ಕಬಿನಿ ನೀರು ಸರಬರಾಜು ಕೇಂದ್ರಕ್ಕೆ ಶಾಸಕ ರಾಮದಾಸ್ ಭೇಟಿ

Spread the love

ಕಬಿನಿ ನೀರು ಸರಬರಾಜು ಕೇಂದ್ರಕ್ಕೆ ಶಾಸಕ ರಾಮದಾಸ್ ಭೇಟಿ

ಮೈಸೂರು: ಕಬಿನಿಯಿಂದ ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಮೈಸೂರು ಕೆ.ಆರ್. ಕ್ಷೇತ್ರದ ಶಾಸಕ ಎಸ್‍.ಎ.ರಾಮದಾಸ್ ಅವರು ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಎಸ್‍.ಎ.ರಾಮದಾಸ್ ಅವರು ಪ್ರಸ್ತುತ ಕಬಿನಿ ನೀರು ಸರಬರಾಜು ಯೋಜನೆಯಿಂದ 60 ಎಂ.ಎಲ್.ಡಿ. ನೀರನ್ನು ಶುದ್ಧೀಕರಿಸಿ ಮೈಸೂರು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ಈ ಯೋಜನೆಯ ಜಾಕ್‌ವೆಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ನೀರು ಮೇಲೆತ್ತಲಾಗುತ್ತಿದ್ದರೂ ಶುದ್ಧೀಕರಣ ಘಟಕದ ಸಾಮರ್ಥ್ಯವು ಕೇವಲ 60 ಎಂ.ಎಲ್.ಡಿ. ಇದೆ. ಹೀಗಾಗಿ ಹೆಚ್ಚುವರಿ ನೀರನ್ನು ನಾಲೆಗೆ ಹೊರಬಿಡಲಾಗುತ್ತಿತ್ತು.

ಆದರೆ ನಾಲೆಗೆ ಬಿಡುತ್ತಿದ್ದ ನೀರನ್ನು ನಗರಕ್ಕೆ ಸರಬರಾಜು ಮಾಡುವ ಸಂಬಂಧ ಕಬಿನಿ 2ನೇ ಹಂತದ ಮೊದಲನೇ ಭಾಗವಾಗಿ 22 ಎಂ.ಎಲ್.ಡಿ. ಸಾಮರ್ಥ್ಯದ ನೀರನ್ನು ಶುದ್ಧೀಕರಿಸುವ ಟ್ಯೂಬ್ ಸೆಟ್ಲರ್ ಮತ್ತು ರ‍್ಯಾಪಿಡ್ ಸ್ಯಾಂಡ್ ಫಿಲ್ಟರ್ ಬೆಡ್ ಘಟಕಗಳನ್ನು ಒಟ್ಟು ರೂ. 8 ಕೋಟಿ ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಠೇವಣಿ ವಂತಿಕೆ ಮತ್ತು ೧೩ನೇ ಹಣಕಾಸು ಯೋಜನೆಯಲ್ಲಿ ನಡೆಸಲಾಗುತ್ತಿದ್ದು, ಅಯ್ಯಪ್ಪ ಕನ್ ಸ್ಟ್ರಕ್ಷನ್ ಮೂಲಕ ಗುತ್ತಿಗೆದಾರ ಅಯ್ಯಪ್ಪ ಕಾಮಗಾರಿ ನಡೆಸುತ್ತಿದ್ದಾರೆ. ಕಾಮಗಾರಿ ಕಳೆದ ವರ್ಷವೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ

ಪ್ರಸ್ತುತ ಟ್ಯೂಬ್ ಮಾಡ್ಯೂಲ್ ಕಾಮಗಾರಿಯು ಶೇ 70 ರಷ್ಟು ಮಾತ್ರ ಪೂರ್ಣಗೊಂಡಿದ್ದು, ರ‍್ಯಾಪಿಡ್ ಸ್ಯಾಂಡ್ ಕಾಮಗಾರಿಯು ಶೇ.40 ರಷ್ಟು ಪೂರ್ಣಗೊಂಡಿರುವುದಾಗಿ ಹೇಳಿದ್ದಾರೆ.

