ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬದ್ಧ – ಸಚಿವ ಸುನೀಲ್ ಕುಮಾರ್

Spread the love

ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬದ್ಧ – ಸಚಿವ ಸುನೀಲ್ ಕುಮಾರ್

ಉಡುಪಿ: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಮೂಲಕ ಸಮಾಜವನ್ನು ದುರ್ಬಲಗೊಳಿಸುವುದರ ಮೂಲಕ ಭಯಭೀತಗೊಳಿಸಬೇಕು ಎನ್ನುವ ಪ್ರಯತ್ನ ಇದಾಗಿತ್ತು ಅದರೆ ಅದರಲ್ಲಿ ಅವರು ವಿಫಲರಾಗಿದ್ದಾರೆ ಎಂದು ರಾಜ್ಯ ರಾಜ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ವಿ ಸುನೀಲ್ ಕುಮಾರ್ ಹೇಳಿದರು.

ಅವರು ಶನಿವಾರ ಕೋಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಹಿಂದೂ ಚಟುವಟಿಕೆಗಳನ್ನು ಕೇಂದ್ರಿಕರಿಸಿಕೊಂಡು ಇಂತಹ ದಾಳಿಗಳು ನಡೆಯುತ್ತಿದ್ದು ಬೇರೆ ಬೇರೆ ಭಾಗಕ್ಕೆ ವಿಸ್ತರಿಸುತ್ತಿದೆ. ಮಂಗಳೂರಿನ ದಾಳಿಯಲ್ಲಿ ಕದ್ರಿ ದೇವಸ್ಥಾನದ ವಿರುದ್ದ ಹುನ್ನಾರ ನಡೆದಿತ್ತು. ಶಂಕಿತ ವ್ಯಕ್ತಿ ಆಧಾರ್ ಕಾರ್ಡ್ ಬದಲಾವಣೆ ಮಾಡಿ ಕೇಸರಿ ಧರಿಸಿಕೊಂಡು ದಾಳಿಯನ್ನು ಮಾಡಿದ್ದಾನೆ. ಬಳಿಕ ಇದು ಇಸ್ಲಾಮಿನ ಚುಟುವಟಿಕೆಗಳನ್ನು ಇನ್ಯಾವುದೋ ಸಂಘಟನೆಯ ಮೇಲೆ ಹೊರಿಸುವ ಹುನ್ನಾರ ಮಾಡಿದ್ದಾರೆ. ಆದರೆ ಸರಕಾರ ಇಂತಹ ಚಟುವಟಿಕೆಗಳನ್ನು ಬಗ್ಗು ಬಡಿಯುತ್ತೇವೆ ಮತ್ತು ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆಗಳನ್ನು ವಿಜೃಂಭಿಸಲು ಬಿಡುವುದಿಲ್ಲ. ಇದರ ಆಳ ಅಗಲವನ್ನು ಅರಿಯುವ ನಿಟ್ಟಿನಲ್ಲಿ ಎನ್ ಐ ಎ ತನಿಖೆಗೆ ನೀಡಲಾಗಿದೆ. ಇದರ ತನಿಖೆಯನ್ನು ಸರಕಾರ ಇನ್ನಷ್ಟು ತೀವ್ರಗೊಳಿಸಲಿದೆ ಎಂದರು.

ಘಟನೆಯ ಬಳಿಕ ರಾಜ್ಯದಲ್ಲಿ ಶಾಂತಿ ಕಾಪಾಡಲು ಮತ್ತು ಜನರಲ್ಲಿ ವಿಶ್ವಾಸ ಮೂಡಿಸಲು ಸರಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ, ಇದನ್ನು ಯಾವ ವ್ಯಕ್ತಿ ಮಾಡಿದ್ದಾನೋ ಆ ಸಮಾಜ ಕೂಡ ಖಂಡಿಸುವ ಕೆಲಸ ಮಾಡಬೇಕು. ಇಲ್ಲದೆ ಹೋದಲ್ಲಿ ಸಮಾಜದ ವಿರುದ್ದ ಅನುಮಾನ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತದೆ ಎಂದರು.

