ಕರಾವಳಿ ಜಿಲ್ಲೆಗಳ ಸುರಕ್ಷತೆಗೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು – ಅಮಿತ್ ಶಾ

Spread the love

ಕರಾವಳಿ ಜಿಲ್ಲೆಗಳ ಸುರಕ್ಷತೆಗೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು – ಅಮಿತ್ ಶಾ

ಕುಂದಾಪುರ: ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಬರಬೇಕು ಎಂದಾದರೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ರಚನೆಯಾಗಬೇಕು. ಕರಾವಳಿ ಜಿಲ್ಲೆಗಳು ಸುರಕ್ಷತೆ ಇರಬೇಕು ಎಂದಾದರೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ಶನಿವಾರ ಸಂಜೆ ನಡೆದ ರೋಡ್ ಶೋ ವೇಳೆ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮೀಸಲಾತಿ ತರುವ ಬಗ್ಗೆ ಮಾತನಾಡುತ್ತಿದೆ. ರಾಜ್ಯದಲ್ಲಿ ವಿಕಾಸ ಹಾಗೂ ಅಭಿವೃದ್ಧಿಗಾಗಿ ಡಬ್ಬಲ್ ಇಂಜಿನ್ ಸರ್ಕಾರದ ಅವಶ್ಯಕತೆ ಇದೆ. ಸಂವಿಧಾನದಲ್ಲಿ ಹೇಳಲಾದ ಮೀಸಲಾತಿ ನಿಯಮಾವಳಿಗಳನ್ನು ಮೀರಿ ಮುಸ್ಲಿಮರಿಗೆ ನೀಡಲಾದ ಮೀಸಲಾತಿಯನ್ನು ರದ್ದು ಮಾಡುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ ಎಂದರು.

ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಕಾಂಗ್ರೆಸ್ ಕರಾವಳಿ ಕರ್ನಾಟಕವನ್ನು ಸುರಕ್ಷಿತವಾಗಿ ಇಡಲು ಬಯಸುವುದಿಲ್ಲ. ಅಡಿಕೆ ಬೆಳೆಗಾರರಿಗೆ ಬೆಂಬಲ ಕೊಟ್ಟಿದ್ದು ಬಿಜೆಪಿ ಸರ್ಕಾರ. ಕರಾವಳಿಯಲ್ಲಿ ನೂತನ ಬಂದರು ನಿರ್ಮಿಸಿ ಮೀನುಗಾರರಿಗೆ ಸುರಕ್ಷತೆ ನೀಡಿದ್ದು ಬಿಜೆಪಿ. ಮೋದಿ ಮತ್ತೆ ಪ್ರಧಾನಿ ಆಗಬೇಕಾದರೆ ಬೈಂದೂರಿನಲ್ಲಿ ನಮ್ಮ ಅಭ್ಯರ್ಥಿ ಆಯ್ಕೆಯಾಗಬೇಕು ಎಂದರು.

ರಾಷ್ಟ್ರದಲ್ಲಿ ರೈತ ಪರವಾದ ಕಾರ್ಯಕ್ರಮವನ್ನು ಜಾರಿಗೊಳಿಸಿರುವ ಬಿಜೆಪಿ ಸರ್ಕಾರ, ರಾಷ್ಟ್ರ ವಿರೋಧಿಗಳ ಚಟುವಟಿಕೆಗಳ ಕಣ್ಗಾವಲು ನಡೆಸಲು ಬೆಂಗಳೂರಿನಲ್ಲಿ ಎನ್ಐಎ ಘಟಕ ಸ್ಥಾಪನೆ ಮಾಡಲಾಗಿದೆ. ರಾಷ್ಟ್ರದ ಶಾಂತಿ – ಸುವ್ಯವಸ್ಥೆಗೆ ಧಕ್ಕೆ ತರುವ ಪಿಎಫ್ ಐ ಸಂಘಟನೆಯವರ ಮೇಲಿನ ಕೇಸುಗಳನ್ನು ತೆಗೆಯುವ ಕೆಲಸ ಕಾಂಗ್ರೆಸ್ ನಿಂದ ಆದರೆ, ಬಿಜೆಪಿ ಅವರನ್ನು ದೆಹಲಿಯ ತಿಹಾರ್ ಜೈಲಿಗೆ ಕಳುಹಿಸುವ ಕೆಲಸ ಮಾಡಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟುವ ಕೆಲಸವೂ ಬಿಜೆಪಿ ಸರ್ಕಾರದಿಂದ ಆಗಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕ್ಷೇತ್ರದ ಉಸ್ತುವಾರಿ ಬ್ರಿಜೇಶ್ ಚೌಟ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ , ಸಾಮ್ರಾಟ್ ಶೆಟ್ಟಿ ಹಳ್ನಾಡು ಉಪಸ್ಥಿತರಿದ್ದರು.

ಅಮಿತ್ ಷಾ ರೋಡ್ ಶೋ ಹಿನ್ನೆಲೆ ಅಂಪಾರು-ಸಿದ್ದಾಪುರ ರಾಜ್ಯ ಹೆದ್ದಾರಿಯನ್ನು ಮಧ್ಯಾಹ್ನ 2 ಗಂಟೆಯಿಂದ ಸಂಪೂರ್ಣ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಲಾಯಿತು. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತ -ಮುತ್ತ ಹಾಕಿರುವ ಬ್ಯಾರಿಕೇಡ್ ನೋಡಿ ಸಿಡಿಮಿಡಿಗೊಂಡ ಅಮಿತ್ ಷಾ ಅವರು ತಡೆ ತೆಗೆದು ಜನರನ್ನು ಒಳ ಬಿಡುವಂತೆ ಪೊಲೀಸರಿಗೆ ಸೂಚಿಸಿದರು. ಬಳಿಕ ರೋಡ್ ಶೋ ನಡೆಸಿದ ಅಮಿತ್ ಷಾ ಸಿದ್ದಾಪುರ ಸರ್ಕಲ್ ನಲ್ಲಿ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.


Spread the love