ಕರ್ನಾಟಕ ಸಂಘ ಶಾರ್ಜಾದ “ಮಯೂರ ಕಪ್” ಥ್ರೋಬಾಲ್ ಮತ್ತು ವಾಲಿಬಾಲ್ ರೋಚಕ ಪಂದ್ಯಾಟಕ್ಕೆ ಕ್ಷಣಗಣನೆ 

Spread the love

ಕರ್ನಾಟಕ ಸಂಘ ಶಾರ್ಜಾದ “ಮಯೂರ ಕಪ್” ಥ್ರೋಬಾಲ್ ಮತ್ತು ವಾಲಿಬಾಲ್ ರೋಚಕ ಪಂದ್ಯಾಟಕ್ಕೆ ಕ್ಷಣಗಣನೆ 

ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಪ್ರತಿಷ್ಠಿತ “ಮಯೂರ ಕಪ್” ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟಗಳು ಇದೆ ತಿಂಗಳು ಮಾರ್ಚ್ 27ನೇ ತಾರೀಕು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್ ಅಕಾಡೆಮಿ ಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪೂರ್ವಭಾವಿ ತಯಾರಿ ಹಾಗೂ ಪತ್ರಿಕಾ ಗೋಷ್ಠಿ ಮಾರ್ಚ್ 24ನೇ ತಾರೀಕು ಸಂಜೆ ದುಬಾಯಿಯ ಫಾರ್ಚೂನ್ ಅಟ್ರಿಯಂ ಹೋಟೆಲ್ ಸಭಾಂಗಣದಲ್ಲಿ ನೆರವೇರಿತು.

ಕರ್ನಾಟಕ ಸಂಘ ಶಾರ್ಜಾ ದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಶೆಟ್ಟಿಯವರು ಸ್ವಾಗತ ಹಾಗೂ ಅಧ್ಯಕ್ಷರಾದ ಶ್ರೀ ಎಂ.ಇ. ಮೂಳೂರ್ ರವರು ಪಂದ್ಯಾಟದ ಎಲ್ಲಾ ಆಟಗಾರರಿಗೆ ಶುಭವನ್ನು ಹಾರೈಸಿ, ಪಂದ್ಯಾಟದ ಯಶಸ್ಸಿಗೆ ಸರ್ವರ ಪೂರ್ಣ ಬೆಂಬಲವನ್ನು ಕೋರಿದರು. ಕರ್ನಾಟಕ ಸಂಘದ ಸಲಹೆಗಾರರಾದ ಶ್ರೀ ಜೋಸೆಪ್ ಮಥಾಯಿಸ್ ರವರು ಶುಭವನ್ನು ಹಾರೈಸಿದರು. ಶ್ರೀ ನೋವೆಲ್ ಡಿ ಅಲ್ಮೆಡಾ ರವರು ಪಂದ್ಯಾಟದ ಪೂರ್ಣ ವಿವರಗಳನ್ನು ನೀಡಿದರು. ಕ್ರೀಡಾ ಕಾರ್ಯದರ್ಶಿ ಶ್ರೀ ಜೀವನ್ ಕುಕ್ಯಾನ್ ರವರು ವೇದಿಕೆಯಲ್ಲಿ ಉಪಸ್ಥಿಥರಿದ್ದರು. ಪೂರ್ವ ಅಧ್ಯಕ್ಷರು ಹಾಗೂ ಸಲಹೆಗಾರರು ಶ್ರೀಯುತರುಗಳಾದ ಸತೀಶ್ ಪೂಜಾರಿ , ಸುಗಂಧರಾಜ್ ಬೇಕಲ್ ಮತ್ತು ಅನಂದ್ ಬೈಲೂರ್ ಭಾಗವಹಿಸಿದ್ದರು.

