
ಕಲಾವಿದರ ಸಂಕಷ್ಟಕ್ಕೆ ಒಕ್ಕೂಟ ಸ್ಪಂದಿಸಬೇಕು: ಬನ್ನೂರು ಕೆ.ರಾಜು
ಮೈಸೂರು : ಕಲಾವಿದರು, ಸಹ ಕಲಾವಿದರು,ನಿರ್ದೇಶಕರು, ಸಹ ನಿರ್ದೇಶಕರು,ಗಾಯಕರು ಸಹ ಗಾಯಕರು, ತಂತ್ರಜ್ಞರು ಒಳಗೊಂಡಂತೆ ಒಟ್ಟಾರೆ ಸಿನಿಮಾ ಮಂದಿಯ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಮೈಸೂರು ಚಲನಚಿತ್ರ ಒಕ್ಕೂಟ ಸ್ಪಂದಿಸುವಂತಾಗಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.
ನಗರದ ನಜರಬಾದ್ ನ ಮಧ್ವೇಶ್ವರ ಕಾಂಪ್ಲೆಕ್ಸ್ ನಲ್ಲಿ ಅಯೋಜಿಸಿದ್ದ ನೂತನವಾಗಿ ಪ್ರಾರಂಭಿಸಿರುವ ಮೈಸೂರು ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಣರ ಒಕ್ಕೂಟವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದ ಅವರು, ಕನ್ನಡ ಚಿತ್ರೋದ್ಯಮ ವನ್ನು ಆಶ್ರಯಿಸಿ ಕೊಂಡಿರುವವರು ಬಹಳ ಸಂಕಷ್ಟದ ಪರಿಸ್ಥಿತಿಯ ಲ್ಲಿರುವುದರಿಂದ ಅವರಿಗೆ ನೆರವಿನ ಹಸ್ತ ನೀಡಬೇಕಾಗಿದೆಯೆಂದರು.
ಕೊರೊನಾ ಬಂದಿದ್ದ ಸಮಯದಲ್ಲಂತೂ ಕಲಾವಿದರು, ನಿರ್ದೇಶಕರು, ತಂತ್ರಜ್ಞರೆನ್ನದೆ ಅನೇಕ ಮಂದಿ ಕಷ್ಟ ನಷ್ಟಗಳನ್ನು ಅನುಭವಿಸುವುದರ ಜೊತೆಗೆ ಪ್ರಾಣವನ್ನೂ ಕಳೆದುಕೊಂಡರು. ಅಂತಹ ದುಸ್ಥಿತಿಯಲ್ಲೂ ಯಾವ ಸರ್ಕಾರಗಳೂ ಮುಂದೆ ಬಂದು ರಕ್ಷಣೆಗೆ ನಿಲ್ಲಲಿಲ್ಲ. ಹಾಗಾಗಿ ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕಾಗಿದೆ ಎಂಬುದನ್ನು ಅರಿತು ನೂತನವಾಗಿ ಆರಂಭವಾಗುತ್ತಿರುವ ಕಲಾವಿದರ ಈ ಒಕ್ಕೂಟವನ್ನು ಎಲ್ಲರೂ ಒಗ್ಗಟ್ಟಿನಿಂದ ಸದೃಢಗೊಳಿಸಿ, ಮುಂದಿನ ದಿನಗಳಲ್ಲಿ ಒಕ್ಕೂಟವೇ ಕಲಾವಿದರಿಗೆ ನೆರವಾಗುವಂತಹ ಕೆಲಸವನ್ನು ಮಾಡಬೇಕಾಗಿದೆ. ಇದು ಆಗಬೇಕೆಂದರೆ ಒಕ್ಕೂಟವು ಆರ್ಥಿಕವಾಗಿ ಬಲಗೊಳ್ಳಬೇಕು. ಜೊತೆಗೆ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಒಂದಾಗಿ ಒಕ್ಕೂಟವನ್ನು ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಒಕ್ಕೂಟವನ್ನು ನಿಸ್ವಾರ್ಥವಾಗಿ ನೀವು ಕಟ್ಟಿ ಅದನ್ನು ಸಾಕಿದರೆ ಭವಿಷ್ಯದಲ್ಲಿ ಇದೇ ಒಕ್ಕೂಟವು ನಿಮ್ಮನ್ನು ಸಾಕುತ್ತದೆ. ಕೊರೊನಾ ಎಲ್ಲರಿಗೂ ತಕ್ಕ ಪಾಠ ಕಲಿಸಿದ್ದು, ಇದರಿಂದ ಬಡವ ಬಲ್ಲಿದರೆನ್ನದೆ ಎಲ್ಲರೂ ಸಾಕಷ್ಟು ಕಷ್ಟ ಪಡುವಂತಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಗಳು ಯಾವುದೇ ರೀತಿಯ ಸೌಲಭ್ಯವನ್ನು ನೀಡಲಿಲ್ಲ. ಇದು ಎಲ್ಲರಿಗೂ ಒಂದು ಪಾಠವಾಗಿ ದ್ದು ಸಂಕಷ್ಟಕ್ಕೀಡಾದ ಕಲಾವಿದರು ಮತ್ತೊಮ್ಮೆ ಆ ಪರಿಸ್ಥಿತಿಗೆ ಬರಬಾರದು. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ವಿಫಲವಾಗಿದ್ದು ತಾವುಗಳು ಸರ್ಕಾರದ ನಿರೀಕ್ಷೆ ಇಟ್ಟುಕೊಳ್ಳದೆ ನಿಮ್ಮ ಒಕ್ಕೂಟದ ಕಲಾವಿದರ ಬದುಕಿನ ಭವಿಷ್ಯವನ್ನು ರೂಪಿಸಬೇಕಾಗಿದೆ. ಇದಕ್ಕೆ ಒಗ್ಗಟ್ಟು ಬಹಳ ಮುಖ್ಯ.ಇಂದು ಬಹಳಷ್ಟು ಸಿನಿಮಾ ರಂಗಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳು ಹುಟ್ಟುತ್ತವೆಯಾದರೂದರೂ ಒಗ್ಗಟ್ಟಿಲ್ಲದೆ ಒಡೆದು ಹೋಗುತ್ತಿವೆ. ಹಾಗಾಗಿ ಮೊದಲು ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಚಿತ್ರರಂಗದ ಮಾತೃ ಸಂಸ್ಥೆ ಯಂತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೇ ಒಗ್ಗಟ್ಟಿಲ್ಲದೆ ಹೊಡೆದು ಎರಡು ಓಳಾಗಿರುವುದನ್ನು ಕಂಡಿದ್ದೇವೆ.ಇದು ಪ್ರತಿಯೊಬ್ಬರಿಗೂ ಪಾಠ ವಾಗಬೇಕು. ಈ ನಿಟ್ಟಿನಲ್ಲಿ ಒಕ್ಕೂಟ ಯಾವಾಗಲೂ ಒಗ್ಗಟ್ಟಿನಿಂದ ಇರಬೇಕು . ಯಾರೂ ಕೂಡ ಪರಿಪೂರ್ಣ ರಲ್ಲ. ಸಣ್ಣ ಪುಟ್ಟ ತಪ್ಪುಗಳು ಆಗುತ್ತಿರುತ್ತವೆ. ಅದನ್ನು ನಿಭಾಯಿಸಿಕೊಂಡು ಸಂಘವನ್ನು ಒಗ್ಗೂಡಿಸಿ ಮುನ್ನೆಡಸಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ಕಚೇರಿಯನ್ನು ಉದ್ಘಾಟಿಸಿದ ನಗರದ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್ ಅವರು ಮಾತನಾಡಿ ಡಾ.ರಾಜಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್ ಅವರುಗಳಂತ ಸುಪ್ರಸಿದ್ಧ ಕಲಾವಿದರನ್ನು ನಾಡಿಗೆ ನೀಡಿದ ಹಿರಿಮೆ ಮೈಸೂರಿನದು. ಇಂತಹ ಮೈಸೂರಿನಲ್ಲಿ ರಾಜ್ಯಮಟ್ಟದಲ್ಲಿ ಆರಂಭವಾಗುತ್ತಿರುವ ಮೈಸೂರು ಚಲನಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟವು ಇಡೀ ನಾಡಿಗೆ ಮಾದರಿಯಾಗುವಂತೆ ಬೆಳೆಯಲೆಂದು ಶುಭ ಹಾರೈಸಿದರು.
