
ಕಬಾಬ್ ಮಾರುವವನಿಗೆ ಆರ್.ಎಸ್.ಎಸ್ ಪ್ರಚಾರಕರ ವೇಷ: ಚೈತ್ರಾ ಕುಂದಾಪುರಳನ್ನು ನಂಬಿ ಕೆಟ್ಟ ‘ಗೋವಿಂದ’!
ಬೆಂಗಳೂರು: ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರಳಿಂದ ವಂಚನೆಗೊಳಗಾದ ಗೋವಿಂದ ಬಾಬು ಪೂಜಾರಿ ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ಮೂಲದ ಉದ್ಯಮಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿದ ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಸುಮಾರು 7 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.
7 ನೇ ತರಗತಿ ಕಲಿತು ಉದ್ಯಮ ಆರಂಭಿಸಿ 5 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾತನಾದ ಗೋವಿಂದ ಬಾಬು ಪೂಜಾರಿ
ಬೈಂದೂರಿನ ಬಳಿಯ ಬೀಜೂರಿನ ಕೃಷಿ ಕುಟುಂಬದಲ್ಲಿ ಜನಿಸಿದ ಗೋವಿಂದ ಅವರು ಕಲಿತದ್ದು 7ನೇ ತರಗತಿ. ಸಂಪಾದನೆಗಾಗಿ ಮುಂಬೈ ಶಹರ ಸೇರಿದ ಗೋವಿಂದ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಈ ವೇಳೆ ಸ್ವಂತದ್ದೇನಾದರೂ ಮಾಡಬೇಕೆಂಬ ಉದ್ದೇಶದಿಂದ ಕಿರಾಣಿ ಅಂಗಡಿಯನ್ನು ತೆರೆದಿದ್ದರು. ಆದರೆ ಅದು ಕೈ ಹಿಡಿಯದ್ದರಿಂದ ಮತ್ತೆ ಹೊಟೇಲ್ ಕಡೆಗೆ ಮುಖಮಾಡಿದರು. ಮುಂಬೈನ ಪೈವ್ ಸ್ಟಾರ್ ಹೋಟೆಲೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡ ಅವರು ಅಡುಗೆಯನ್ನು ಆಸಕ್ತಿಯಿಂದ ಕಲಿತುಕೊಂಡು ಶೆಫ್ ಆದರು.
2007ರಲ್ಲಿ ಮತ್ತೆ ಸ್ವಂತ ಉದ್ಯಮದ ಗುರಿಯೊಂದಿಗೆ `ಷೆಫ್ ಟಾಕ್ ಕೇಟರಿಂಗ್ ಸರ್ವೀಸಸ್’ ಅನ್ನು ಪ್ರಾರಂಭಿಸಿದರು. ಅಂದು ಅವರ ಕೆಟರಿಂಗ್ ನಲ್ಲಿ ಇದ್ದಿದ್ದು 7 ನೌಕರರು. ಇದೇ ಮುಂದೆೆ `ಷೆಫ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಆಯಿತು. ಇಂದು ಈ ಸಂಸ್ಥೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮಾತ್ರವಲ್ಲದೆ ಆಂಧ್ರಪ್ರದೇಶ, ಜಾರ್ಖಂಡ್, ಮುಂಬೈ, ಗುಜರಾತ್ ಗಳಲ್ಲೂ ಇವರ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇವರ ಅತ್ಯಾಧುನಿಕ ಕಿಚನ್ ಗಳು ಅನೇಕ ಕಾರ್ಪೋರೇಟೆ ಕಂಪನಿಗಳಿಗೆ ಸೇವೆ ಒದಗಿಸುತ್ತಿದೆ.
ಇಷ್ಟು ಮಾತ್ರವಲ್ಲದೆ ಅವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮತ್ಸ್ಯಬಂಧನ ಕಂಪನಿಯ ಸಹಯೋಗದೊಂದಿಗೆ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್ಸ್ ಗಳನ್ನು ತಯಾರಿಸುವ ಕಾರ್ಯಕ್ಕೂ ಕೈ ಹಾಕಿದ್ದರು. ಜೊತೆಗೆ ಪ್ರಜ್ಞಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥೆಗಳನ್ನೂ ಸ್ಥಾಪಿಸಿ ಖ್ಯಾತರಾದರು. ಇಂದು ಅವರು ನೂರಾರು ಕೋಟಿ ವಹಿವಾಟು ನಡೆಸುವ ಯಶಸ್ವಿ ಉದ್ಯಮಿ.
ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿದ ಗೋವಿಂದ ಪೂಜಾರಿ ಸಮಾಜಕ್ಕೆ ಒಳಿತು ಮಾಡಬೇಕೆಂಬ ಉದ್ದೇಶದಿಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಬಡವರಿಗೆ ನಾನಾ ರೀತಿಯ ಸಹಾಯ ಮಾಡುತ್ತಿದ್ದಾರೆ. ಬೈಂದೂರಿನಲ್ಲೇ ಬಡವರಿಗೆ 9 ಮನೆ ಕಟ್ಟಿ ಕೊಟ್ಟಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.
ಗೋವಿಂದ ಅವರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡ ಚೈತ್ರಾ
ಹೀಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿದ್ದ ಅವರಿಗೆ ರಾಜಕೀಯಕ್ಕೆ ಕ್ಷೇತ್ರಕ್ಕೆ ಧುಮಿಕಿ ಜನರ ಸೇವೆ ಮಾಡಬೇಕೆಂದು ಅಂದುಕೊಂಡಿದ್ದರು. ಆದರೆ ರಾಜಕೀಯ ಜ್ಞಾನ ಹೊಂದಿರಲಿಲ್ಲ. ಹೇಗಾದರೂ ಮಾಡಿ ಬಿಜೆಪಿ ಟಿಕೆಟ್ ಪಡೆಯಬೇಕೆಂಬ ಕಾರಣದಿಂದ ಬಿಜೆಪಿಯಲ್ಲಿ ಗಣ್ಯರ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಿದ್ದರು. ಉಡುಪಿ ಜಿಲ್ಲೆಗೆ ಯಾರೇ ಬಿಜೆಪಿ ಗಣ್ಯ ಮುಖಂಡರು ಬಂದರೂ ಅವರನ್ನು ಭೇಟಿಯಾಗುತ್ತಿದ್ದರು. ಈ ಹಂತದಲ್ಲಿಅವರಿಗೆ ಚೈತ್ರಾ ಕುಂದಾಪುರಳ ಪರಿಚಯವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಫೈರ್ ಬ್ರಾಂಡ್ ಹಿಂದೂಪರ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿದ್ದ ಆಕೆ ಗೋವಿಂದ ಅವರ ಮುಗ್ಧತೆಯನ್ನು ಚೆನ್ನಾಗಿ ದುರುಪಯೋಗಿಸಿಕೊಂಡಳು. ಆಕೆಯನ್ನು ನಂಬಿ ಹಣ ನೀಡಿದ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿ ಇದೀಗ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಹೌದು, ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬಡತನದಲ್ಲಿ ಬೆಳೆದು, ಹೋಟೆಲ್ನಲ್ಲಿ ಕೆಲಸ ಮಾಡಿ, ಇದೀಗ ಸ್ವಂತ ಹೋಟೆಲ್ ಸ್ಥಾಪಿಸಿ. ಶಿಫ್ ಟಾಪ್ ಎಂಬ ಕಿಚನ್ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಮಾಜಸೇವೆ, ಧಾರ್ಮಿಕ, ಶೈಕ್ಷಣಿಕ ಸಹಕಾರವನ್ನು ಮಾಡುತ್ತಾ ಬೈಂದೂರಿನಲ್ಲಿ ಓಡಾಡಿಕೊಂಡಿದ್ದರು. ಇದೇ ಸಮಯದಲ್ಲಿ ರಾಷ್ಟ್ರೀಯತೆ ದೇಶ, ಧರ್ಮ, ಜಾತಿ, ನೀತಿ ಎಂದು ರಾಜ್ಯಾದ್ಯಂತ ಭಾಷಣ ಮಾಡಿಕೊಂಡಿದ್ದ ಚೈತ್ರಾ ಬೈಂದೂರಿನ ಟಿಕೆಟ್ ಡೀಲ್ಗೆ ಇಳಿದಿದ್ದಳು. ತಾನೊಂದು ಟೀಮ್ ಕಟ್ಟಿಕೊಂಡು ಗೋವಿಂದಬಾಬು ಪೂಜಾರಿ ಅವರನ್ನು ಸಂಪರ್ಕ ಮಾಡಿ ಬಿಜೆಪಿ, ಆರ್.ಎಸ್. ಎಸ್ ಸಂಘ, ರಾಷ್ಟ್ರದ ನಾಯಕರು ಪರಿಚಯ ಎಂದು ಕನಸಿನ ಗೋಪುರ ಕಟ್ಟಿಸಿದ್ದಾಳೆ. ಎಲ್ಲವನ್ನೂ ನಂಬಿದ ಗೋವಿಂದ ಬಾಬು ಪೂಜಾರಿ ಹಂತ ಹಂತವಾಗಿ ಐದೂವರೆ ಕೋಟಿ ರೂಪಾಯಿ ನೀಡಿದ್ದಾರೆ.
