ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಕರ್ನಾಟಕ ರಾಜ್ಯದ ಅಫೀಲಿಯೇಶನ್ ರದ್ದುಪಡಿಸಿದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇಂಡಿಯಾ

Spread the love

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಕರ್ನಾಟಕ ರಾಜ್ಯದ ಅಫೀಲಿಯೇಶನ್ ರದ್ದುಪಡಿಸಿದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇಂಡಿಯಾ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇವರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಪ್ ಇಂಡಿಯಾದ ಬೈಲಾ ಹಾಗೂ ಕೇಂದ್ರ ಸರ್ಕಾರದ ಕ್ರೀಡಾ ನೀತಿಗೆ ವಿರುದ್ಧವಾಗಿರುವುದರಿಂದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಫೀಲಿಯೇಶನ್ ನನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ರದ್ದುಪಡಿಸಿದೆ.

ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರು ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಈ ಬಗ್ಗೆ ಸೂಕ್ತವಾದ ದಾಖಲೆಗಳೊಂದಿಗೆ ವರದಿ ಸಿದ್ಧಪಡಿಸಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕ್ರೀಡಾ ಇಲಾಖೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇದಕ್ಕೆ ಸಂಬಂಧಿಸಿದಂತೆ ಪೂರಕವಾದ ಸೂಕ್ತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ಇವರಿಗೆ ಸಲ್ಲಿಸಿದ್ದರು.

ಈ ಬಗ್ಗೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗಳ ತಂಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ಇದರ ರಾಷ್ಟ್ರಾಧ್ಯಕ್ಷರಾದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ನ್ಯೂನ್ಯತೆಗಳ ಬಗ್ಗೆ ಮನವರಿಕೆ ಮಾಡಿದ್ದರು. ಬಳಿಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ಇದರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪೂರಕವಾದ ದಾಖಲೆಗಳನ್ನು ಒದಗಿಸಿದ್ದರು. ಅದರಂತೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾ ಇವರು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಕರ್ನಾಟಕ ರಾಜ್ಯದ ಅಫೀಲಿಯೇಶನ್ ರದ್ದುಪಡಿಸಿದೆ.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಪ್ ಇಂಡಿಯಾದ ಬೈಲಾವನ್ನು ಪಾಲಿಸುತ್ತಿಲಿಲ್ಲ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗ ಸೂಚಿಗಳ ಪ್ರಕಾರ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಗೆ ಅಫೀಲಿಯೇಟೆಡ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯರು ಮಾತ್ರ ಮತ ಚಲಾಯಿಸುವ ಅಧಿಕಾರ ಇರುತ್ತದೆ. ಆದರೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ತನ್ನ ಬೈಲಾವನ್ನು 10 ಅಜೀವ ಸದಸ್ಯರು, 9 ಸದಸ್ಯರು ಜಿಲ್ಲಾ ಅಸೋಸಿಯೇಷನ್ ನಿಂದ ಆಯ್ಕೆ ಮಾಡುವಂತೆ ಹಾಗೂ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ಸ್ ಆಗಿ ತಿದ್ದುಪಡಿ ಮಾಡಿ ಆಜೀವ ಸದಸ್ಯತ್ವ ಮಾಡಿದ್ದರು. ಅಸೋಸಿಯೇಷನ್ ಸದಸ್ಯರನ್ನು ಮತದಾನ ಮಾಡುವ ಉದ್ದೇಶದಿಂದ ಮತದಾರರನ್ನಾಗಿ ನೇಮಕ ಮಾಡಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯ ಮಾರ್ಗ ಸೂಚಿಗಳ ವಿರುದ್ಧವಾಗಿ ತಿದ್ದುಪಡಿ ಮಾಡಿದ್ದರು.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೇಂದ್ರ ಸರ್ಕಾರದ ಕ್ರೀಡಾಭಿವೃದ್ದಿ ಸಂಹಿತೆಯ ಮಾರ್ಗಸೂಚಿಗಳಿಗೆ ವಿರುದ್ದವಾಗಿ ಬೈಲಾವನ್ನು ಪರಿಷ್ಕರಣೆ ಮಾಡಿ ಜಿಲ್ಲಾ ಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಪ್ರೋತ್ಸಾಹ ನೀಡದೆ ಇರುವುದರಿಂದ ಜಿಲ್ಲೆಗಳ ಪ್ರಾತಿನಿಧ್ಯತೆಗೆ ಕೊರತೆ ಉಂಟಾಗಿದ್ದಲ್ಲದೆ ಬ್ಯಾಡ್ಮಿಂಟನ್ ಕ್ರೀಡೆಗೆ ಹಿನ್ನಡೆಯಾಗಿತ್ತು. ಗ್ರಾಮೀಣ ಭಾಗದ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಬ್ಯಾಡ್ಮಿಂಟನ್ ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ಉಪಯೋಗವಾಗುತ್ತಿರಲಿಲ್ಲ.

