ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಸಂದೇಶ ಕಲಿಸಲು ಹೊರಟ ಬಿಜೆಪಿ: ರಾಹುಲ್ ಗಾಂಧಿ

Spread the love

ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಸಂದೇಶ ಕಲಿಸಲು ಹೊರಟ ಬಿಜೆಪಿ: ರಾಹುಲ್ ಗಾಂಧಿ
 

ಬೆಂಗಳೂರು: ಕರ್ನಾಟಕದಲ್ಲಿನ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡದಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿಯು ರಾಜ್ಯದ ಅಸ್ಮಿತೆಗೆ ವಿರುದ್ಧವಾದ ಸಂದೇಶಗಳನ್ನು ಮಕ್ಕಳಿಗೆ ಕಲಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

‘ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಡಾ.ಬಿ.ಆರ್‌ ಅಂಬೇಡ್ಕರ್, ಬುದ್ಧ-ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಸಂದೇಶಗಳನ್ನು ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ’ ಎಂದು ಆರೋಪಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ‘ಕರ್ನಾಟಕದ ಮಕ್ಕಳ ಭವಿಷ್ಯದ ನಿರ್ಧಾರವನ್ನ ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಮತ್ತು ಲಿಂಗ ಸಮಾನತೆ ಸಾರುವ ಪಾಠಗಳನ್ನ, ಲೇಖಕರನ್ನ ಹೊರಗಿಟ್ಟು ಮಕ್ಕಳಿಗೆ ಕೇಸರೀಕರಣದ ಪಾಠ ಹೇಳಲು ಹೊರಟಿರುವುದು ವೈವಿಧ್ಯತೆಯ ತೊಟ್ಟಿಲಾದ ಭಾರತಕ್ಕೆ ಮಾಡುವ ಅಪಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ‘ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಂದಾಗಿ ಅದನ್ನ ಮೆಟ್ಟಿನಿಲ್ಲುತ್ತಾರೆ ಎನ್ನುವುದನ್ನ ಕನ್ನಡಿಗರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಬಹುತ್ವಕ್ಕೆ ಮಾರಕವಾದ ಪಠ್ಯವನ್ನ ಮಕ್ಕಳ ಮೇಲೆ ಹೇರಲು ಕಾಂಗ್ರೆಸ್ ಬಿಡುವುದಿಲ್ಲ. ಕನ್ನಡದ ನಾಡು, ನುಡಿ ಮತ್ತು‌ ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಬದ್ಧವಾಗಿದೆ’ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಹುಲ್‌ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ರಾಹುಲ್‌ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮತ್ತೆ ಕೆಲವರು ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ.


Spread the love