ಹತ್ತು ತಿಂಗಳ ಹಿಂದೆಯ ಪ್ಲಾನ್ ಮಾಡಿಕೊಂಡಿದ್ದ ಚೈತ್ರ ಮತ್ತು ಗ್ಯಾಂಗ್ ಮೊದಲಿಗೆ ಪರಿಚಯ ಮಾಡಿದ್ದು ಚಿಕ್ಕಮಗಳೂರಿನ ಗಗನ್ ಕಡೂರ್ ಅವರನ್ನು. ಗಗನ್ ಅವರಿಗೆ ಪ್ರಧಾನಿ ಮತ್ತು ಗೃಹ ಕಛೇರಿಯ ನಿಕಟ ಸಂಪಕರ್ದಲ್ಲಿರುವವನು ಎಂದು ಚಿಕ್ಕಮಗಳೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬಾಬು ಪೂಜಾರಿಗೆ ಗಗನನ್ನು ಚೈತ್ರ ಪರಿಚಯ ಮಾಡಿಸಿದ್ದಳು. ಅಲ್ಲಿಂದಲೇ ಕೋಟಿ ಕೋಟಿ ಲೂಟಿ ಮಾಡಲು ಪ್ಲಾನ್ ಮಾಡಿದ್ದ ಚೈತ್ರ. ಮತ್ತೆ ಒಬ್ಬ ಒಬ್ಬರನ್ನು ಕಥೆಗೆ ತಕ್ಕಂತೆ ಸೀನ್ ಕ್ರಿಯೆಟ್ ಮಾಡಿದ್ದರು.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿರುವ ಕಥೆ ಸಿನಿಮಾಗಿಂತಲೂ ರೋಚಕವಾಗಿದ್ದು, ಚೈತ್ರಾ ಕುಂದಾಪುರ ಸ್ವತಃ ತಾವೇ ಮೂವರು ಕೇಂದ್ರ ಬಿಜೆಪಿ ನಾಯಕರನ್ನು ಸೃಷ್ಟಿಸಿ ಉದ್ಯಮಿಯನ್ನು ನಂಬಿಸಿರುವುದು ಬಯಲಾಗಿದೆ.
ಕಬಾಬ್ ಮಾರುವವನಿಗೆ ಆರ್.ಎಸ್.ಎಸ್ ಪ್ರಚಾರಕರ ವೇಷ
ಚೈತ್ರಾ ಕುಂದಾಪುರ ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಆರ್ಎಸ್ಎಸ್ ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ ಏಳು ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವ್ಯವಸ್ಥಿತ ಪ್ಲಾನ್ ಮಾಡಿದ್ದ ಚೈತ್ರಾ ಕುಂದಾಪುರ ನಕಲಿ ಕೇಂದ್ರದ ನಾಯಕರನ್ನೇ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ. ಸಲೂನ್ ಕೆಲಸಗಾರರು, ಕಬಾಬ್ ಮಾರುವವರನ್ನೇ ಬಿಜೆಪಿಯ ಕೇಂದ್ರದ ನಾಯಕರು ಎಂದು ಉದ್ಯಮಿಗೆ ನಂಬಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್ ಒಂದರಲ್ಲಿ ಮೇಕಪ್ ಮಾಡುವ ರಮೇಶ್ ಹಾಗೂ ಧನರಾಜ್ ಎಂಬವರನ್ನು ಆರ್ಎಸ್ಎಸ್ ಪ್ರಚಾರಕರು ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಪರಿಚಯ ಮಾಡಿಸಲಾಗಿತ್ತು. ಅದಲ್ಲದೇ ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿ ಉದ್ಯಮಿಯನ್ನು ಮೋಸದ ಬಲೆಗೆ ಚೈತ್ರಾ ಕುಂದಾಪುರ ಸಿಲುಕಿಸಿದ್ದರು.
