ಕರ್ಕಿ ಹಂಚಿನ ಕಾರ್ಖಾನೆಯಲ್ಲಿ ಸ್ಥಳೀಯ ಕೆಲಸಗಾರರ ವಜಾ ಖಂಡಿಸಿ ಪ್ರತಿಭಟನೆ

Spread the love

ಕರ್ಕಿ ಹಂಚಿನ ಕಾರ್ಖಾನೆಯಲ್ಲಿ ಸ್ಥಳೀಯ ಕೆಲಸಗಾರರ ವಜಾ ಖಂಡಿಸಿ ಪ್ರತಿಭಟನೆ

ಕುಂದಾಪುರ: ಹಟ್ಟಿಯಂಗಡಿ ಕರ್ಕಿ ಸಮೀಪದ ಹಂಚಿನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಿದ್ದ ಸ್ಥಳೀಯ 40 ಮಂದಿ ಮಹಿಳೆಯರನ್ನು ವಜಾಗೊಳಿಸಿ, ಹೊರರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶದವರಿಗೆ ಕೆಲಸ ನೀಡಿರುವುದನ್ನು ಖಂಡಿಸಿ ಸೋಮವಾರ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಯುವ ಮುಖಂಡ ಸುದೀಶ್ ಶೆಟ್ಟಿ, ನಾಲ್ಕೈದು ವರ್ಷಗಳಿಂದ ಕೆಲಸಮಾಡುತ್ತಿದ್ದ ಸ್ಥಳೀಯರನ್ನು ಕೆಲಸದಿಂದತೆಗೆದು ಹಾಕಿ ಹೊರರಾಜ್ಯ ಕಾರ್ಮಿಕರನ್ನು ನೇಮಕಗೊಳಿಸಲಾಗಿದೆ. ಪೊಲ್ಯೂಶನ್ ಬೋರ್ಡ್ ಪ್ರಮಾಣಪತ್ರ ಹಾಗೂ ಸ್ಥಳೀಯ ಪಂಚಾಯತ್ ನಿಂದ ಎನ್ಒಸಿ ಯನ್ನು ರಿನಿವಲ್ ಮಾಡಿಕೊಳ್ಳಲಿಲ್ಲ. ಸ್ಥಳೀಯರಿಗೆ ಕೆಲಸ ಕೊಟ್ಟಿದ್ದಾರೆ ಎನ್ನುವ ಉದ್ದೇಶದಿಂದ ನಾವು ಇದುವರೆಗೂ ಏನೂ ಮಾತನಾಡದೆ ಸುಮ್ಮನಿದ್ದಿದ್ದೆವು. ಸ್ಥಳೀಯ ಕಾರ್ಮಿಕರಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆ ನೀಡದೆ ಏಕಾಏಕಿಯಾಗಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸ್ಥಳಿಯ ಕಾರ್ಮಿಕರನ್ನು ಯಾವಾಗ ಕೆಲಸದಿಂದ ತೆಗೆದು ಹಾಕಿದ್ದಾರೊ ಅಂದಿನಿಂದ ಅವರಿಗೆ ಸಂಬಳ ಕೊಡಬೇಕು ಮತ್ತು ಕಾರ್ಮಿಕರನ್ನು ಮರಳಿ ಕೆಲಸಕ್ಕೆಸೇರಿಸಿಕೊಂಡು ಅವರಿಗೆ ಇಎಸ್ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಮುಖಂಡ ಮುತ್ತಯ್ಯ ಮಾತನಾಡಿ, ಕಳೆದ 4 ವರ್ಷಗಳಿಂದ ಈ ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿ ದುಡಿಸಿಕೊಂಡು, ಈಗ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಲ್ಲದೆ, ಯಾವುದೇ ಸೌಲಭ್ಯಗಳನ್ನು ಕೊಡದೇ ಅನ್ಯಾಯ ಎಸಗಿರುವುದು ಸರಿಯಲ್ಲ. ಈ ಮಹಿಳೆಯರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂತ್ರಸ್ತರ ಪೈಕಿ ಯಶೋದಾ ಮಾತನಾಡಿ, ನಮಗೆ ತುಟ್ಟಿಭತ್ಯೆ, ಆರೋಗ್ಯ ವಿಮಾ ಸೌಲಭ್ಯ ಯಾವುದೂ ಕೊಡದೇ ಕೆಲಸ ಮಾಡಿಸಿಕೊಂಡಿದ್ದು, ಈಗ ಕೆಲಸದಿಂದ ತೆಗೆದಿದ್ದಾರೆ. ಇಲ್ಲಿಯವರೆಗೆ ಆದ್ಯತೆ ಕೊಡುವ ಬದಲು ಉ.ಪ್ರದೇಶ, ಬಿಹಾರದವರಿಗೆ ಕೆಲಸ ಕೊಟ್ಟಿರುವುದು ಎಷ್ಟು ಸರಿ ಎನ್ನುವುದಾಗಿ ಅವರು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಸಂತೋಷ್ ಶೆಟ್ಟಿ ಸಬ್ಲಾಡಿ, ಶರತ್ಚಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ತೋಟದಬೈಲು, ಚಂದ್ರ ಪೂಜಾರಿ ಕರ್ಕಿ, ಕೆಲಸ ಕಳೆದುಕೊಂಡ ಮಹಿಳೆಯರು, ಕಾರ್ಮಿಕ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.


Spread the love