ಕದಂಬ ರಂಗ ಕಲಾ ವೇದಿಕೆ ಅಧ್ಯಕ್ಷ ವಿದ್ಯಾಸಾಗರ ಕದಂಬ ಮಾತನಾಡಿ. ಯಾವುದೇ ಸಂಘಟನೆ ಬೆಳೆಯಬೇಕಾದರೆ ಅನುಭವಿ ಹಿರಿಯರ ಸಲಹೆಗಳನ್ನು ಕೇಳಿ ಅದರಂತೆ ನಡೆದರೆ ಸಂಘಗಳು ಮುನ್ನಡೆಯುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಕಲಾವಿದರಾಗುವ ಆಸೆ ಇರುತ್ತದೆ. ಎಲ್ಲ ಭಾಷೆಯ ಸಿನಿಮಾಗಳನ್ನು ಮೈಸೂರಿನಲ್ಲಿ ಚಿತ್ರೀಕರಣ ಮಾಡುವಷ್ಟು ನಮ್ಮ ಮೈಸೂರು ಹೆಸರುವಾಸಿಯಾಗಿದೆ. ಇವತ್ತಿನ ದಿನದಲ್ಲಿ ಜಾನಪದ ಹಾಗೂ ಪೌರಾಣಿಕ ಚಿತ್ರಗಳು ಕಡಿಮೆ ಆಗುತ್ತಿದೆ. ನಮ್ಮ ಜನರು ಪೌರಾಣಿಕ ವನ್ನು ಮರೆತಂತಾಗಿದೆ ಎಂದ ಅವರು ಯಾವುದೇ ಸಮಸ್ಯೆ ಬಂದರೂ ಕೂಡ ಕುಗ್ಗದೇ ಒಕ್ಕೂಟವನ್ನು ಒಗ್ಗಟ್ಟಿನಿಂದ ಮುನ್ನಡೆಸಬೇಕು ಎಂದರು.
ಮೈಸೂರು ಚಲನಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಗೌರವಾಧ್ಯಕ್ಷ ಎಂ.ಕೃಷ್ಣಪ್ಪ,ಅಧ್ಯಕ್ಷ ವಿ.ಲೀಲಾ ಮನೋಹರ್, ಉಪಾಧ್ಯಕ್ಷ ಶ್ರೀನಿವಾಸ ಜೆಟ್ಟಿ, ಕಾರ್ಯದರ್ಶಿ ವಿ.ಸುರೇಂದ್ರ,ಸಹಕಾರ್ಯರ್ಶಿ ಕೆಂಪಣ್ಣ, ಖಜಾಂಚಿ ಜಾದೂಗಾರ್ ಗುರುಸ್ವಾಮಿ, ಉದ್ಯಮಿ ಮಮತಾ ಶೆಟ್ಟಿ, ಚಿತ್ರ ನಿರ್ದೇಶಕ ನಾಚಪ್ಪ, ಕಲಾ ನಿರ್ದೇಶಕ ಬೋರೇಗೌಡ, ಹಿರಿಯ ಪೋಷಕ ಕಲಾವಿದ ಭಾಸ್ಕರ್ ಹಾಗೂ ಸಹ ಕಲಾವಿದರಾದ ಕಿರಣ್, ಸುರೇಶ್ , ಕುಮಾರ್, ಯಶೋದಮ್ಮ, ರಾಧಾ, ಭಾರತಿ, ಮಮತಾ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.