ಇನ್ನು ಈಕೆ ಕಥಗೆ ಎಂಟ್ರಿ ಕೊಟ್ಟಿದ್ದು ವಿಶ್ವನಾಥ್ ಜಿ. ವಿಶ್ವನಾಥ್ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದು, ಟಿಕೆಟ್ ಫೈನಲ್ ಆಗ ಬೇಕಾದ್ರೆ ಸಂಘದವರು ಪ್ರಮುಖರಾಗಿರುತ್ತಾರೆ ಎಂದು ವಿಶ್ವನಾಥ್ ಜಿ ಸೀನ್ ಕ್ರಿಯೆಟ್ ಮಾಡಿದ್ದ ಚೈತ್ರ. ಬಳಿಕ ವಿಶ್ವನಾಥ್ ಜಿ ಯನ್ನು ಬಾಬು ಪೂಜಾರಿಯವರಿಗೆ ಪರಿಚಯ ಮಾಡಿ, ಮೊದಲಿಗೆ 50 ಸಾವಿರ ಕೊಡಿ ಟಿಕೆಟ್ ಘೋಷಣೆಯ ಸಮಯದಲ್ಲಿ 3 ಕೋಟಿ ವಿಶ್ವನಾತ್ ಜಿ ಗೆ ಕೊಡಿ ಎಂದು ಹೇಳಿದ್ದಳು.
ಐದುವರೆ ಕೋಟಿ ರೂಪಾಯಿ ಕಳೆದುಕೊಂಡ ಗೋವಿಂದ ಬಾಬು ಪೂಜಾರಿ ಶಾಕ್ಗೆ ಒಳಗಾಗಿದ್ದರು. ಇದೆಲ್ಲವೂ ಸಹಜವಾಗಿ ನಡೆಯುತ್ತಿಲ್ಲವಲ್ಲ ಎಂಬ ಗುಮಾನಿ ಅವರಿಗೆ ಬಂದಿತ್ತು. ತನ್ನ ದೆಹಲಿಯ ಗೆಳೆಯನ ಮೂಲಕ ತನಿಖೆ ಮಾಡಿಸಿದಾಗ ವಿಶ್ವನಾಥ್ ಎಂಬ ವ್ಯಕ್ತಿಯೇ ಇಲ್ಲ ಎಂದು ಗೊತ್ತಾಗಿಬಿಟ್ಟಿದೆ. ಕೂಡಲೇ ಹಣವನ್ನು ವಾಪಸ್ ಕೇಳಿದಾಗ ತಾನು ಮೋಸ ಹೋಗಿರುವುದು ತಿಳಿದುಬಿಟ್ಟಿದೆ. ಅಷ್ಟರಲ್ಲಿ ಚುನಾವಣೆ ಬಂದಿದೆ. ಗುರುರಾಜ್ ಗಂಟೆ ಹೊಳಿಗೆ ಟಿಕೆಟ್ ಸಿಕ್ಕಿ, ಅವರ ಗೆಲುವು ಆಗಿದೆ. ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿದ್ದರೂ, ಗೋವಿಂದ ಬಾಬು ಪೂಜಾರಿ ದೂರು ನೀಡಿರಲಿಲ್ಲ. ಈ ನಡುವೆ ವಾಟ್ಸಾಪ್ ಫೇಸ್ ಬುಕ್ ನಲ್ಲಿ ಅನಾಮಿಕ ಪತ್ರ ಒಂದು ಹರಿದಾಡಲು ಶುರು ಆಯ್ತು. ಕೋಟಿ ಕೋಟಿ ನುಂಗಿದ್ದು ಹೇಗೆ ಎಂಬ ಸವಿವರವಾದ ಕಥೆ ಎಲ್ಲೆಡೆ ಓಡಾಡಿತು. ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದ ಗೋವಿಂದ ಬಾಬು ಪೂಜಾರಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದರು.
