ಕಬಿನಿ ಹಿನ್ನೀರಿಗೆ ಲಗ್ಗೆಯಿಟ್ಟ ವಿದೇಶಿ ಹಕ್ಕಿಗಳು

Spread the love

ಕಬಿನಿ ಹಿನ್ನೀರಿಗೆ ಲಗ್ಗೆಯಿಟ್ಟ ವಿದೇಶಿ ಹಕ್ಕಿಗಳು

ಮೈಸೂರು: ಕಬಿನಿ ಹಿನ್ನೀರಿನಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ರೀತಿಯ ಹಕ್ಕಿಗಳು ಗೂಡುಕಟ್ಟಿ ಮರಿಮಾಡಿ ಸಂಭ್ರಮಿಸುತ್ತಲೇ ಇರುತ್ತವೆ. ಈ ಪೈಕಿ ವಿದೇಶಿ ಹಕ್ಕಿಗಳದ್ದೇ ಸಿಂಹಪಾಲು.

ಈ ಹಕ್ಕಿಗಳಿಗೆ ಗಡಿಯ ತಂಟೆಯಿಲ್ಲ, ಕೋರೋನಾದ ಭಯವಿಲ್ಲ. ಹೀಗಾಗಿ ತಮಗೆ ಬೇಕಾದಾಗ ಬಂದು ವಾಸ್ತವ್ಯ ಹೂಡಿ ತಮ್ಮ ಸಂತಾನವೃದ್ಧಿಸಿಕೊಂಡು ಹೊರಟು ಬಿಡುತ್ತವೆ.

ಇಲ್ಲಿಗೆ ಬರುವ ಹಕ್ಕಿಗಳಿಗೆ ಆಹಾರಕ್ಕೆ ಬರವಿಲ್ಲ. ಹಿನ್ನೀರಿನುದ್ದಕ್ಕೂ ಅಡ್ಡಾಡಿ ಮೀನು, ಹುಳ, ಹುಪ್ಪಟೆಯ ಪುಷ್ಕಳ ಬೋಜನ ಸಿಗುತ್ತದೆ. ಅಷ್ಟೇ ಅಲ್ಲ ಸುತ್ತಮುತ್ತಲಿನ ರೈತರ ಹೊಲಗದ್ದೆಗಳಿಗೆ ತೆರಳಿ ಎರೆಹುಳ, ಗೊದ್ದ, ಕಪ್ಪೆ ಮೊದಲಾದವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಇದರ ನಡುವೆ ಮೊಟ್ಟೆಯಿಟ್ಟು, ಮರಿಮಾಡಿ ಅವುಗಳಿಗೆ ಗುಟುಕು ಆಹಾರ ನೀಡಿ ಪೋಷಿಸುತ್ತವೆ. ಮರಿಗಳಿಗೆ ರೆಕ್ಕೆಪುಕ್ಕ ಹುಟ್ಟಿ ಅವು ಹಾರಲು ಕಲಿತ ಬಳಿಕ ತಮ್ಮ ಬಳಗೊಂದಿಗೆ ತಾವು ಎಲ್ಲಿಂದ ಬಂದವೋ ಅಲ್ಲಿಗೆ ಹೊರಟು ಹೋಗುತ್ತವೆ.

ಕಬಿನಿ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ನೀರಿನ ಸೆಲೆಗಳು ಇರುವುದರಿಂದ ಪ್ರಾಣಿ ಪಕ್ಷಿಗಳು ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳನ್ನು ವೀಕ್ಷಿಸಲೆಂದೇ ಪಕ್ಷಿ, ಪ್ರಾಣಿ ಪ್ರಿಯರು ದೌಡಾಯಿಸುತ್ತಾರೆ. ಸದ್ಯ ಬೂದು ಬಣ್ಣದ ಬಾತುಕೋಳಿ (ಹೆಡೆಡ್ ಗೂಸ್), ರಿವರ್ ಟನ್, ಪ್ಯಾಟ್ರಿಂಕೂಲ್ ಪಕ್ಷಿಗಳು ಸೇರಿದಂತೆ ಹಲವು ಪಕ್ಷಿಗಳು ಗಮನಸೆಳೆಯುತ್ತಿವೆ.

