ಕರ್ಕುಂಜೆ : ನೇರಳಕಟ್ಟೆಯಲ್ಲಿ ಎರಡು ವಾಮನ ಮುದ್ರೆ ಕಲ್ಲು ಪತ್ತೆ

Spread the love

ಕರ್ಕುಂಜೆ : ನೇರಳಕಟ್ಟೆಯಲ್ಲಿ ಎರಡು ವಾಮನ ಮುದ್ರೆ ಕಲ್ಲು ಪತ್ತೆ

ಕುಂದಾಪುರ: ಕರ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಳಕಟ್ಟೆ ಗ್ರಾಮದ ಅರಳಿಕಟ್ಟೆಯ ಬಾವಿ ಕಟ್ಟೆಯ ಬಳಿ ಹಾಗೂ ಜಾಡ್ಕಟ್ಟು ರಾಮ ಮೊಗವೀರ ಇವರ ಮನೆಯ ಬಳಿಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಮಿಪದಲ್ಲಿ ಎರಡು ಪ್ರತ್ಯೇಕ ವಾಮನ ಮುದ್ರಿಕೆಯ ಕಲ್ಲುಗಳು ಪತ್ತೆಯಾಗಿದೆ.

ಸಹಜವಾಗಿ ಶೈವರು, ವೈಷ್ಣವರು, ಜೈನರು ತಮ್ಮ ತಮ್ಮ ಆರಾಧನೆಗೆ ಸಂಬಂಧಿಸಿದಂತೆ ಗಡಿಗಳನ್ನು ಗುರುತಿಸುತ್ತಿದ್ದರು. ಶೈವರ ಗಡಿಗಳಿಗೆ ಲಿಂಗ ಮುದ್ರಿಕೆ ಕಲ್ಲು ಅಥವಾ ಶೈವ ಮುದ್ರಿಕೆ ಕಲ್ಲು, ವೈಷ್ಣವರ ಗಡಿಗಳಿಗೆ ವಾಮನ ಮುದ್ರಿಕೆ ಕಲ್ಲು ಹಾಗೂ ಜೈನರ ಗಡಿಗಳಿಗೆ ಮುಕ್ಕೋಡೆ ಕಲ್ಲುಗಳನ್ನು ಹಾಕುವ ಮೂಲಕ ಬಹಳ ಸ್ಪಷ್ಟವಾಗಿ ಅವರವರ ಆರಾಧನೆಯ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು.

ನೇರಳಕಟ್ಟೆಯ ಪತ್ತೆಯಾಗಿರುವ ಎರಡು ವಾಮನ ಮುದ್ರಿಕೆಯ ಕಲ್ಲುಗಳಲ್ಲಿ ಸೂರ್ಯ ಚಂದ್ರ ಇರುವ ತನಕ ಅಜರಾಮರವಾಗಿರಲಿ ಎನ್ನುವ ಸಂದೇಶ ಸಾರುವ ಸೂರ್ಯ ಹಾಗೂ ಚಂದ್ರ ಶಿಲ್ಪ ಕಲೆಯೊಂದಿಗೆ, ವ್ಯಕ್ತಿ ಅಂದರೆ ವಾಮನ ಅವರ ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಕಮಂಡಲವಿದೆ. ಇದು ವಾಮನ ಶಿಲ್ಪ ಕಲೆಯಲ್ಲಿ ಸಹಜವಾಗಿ ಕಂಡು ಬರುತ್ತದೆ ಎಂದು ಕರ್ನಾಟಕದ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ತಿಳಿಸಿದ್ದಾರೆ.

ವಾಮನ ಮುದ್ರಿಕೆಯ ಕಲ್ಲು ಪತ್ತೆಯಾಗಿರುವ ಅಣತಿ ದೂರದಲ್ಲಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನವಿದೆ. ಈ ವಾಮನ ಮುದ್ರಿಕೆ ಕಲ್ಲು ಲಕ್ಷ್ಮೀ ವೆಂಕಟರಮಣ ದೇಗುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಿದೆ. ಈ ಹಿಂದೆ ನೇರಳಕಟ್ಟೆಯ ಬಾವಿ ಕಟ್ಟೆ‌ ಬಳಿ, ಕಂದಾವರದ ವೀರಾಂಜನೇಯ ದೇವಾಲಯದ ಬಳಿ, ನಂದ್ರೋಳ್ಳಿ ಲಕ್ಷ್ಮೀನಾರಾಯಣ ದೇವಾಲಯದ ಬಳಿಯೂ ವಾಮನ ಮುದ್ರಿಕೆ ಕಲ್ಲು ಕಂಡು ಬಂದಿದೆ.

ಕರ್ನಾಟಕದ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಹಾಗೂ ಸಂತೋಷ್ ನೇರಳಕಟ್ಟೆ ಇವರು ವಾಮನ ಮುದ್ರಿಕೆ ಕಲ್ಲುಗಳನ್ನು ಪತ್ತೆ ಹಚ್ಚಿದ್ದಾರೆ. ಕರ್ಕುಂಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ಪೂಜಾರಿ, ಸುಕುಮಾರ್ ನೇರಳಕಟ್ಟೆ, ಜಯರಾಮ ನೇರಳಕಟ್ಟೆ ಹಾಗೂ ಗಿರಿ ಪೂಜಾರಿ ನೇರಳಕಟ್ಟೆ ಸಹಕಾರ ನೀಡಿದ್ದಾರೆ.


Spread the love