ಕಬಿನಿ ಜಲಾಶಯದಿಂದ ಹರಿಯಲಿದೆ ಕೆರೆಗಳಿಗೆ ನೀರು

Spread the love

ಕಬಿನಿ ಜಲಾಶಯದಿಂದ ಹರಿಯಲಿದೆ ಕೆರೆಗಳಿಗೆ ನೀರು

ಮೈಸೂರು: ಕಬಿನಿ ಜಲಾಶಯದ ವ್ಯಾಪ್ತಿಯ ಕೆರೆಗಳಿಗೆ ಜಲಾಶಯದಿಂದ ನೀರು ಹರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು ಇದರಿಂದ ಸುಮಾರು 52 ಕೆರೆಗಳಿಗೆ ಜೀವಕಳೆ ಬರಲಿದೆ.

ಸರ್ಕಾರದ ಈ ತೀರ್ಮಾನದಿಂದ ರೈತರು ಹರ್ಷಗೊಂಡಿದ್ದಾರೆ. ಕಳೆದ ಒಂದೆರಡು ವಾರಗಳಿಂದ ಕೇರಳದಲ್ಲಿ ಮಳೆ ಕ್ಷೀಣಗೊಂಡಿರುವ ಕಾರಣ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಮುಂದೆ ಮುಂಗಾರು ಚೇತರಿಸಿಕೊಂಡರೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಇದೀಗ ಜಲಾಶಯದಿಂದ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಕೈಗೊಂಡಿರುವ ಕ್ರಮದಿಂದ ರೈತರಿಗೆ ಸಹಾಯವಾಗಿದೆ. ಆದರೆ ಭತ್ತದ ಬೆಳೆಗೆ ನೀರು ಹರಿಸುವುದು ವಿಳಂಬವಾಗಿರುವ ಕಾರಣ ಕಬಿನಿ ನೀರಿನಾಶ್ರಿತ ರೈತರು ಗೊಂದಲಕ್ಕೀಡಾಗಿದ್ದಾರೆ. ಈ ನಡುವೆ ಮಳೆಯನ್ನು ನಂಬಿ ಬೆಳೆದ ಜೋಳ ಮಳೆ ಬಾರದೆ ಒಣಗುವಂತಾಗಿದೆ. ಸದ್ಯ ಕೆರೆಗಳಿಗೆ ನೀರು ತುಂಬಿಸುವ ತೀರ್ಮಾನದಿಂದ ರೈತರಿಗೆ ಅನುಕೂಲವಾಗುವುದಂತು ಖಚಿತ.

ಸದ್ಯ ಕಬಿನಿ ಜಲಾಶಯದಲ್ಲಿ 14.5 ಟಿಎಂಸಿ ನೀರಿದ್ದು, ಈ ಪೈಕಿ ಒಂದು ಟಿಎಂಸಿ ನೀರನ್ನು 15 ದಿನಗಳ ಅವಧಿಯಲ್ಲಿ 52 ಕೆರೆಗಳಿಗೆ ತುಂಬಿಸಲು ಹಾಗೂ ಐದು ಟಿ.ಎಂ.ಸಿ. ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಕಬಿನಿ ಜಲಾಶಯ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇಂದಿನ ನೀರಿನ ಲಭ್ಯತೆ ಮತ್ತು ಹಿಂದಿನ ವರ್ಷಗಳ ಅನುಭವದ ಮೇಲೆ ಈಗ ಈ ವ್ಯಾಪ್ತಿಯ ಎಲ್ಲಾ 52 ಕೆರೆಗಳಿಗೆ ನೀರು ತುಂಬಿಸಲು ಜಲಾಶಯದಿಂದ ನೀರು ಬಿಡಲಾಗುವುದು. ಕಬಿನಿಯಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿದೆ. ಒಂದೆರಡು ಸಂಸ್ಥೆಯವರು ಆಸಕ್ತಿ ವಹಿಸಿ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.


Spread the love