ಹಿಂಡು ಹಿಂಡಾಗಿ ಕಬಿನಿ ಹಿನ್ನೀರಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಅತ್ತಿಂದ ಇತ್ತ ಓಡಾಡುತ್ತಾ ಗೂಡು ಕಟ್ಟುವುದರಲ್ಲಿ, ಆಹಾರ ಸಂಗ್ರಹಿಸುವುದರಲ್ಲಿ ತೊಡಗಿಸಿಕೊಂಡಿವೆ. ಬಹುತೇಕ ಹಕ್ಕಿಗಳು ಹಗಲು ಹೊತ್ತಿನಲ್ಲಿ ಸುತ್ತಮುತ್ತಲಿನ ಗ್ರಾಮಗಳ ಗದ್ದೆ, ಹೊಲಗಳಲ್ಲಿಯೂ ಹಾರಾಡುತ್ತಾ ಆಹಾರಗಳನ್ನು ಅರಸುತ್ತಿರುತ್ತವೆ. ಸಂಜೆಯಾಗುತ್ತಿದ್ದಂತೆಯೇ ಹಿನ್ನೀರಿಗೆ ಬಂದು ಠಿಕಾಣಿ ಹೂಡುತ್ತವೆ.

ಇಲ್ಲಿಗೆ ಲಡಾಕ್, ನೇಪಾಳ, ಚೀನಾ, ಹಿಮಾಲಯ, ಬರ್ಮಾ, ಶ್ರೀಲಂಕಾ ಮೊದಲಾದ ಕಡೆಗಳಿಂದ ಪಕ್ಷಿಗಳು ಬರುತ್ತಿವೆ. ಆಯ್ದ ಸ್ಥಳಗಳಲ್ಲಿ ತಮ್ಮ ಬದುಕನ್ನು ಆರಂಭಿಸುತ್ತವೆ. ಬೆಳಕು ಹರಿಯುತ್ತಿದ್ದಂತೆಯೇ ಗೂಡು ಬಿಡುವ ಇವು ರೈತರ ಗದ್ದೆ ಹೊಲಗಳಿಗೆ ತೆರಳುತ್ತವೆ. ಅಲ್ಲಿ ಕಾಳು, ಕಡ್ಡಿ, ಹುಳ ಹುಪ್ಪಟೆಗಳನ್ನು ತಿನ್ನುತ್ತಾ ಅಡ್ಡಾಡುತ್ತವೆ. ನಂತರ ಬಿಸಿಲಿನ ಝಳ ಹೆಚ್ಚುತ್ತಿದ್ದಂತೆಯೇ ಮತ್ತೆ ಅಲ್ಲಿಂದ ಹಾರಿ ಬಂದು ಹಿನ್ನೀರಿನಲ್ಲಿ ಸಮಯ ಕಳೆಯುತ್ತವೆ. ಮತ್ತೆ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆಯೇ ಸಂಜೆ ಹೊತ್ತು ಗದ್ದೆಗೆ ಅಥವಾ ಹಿನ್ನೀರಿನಲ್ಲಿ ಸಿಗುವ ಹುಳ ಹುಪ್ಪಟೆಗಳನ್ನು ತಿನ್ನುತ್ತಾ ರಾತ್ರಿಯಾಗುತ್ತಿದ್ದಂತೆಯೇ ಮತ್ತೆ ಸ್ವಸ್ಥಾನಕ್ಕೆ ಮರಳುತ್ತವೆ.

ಕೆಲವು ಹಕ್ಕಿಗಳು ಸುಮಾರು ಆರು ತಿಂಗಳ ಕಾಲ ಇಲ್ಲಿದ್ದು ನಂತರ ತೆರಳುತ್ತವೆ. ಇದೀಗ ವಿದೇಶದ ಈ ಹಕ್ಕಿಗಳು ಕಬಿನಿಯ ಆಕರ್ಷಣೆಯಾಗಿ ಪ್ರವಾಸಿಗರನ್ನು ಸೆಳೆಯುತ್ತಿವೆ.


Spread the love

1 Comment

Comments are closed.