ಕರಾವಳಿಯಲ್ಲಿ ಎನ್ ಐ ಎ ಕಚೇರಿ ಸ್ಥಾಪನೆ ಮಾಡಲು ಎಲ್ಲಾ ಪ್ರಕ್ರಿಯೆಗಳು ನಡೆದಿದ್ದು, ಮಂಗಳೂರುನ್ನು ಕೇಂದ್ರಿಕೃತವಾಗಿಸಿ ಕೇಂದ್ರ ಸರಕಾರ ಕೂಡ ಪ್ರಕ್ರಿಯೆ ನಡೆಸಿದೆ ಎಂದರು.

ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕು ಎನ್ನುವ ಒಲವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದು, ಇದಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಇದರ ಕುರಿತು ಮುಂದಿನ ಅಧಿವೇಶನದ ಸಂದರ್ಭ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ. ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸರಕಾರ ಮುಖ್ಯಮಂತ್ರಿಗಳ ನಿಲುವನ್ನು ಬೆಂಬಲಿಸುತ್ತೇವೆ. ಎಲ್ಲರೂ ಒಂದಾಗಿ ಯೋಚನೆ ಮಾಡಿ ಒಂದಾಗಿ ಚಟುವಟಿಕೆ ಮಾಡಬೇಕು. ಎಲ್ಲೂ ಕೂಡ ಪ್ರತ್ಯೇಕತೆ ನಿರ್ಮಾಣವಾಗಬಾರದು. ಸಮಾನ ನಾಗರಿಕ ಸಂಹಿತೆ ತರುವುದಾಗಿ ಬಿಜೆಪಿ ಹಲವು ವರುಷಗಳಿಂದ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಇದನ್ನು ಜಾರಿಗೆ ತರಲು ಇತರ ರಾಜ್ಯಗಳು ಈಗಾಗಲೇ ಮುಂದಾಗಿವೆ ಅದರಂತೆ ಕರ್ನಾಟಕ ಕೂಡ ಮುಂದಾಗುತ್ತಿದೆ ಎಂದರು.

ಬೆಳಗಾವಿಯಲ್ಲಿ ಕಿಡಿಗೇಡಿಗಳ ದಾಂಧಲೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿಗಳು ಸಷ್ಟಪಡಿಸಿದ್ದಾರೆ. ನೆಲ ಜಲ ಭಾಷೆ ವಿಚಾರವಾಗಿ ರಾಜಕೀಯ ಇಲ್ಲ. ನಮ್ಮ ರಾಜ್ಯದ ನೆಲ ಜಲ, ಸಂಸ್ಕøತಿಯ ಭೂಭಾಗದ ಗಡಿ ಪ್ರದೇಶವನ್ನು ಉಳಿಸಲು ಮತ್ತು ನಮ್ಮತನವನ್ನು ಗಟ್ಟಿ ಮಾಡುವುದಕ್ಕಾಗಿ ನಾವೆಲ್ಲರೂ ಕೂಡ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಯಾರೋ ಬರೆದಿದ್ದಾರೆ ಎಂದ ಕೂಡಲೇ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಗೌರವ ನೀಡಬೇಕಾಗಿರುವುದು ಪ್ರಜಾಪ್ರಭುತ್ವದ ಕರ್ತವ್ಯ. ಯಾರೋ ಪುಂಡರು ಇದನ್ನು ಮಾಡುತ್ತಿದ್ದಾರೆ ಅಂದರೆ ಕಾನೂನಿನ ಮೂಲಕ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದಲ್ಲಿ ಚಿಲುಮೆ ಸಂಸ್ಥೆಯ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು ಈ ಬಗ್ಗೆ ಈಗಾಗಲೇ ತನಿಖೆಗೆ ಒಳಪಡಿಸಿಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಕೆಲವರ ಬಂಧನ ಕೂಡ ಆಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವುದಕ್ಕೆ ಯಾವುದೇ ಸಂಸ್ಥೆ ಮುಂದಾದರೂ ಕೂಡ ನಮ್ಮ ಸರಕಾರ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲೆ ಎಂದರು.


Spread the love