
ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಪ್ರಕರಣ: ಮೂವರ ಸೆರೆ
ಮಂಗಳೂರು: ನಗರದ ಉರ್ವ ಚಿಲಿಂಬಿಗುಡ್ಡೆ ಸಮೀಪ ರವಿವಾರ ರಾತ್ರಿ ವೇಳೆ ಗಸ್ತು ನಿರತ ಪೊಲೀಸರಿಗೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಿಲಿಂಬಿಗುಡ್ಡೆ ನಿವಾಸಿಗಳಾದ ದುರ್ಗೇಶ್, ಪ್ರಜ್ವಿತ್, ರಕ್ಷಿತ್ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜು.೪ರವರೆಗೆ ನ್ಯಾಯಾಂಗ ಸೆರೆ ವಿಧಿಸಲಾಗಿದೆ.
ಉರ್ವ ಪೊಲೀಸ್ ಠಾಣೆಯ ಸಿಬ್ವಂದಿ ವೆಂಕಟೇಶ್ ಮತ್ತು ಧನಂಜಯ್ ಚಿಲಿಂಬಿಗುಡ್ಡೆ ಬಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಸೇರಿದ ಸುಮಾರು 8 ಮಂದಿ ರಸ್ತೆ ಬದಿ ಮದ್ಯಪಾನ ಸೇವಿಸುತ್ತಾ ಹರಟೆ ಹೊಡೆಯುತ್ತಿತ್ತು ಎನ್ನಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ತಗಾದೆ ತೆಗೆದ ಪಾನಮತ್ತರು ಪೊಲೀಸರಿಗೆ ಹಲ್ಲೆಗೈದಿದ್ದಾರೆ. ಅಲ್ಲದೆ ಒಬ್ಬಾತ ಪೊಲೀಸರ ಮೇಲೆಯೇ ಬೈಕ್ ಚಲಾಯಿಸಲು ಯತ್ನಿಸಿ ಬಳಿಕ ಪರಾರಿಯಾಗಿದ್ದಾರೆ. ಆ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದರೆ ಇತರ ಐದು ಮಂದಿ ತಲೆಮರೆಸಿಕೊಂಡಿದ್ದಾರೆ.
ಗಾಯಾಳು ಪೊಲೀಸರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಉರ್ವ ಪೊಲೀಸರು ತಿಳಿಸಿದ್ದಾರೆ.