ಉಡುಪಿಯಲ್ಲಿ ಸಿನಿಮೀಯ ರೀತಿಯಲ್ಲಿ ಬಂಧನಕ್ಕೊಳಗಾದ ಚೈತ್ರಾ
ಪ್ರಕರಣ ದಾಖಲಾಗುತ್ತಿದ್ದಂತೆ ಚೈತ್ರ ಅವರ ಇಡೀ ಗ್ಯಾಂಗ್ ರಾಜ್ಯದ ಅಲ್ಲಲ್ಲಿ ತಲೆಮರಿಸಿಕೊಂಡಿದೆ. ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದ ಚೈತ್ರ ಉಡುಪಿ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಉತ್ತರ ಕರ್ನಾಟಕ ಎಂದು ಓಡಾಡಿದ್ದಾರೆ. ಯಾವ್ಯಾವುದೋ ನಂಬರ್ ಇಂದ ತನ್ನ ಗೆಳೆಯರನ್ನು ಸಂಪರ್ಕ ಮಾಡುತ್ತಿದ್ದಳು. ಚೈತ್ರ ಕುಂದಾಪುರಾಳ ಪಟಾಲಾಂನ ಮೇಲೆ ಕಣ್ಣಿಟ್ಟ ಸಿಸಿಬಿ ಪೊಲೀಸರು ಆಪ್ತ ನೊಬ್ಬನನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಚೈತ್ರ ಕುಂದಾಪುರ ಫೋನ್ ಬಂದಿದ್ದು ಉಡುಪಿಯ ಡಯಾನ ಸಮೀಪ ಅಪಾರ್ಟ್ಮೆಂಟ್ ಒಂದರಲ್ಲಿ ಅವಿತು ಕುಳಿತಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಉಡುಪಿ ಕೃಷ್ಣಮಠಕ್ಕೆ ಕರೆಸಿದ ಪೊಲೀಸರು ಸ್ವಯಂಘೋಷಿತ ಹಿಂದೂ ನಾಯಕಿಯ ಹೆಡೆಮುರಿ ಕಟ್ಟಿದರು.
ಪ್ರಕರಣದ ಎಫ್ಐಆರ್ನಲ್ಲಿ ಎಂಟು ಮಂದಿಯ ಹೆಸರು ದಾಖಲಾಗಿದೆ. ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಕೀಯದ ಆಸೆಗೆ ಬಲಿಯಾಗಿ ಎಷ್ಟು ಜನ ಕಾಸು ಕಳೆದುಕೊಂಡಿದ್ದಾರೋ ಗೊತ್ತಿಲ್ಲ. ಈ ಪ್ರಕರಣ ಬೆಳಕಿಗೆ ಬಂದ ನಂತರ ಮತ್ತಷ್ಟು ಟಿಕೆಟ್ ಡೀಲ್ಗಳು ಹೊರಬರುವ ಸಾಧ್ಯತೆ ಇದೆ.
ತಾನು ವಂಚನೆಗೊಳಗಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಗೋವಿಂದ ಬಾಬು ಅವರು ಫೇಸ್ ಬುಕ್ಕಿನಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. “ಒಬ್ಬರಿಗೆ ಸಾಧ್ಯ ಆದರೆ ಮಾತ್ರ ಸಹಾಯ ಮಾಡಿ. ಆಗದಿದ್ದರೆ ಮೋಸ ಮಾಡಬೇಡಿ.ನೀವು ಮಾಡಿದ ಸಹಾಯ ಅಥವಾ ಮೋಸದ ಪ್ರತಿಫಲ ದೇವರು ನಿಮಗೆ ನೀಡುತ್ತಾನೆ” ಎಂದು ಬರೆದುಕೊಂಡಿದ್ದರು. ಬುಧವಾರ ಹಾಕಿರುವ ಈ ಪೋಸ್ಟಿಗೆ ಅಪಾರ ಸಹಾನುಭೂತಿ ವ್ಯಕ್ತವಾಗಿದೆ.
ಸದ್ಯ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಅತ್ಯಂತ ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಈಕೆ ಏಕಾಏಕಿ ಕೋಟ್ಯಾಧೀಶೆ ಆಗುವ ಕನಸು ಕಂಡ ಕಥೆ ಮಾತ್ರ ರೋಚಕವೇ ಸರಿ.