ಈ ಘಟಕಗಳ ಸಾಮರ್ಥ್ಯವನ್ನು 22 ಎಂ.ಎಲ್.ಡಿ. ಯಿಂದ 60 ಎಂ.ಎಲ್.ಡಿ.ಗೆ ಉನ್ನತೀಕರಿಸುವ ಕಾಮಗಾರಿಯನ್ನು ಕೂಡ ಕೈಗೆತ್ತಿಕೊಂಡಿದ್ದು, ಉನ್ನತೀಕರಿಸುವ ಕಾಮಗಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ರೂ. 9 ಕೋಟಿಗಳ ಠೇವಣಿ ವಂತಿಕೆ ಅನುದಾನದಲ್ಲಿ ಮಾಡಲಾಗುತ್ತಿದೆ. ಈ ಯೋಜನೆಯಿಂದ ಲಭ್ಯವಾಗುವ ಹೆಚ್ಚುವರಿ ನೀರಿನಲ್ಲಿ 18 ಎಂ.ಎಲ್.ಡಿ. ಕೆ.ಆರ್. ಕ್ಷೇತ್ರದ ಮೈಸೂರು ಮಹಾನಗರ ಪಾಲಿಕೆ ವಾರ್ಡ್ ವ್ಯಾಪ್ತಿಗೆ ಸರಬರಾಜು ಮಾಡಲಾಗುತ್ತದೆ. ಮತ್ತು ಉಳಿಕೆ ನೀರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪೂರೈಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ಕೆ.ಆರ್.ಕ್ಷೇತ್ರವನ್ನು ಬೋರ್ ವೆಲ್ ರಹಿತ ಕ್ಷೇತ್ರವನ್ನಾಗಿ ಮಾಡಬೇಕೆಂಬ ಚಿಂತನೆಯನ್ನು ಮಾಡಿದ್ದು, ಕ್ಷೇತ್ರದಲ್ಲಿ 584 ಬೋರವೆಲ್ ಗಳಿದ್ದವು.ಎಲ್ಲೆಲ್ಲಿ ರಿಡ್ಸ್ ಪಾಯಿಂಟ್ಸ್ ಗಳಿವೆಯೋ ಅಲ್ಲಿಗೆ ಹೈಡ್ರಾಲಿಕ್ ಪ್ರೆಷರ್ ನೀಡುತ್ತಿದ್ದು ಮತ್ತು ಅಲ್ಲಲ್ಲಿ ನೀರು ಬರುತ್ತಿಲ್ಲ ಎಂಬ ದೂರುಗಳಿದ್ದವು. ಅದರ ಜತೆಗೆ 24×7 ನೀರು ಎಂಬ ಚಿಂತನೆ ಸಹ ಇತ್ತು. ಇವುಗಳತ್ತ ಗಮನದಲ್ಲಿಟ್ಟುಕೊಂಡು ಈಗಾಗಲೇ ಒಟ್ಟು 400 ಬೋರ್ ವೇಲ್ ಪಂಪ್ ಗಳನ್ನು ನಿಷ್ಕ್ರಿಯಗೊಳಿಸಿ ಅವುಗಳನ್ನು ಪಾರ್ಕ್ ಗಳಿಗೆ ಸಂಪರ್ಕ ಮಾಡಲಾಗಿದೆ. ಉಳಿದ 170 ಬೋರ್ ವೆಲ್ ಗಳನ್ನು ಡಿಸೆಂಬರ್ ಒಳಗೆ ರದ್ದು ಪಡಿಸಬೇಕೆಂಬ ಚಿಂತನೆಯಿತ್ತು. ಆದರೆ ಕಾಮಗಾರಿ ವಿಳಂಬವಾಯಿತು ಎಂದು ಹೇಳಿದರು.

ಒಟ್ಟು 60 ಎಂ ಎಲ್ ಡಿ ನೀರನ್ನು ಮೈಸೂರು ಮಹಾನಗರಕ್ಕೆ ಹೆಚ್ಚುವರಿಯಾಗಿ ಪಂಪ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದಕ್ಕೂ 1200 ಎಚ್ ಪಿ ಪಂಪ್ ಅಳವಡಿಸಲು ಬೇಕಾದಂತಹ ವ್ಯವಸ್ಥೆ ಯನ್ನು ಮಾಡಿದ್ದೇವೆ. ಅಂದಾಜು 27 ಕೋಟಿ ರೂ.ಗಳ ವೆಚ್ಚದಲ್ಲಿ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಅಂತ್ಯಗೊಳಿಸಿ, ಅದನ್ನು ಮೈಸೂರು ಮಹಾನಗರಕ್ಕೆ ಶುದ್ಧ ಕುಡಿಯುವ ನೀರು ಕೊಡುವ ವ್ಯವಸ್ಥೆಗೆ ಚಾಲನೆಯನ್ನು ನೀಡಲಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ, ಉಪ ಮೇಯರ್ ರೂಪ ಯೋಗೀಶ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಅಧೀಕ್ಷಕ ಅಭಿಯಂತರ ಮಹೇಶ್, ಕಾರ್ಯಪಾಲುಕ ಅಭಿಯಂತರ ಸುವರ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಮುಸ್ತಫಾ, ಭರತ್, ವಿದ್ಯುತ್ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದ್ದರು.


Spread the love

Leave a Reply

Please enter your comment!
Please enter your name here