ಬ್ಯಾಡ್ಮಿಂಟನ್ ಉದ್ದೇಶಕ್ಕೆ ರಾಜ್ಯ ಸರ್ಕಾರದಿಂದ ಲೀಸ್ ಆಧಾರದ ಮೇಲೆ ಬೆಂಗಳೂರಿನ ಆಯಕಟ್ಟಿನ ಜಾಗದಲ್ಲಿ ಭೂಮಿಯನ್ನು ಕೇವಲ 100 ರೂಪಾಯಿಗಳಿಗೆ ಗುತ್ತಿಗೆ ದರವನ್ನು ನಿಗಧಿ ಪಡಿಸಿ 99 ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಮೂಲ ನಿಯಮಗಳನ್ನು ಉಲ್ಲಂಘಿಸಿ ಈ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಡೆಯುತ್ತಿದೆ. ಇದನ್ನು ತಪ್ಪಿಸಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗಳಿಗೆ ಬ್ಯಾಡ್ಮಿಂಟನ್ ಕ್ರೀಡೆಯನ್ನು ಉತ್ತೇಜಿಸಲು ಅನುಕೂಲವಾಗುವಂತೆ ಮಾಡಬೇಕು. ಹಾಗೂ ಎಲ್ಲಾ ಜಿಲ್ಲೆಗಳ ಪ್ರತಿಭಾನ್ವಿತ ಕ್ರೀಡಾ ಪಟುಗಳಿಗೆ ವಿಫುಲ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರು, ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರ ನೇತೃತ್ವದಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗಳು ನಡೆಸಿದ ಸಂಘಟಿತ ಹೋರಾಟಕ್ಕೆ ಜಯ ದೊರೆತಿದೆ.

ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಇದರ ಬೈಲಾ ಪ್ರಕಾರ ರಚಿಸಲಾಗಿದೆ. ಇದಕ್ಕೆ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸದಸ್ಯರ ಪ್ರಾತಿನಿಧ್ಯವಿದ್ದು ರಾಜ್ಯದ ಶೇಕಡ 50ರಷ್ಟು ಅಫೀಲಿಯೇಶನ್ ಇದೆ. ಆದ್ದರಿಂದ ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಇವರಿಗೆ ಬ್ಯಾಡ್ಮಿಂಟನ್ ಆಫ್ ಇಂಡಿಯಾ ಇವರು ಕರ್ನಾಟಕ ರಾಜ್ಯದ ಅಫೀಲಿಯೇಶನ್ ನೀಡಬೇಕು ಎಂದು ಕರ್ನಾಟಕ ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಬೈಲಾಗಳಿಗೆ ವಿರುದ್ಧವಾಗಿದ್ದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಅಫೀಲಿಯೇಶನ್ ರದ್ದು ಪಡಿಸುವಲ್ಲಿ ಸಹಕರಿಸಿದ ರಾಜ್ಯದ ಮುಖ್ಯಮಂತ್ರಿಯವರಾದ  ಬಸವರಾಜ್ ಬೊಮ್ಮಾಯಿ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಇದರ ರಾಷ್ಟ್ರಾಧ್ಯಕ್ಷರು ಅಸ್ಸಾಂ ಮುಖ್ಯಮಂತ್ರಿ  ಹಿಮಂತ ಬಿಸ್ವಾ ಶರ್ಮಾ, ಯುವಜನ ಸೇವೆಗಳು ಮತ್ತು ಕ್ರೀಡಾ ಸಚಿವರಾದ ನಾರಾಯಣಗೌಡ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.


Spread the love