ಶ್ರೀ ಆನಂದ್ ಮತ್ತು ಶ್ರೀ ಶಿವಾ ಶೆಟ್ಟಿಯವರು ತಂಡಗಳ ಲಾಟ್ಸ್ ತೆಗೆಯುವ ಪ್ರಕ್ರಿಯೇಯನ್ನು ನಡೆಸಿಕೊಟ್ಟರು. ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈ ಕಾರ್ಯಕ್ರಮ ನಿರೂಪಿಸಿದ್ದರು. ಶ್ರೀ ವಿಘ್ನೇಶ್ ರವರು ವಂದನಾರ್ಪಣೆ ಮಾಡಿದರು ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು

ವಿಶ್ವ ರಂಗ ದಿನೋತ್ಸವ ಆಚರಣೆ
ಮಾರ್ಚ್ 27ನೇ ತಾರೀಕಿನಂದು ವಿಶ್ವ ರಂಗ ದಿನಾಚರಣೆಯನ್ನು ಆಚರಿಸ್ಲಾಗುತ್ತಿದೆ. ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ರಂಗ ದಿನೋತ್ಸವ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಪ್ರಸಿದ್ದ ರಂಗಭೂಮಿ ಕಲಾವಿದರು, ಚಂದನವನದ ಹಾಸ್ಯ ನಟ ಹಾಗೂ ಚಲನಚಿತ್ರ, ರಂಗಭೂಮಿ ನಿರ್ದೇಶಕರಾದ ಮೂಗು ಸುರೇಶ ರವರು ಹಾಗೂ ಚಿತ್ರದುರ್ಗದ ಶ್ರೀಜಗದ್ಗುರು ಮುರುಘರಾಜೇಂದ್ರ ಮಹಾ ಸಂಸ್ಥಾನದ ಪೀಠಾಧಿಪತಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಆಗಮಿಸಲಿದ್ದಾರೆ.

ಯು.ಎ.ಇ. ಮಟ್ಟದ ಮಹಿಳಾ ಹಾಗೂ ಪುರುಷರ ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ 20 ತಂಡಗಳು ಕರ್ನಾಟಕ ಸಂಘ ಶಾರ್ಜಾದ ಪ್ರತಿಷ್ಠಿತ ಮಯೂರ ಕಪ್ ನ್ನು ತನ್ನದಾಗಿಸಿಕೊಳ್ಳಲು ಪೈಪೋಟಿ ನಡೆಸಲಿದೆ. ಯು.ಎ.ಇ.ಯ ವಿವಿಧ ಭಾಗಗಳಿಂದ ತಂಡಗಳು ಹಾಗೂ ಹೆಚ್ಚಿನ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಯು.ಎ.ಇ. ಸರ್ಕಾರದ ಆರೋಗ್ಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಶಿಸ್ತುಬದ್ಧವಾಗಿ ಪಂದ್ಯಾಟಗಳನ್ನು ಆಯೋಜಿಸಲಾಗಿದ್ದು ಕ್ರೀಡಾ ಸಮಿತಿಯ ಸರ್ವಸದಸ್ಯರು ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

ಯು.ಎ.ಇ.. ಯಲ್ಲಿ ಕಳೆದ ಎರಡು ಮೂರು ದಶಕಗಳಿಂದ ವಿವಿಧ ಸಂಘ ಸಂಸ್ಥೆಗಳ ಸಾಲಿನಲ್ಲಿ ಕರ್ನಾಟಕ ಸಂಘ ಶಾರ್ಜಾ ಹಲವು ಬಾರಿ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿರುವುದು ಹೆಗ್ಗಳಿಕೆಯಾಗಿದೆ.

ಈ ವರ್ಷದ ಪ್ರಥಮ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟಗಳ ಎಲ್ಲ ತಂಡದವರಿಗೆ ಹಾಗೂ ವೀಕ್ಷಕರಿಗೆ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಶೀ ಎಂ. ಇ. ಮೂಳೂರ್ ರವರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಮಾಧ್ಯಗಳ ಮೂಲಕ ಆತ್ಮೀಯ ಆಹ್ವಾನವನ್ನು ನೀಡಿದ್ದಾರೆ.

ಬಿ. ಕೆ. ಗಣೇಶ್ ರೈ – ಯು.ಎ.ಇ.


Spread the love