ಯಗಳನ್ನು ನಡೆದುಕೊಂಡು ಬಂದರೆಂದು ಹೇಳಲಾಗುತ್ತಿದೆ.

ಕಪ್ಪಡಿ ಕ್ಷೇತ್ರವು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೆಬ್ಬಾಳಿನಿಂದ ಎಂಟು ಕಿ.ಮೀ.ದೂರದಲ್ಲಿ ಕಾವೇರಿ ನದಿ ತೀರದಲ್ಲಿದೆ. ದೂರದಿಂದ ಬರುವವರು ಕೆ.ಆರ್.ನಗರಕ್ಕೆ ಬಂದು ಅಲ್ಲಿಂದ ಮುಂದಕ್ಕೆ ತೆರಳಲು ವಾಹನಗಳ ವ್ಯವಸ್ಥೆಯೂ ಇದೆ. ಸಾಮಾನ್ಯವಾಗಿ ವರ್ಷದ ಎಲ್ಲ ದಿನಗಳಲ್ಲಿಯೂ ಭಕ್ತರು ಆಗಮಿಸುತ್ತಾರೆಯಾದರೂ ಜಾತ್ರಾ ಸಮಯದಲ್ಲಿ ಭಕ್ತಸಾಗರವೇ ಹರಿದು ಬರುವುದನ್ನು ಕಾಣಬಹುದಾಗಿದೆ.


Spread the love