ಕಲ್ಮಾಡಿ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ – ಶಾಸಕ ರಘುಪತಿ ಭಟ್ ಚಾಲನೆ

Spread the love

ಕಲ್ಮಾಡಿ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ – ಶಾಸಕ ರಘುಪತಿ ಭಟ್ ಚಾಲನೆ

ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಚರ್ಚಿನ ಸುವರ್ಣ ಮಹೋತ್ಸವದ ಪ್ರಯುಕ್ತ ಪವಾಡ ಮಾತೆಯ ಪ್ರತಿಮೆಯ ಮೆರವಣಿಗೆ ಭಾನುವಾರ ನಡೆಯಿತು.

ಉಡುಪಿ ಶಾಸಕ ರಘುಪತಿ ಭಟ್ ಮತ್ತು ಕಲ್ಮಾಡಿ ವಾರ್ಡ್ ನ ನಗರ ಸಭಾ ಸದಸ್ಯರಾದ ಸುಂದರ ಕಲ್ಮಾಡಿ ಅವರು ಪವಾಡ ಮಾತೆಯ ಪ್ರತಿಮೆಯ ಮೆರವಣಿಗೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ರಘುಪತಿ ಭಟ್ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಕ್ಷೇತ್ರವನ್ನು ಪುಣ್ಯಕ್ಷೇತ್ರವಾಗಿ ಘೋಷಣೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇದರಿಂದಾಗಿ ಉಡುಪಿಗೆ ಇನ್ನಷ್ಟು ಪ್ರವಾಸಿಗರು ಆಗಮಿಸಲು ಇದೊಂದು ಸಹಾಯಕವಾಗಲಿದೆ. ಕಲ್ಮಾಡಿ ಕ್ಷೇತ್ರ ಕೇವಲ ಕ್ರೈಸ್ತರಿಗೆ ಸೀಮಿತವಾಗಿಲ್ಲ ನನ್ನ ಬಾಲ್ಯದ ಕಾಲೇಜು ದಿನಗಳಲ್ಲಿ ಹೊಸ ವರ್ಷದ ರಾತ್ರಿ ಕಲ್ಮಾಡಿ ಚರ್ಚಿಗೆ ಭೇಟಿ ನೀಡಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥನೆ ಮಾಡಿದ ನೆನಪುಗಳು ಇನ್ನೂ ಹಸಿರಾಗಿವೆ.

ಕ್ರೈಸ್ತರಷ್ಟೇ ಅಲ್ಲದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಕ್ತರನ್ನು ಹೊಂದಿರುವ ಕ್ಷೇತ್ರ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಆಗಿರುವುದು ನಾವು ಹತ್ತಿರದಿಂದ ನೋಡಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯದ 75 ನೇ ಸಂಭ್ರಮದೊಂದಿಗೆ ಚರ್ಚಿಗೆ 50 ವರ್ಷದ ಸಂಭ್ರಮ ನಡೆಯುತ್ತಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ. ಪುಣ್ಯಕ್ಷೇತ್ರವಾಗಿರುವುದರಿಂದ ದೇಶ ವಿದೇಶದ ಭಕ್ತರು ಇಲ್ಲಿಗೆ ಆಗಮಿಸುತ್ತಿರುವುದರಿಂದ ಮಲ್ಪೆ ಮಣಿಪಾಲ ರಸ್ತೆ ಚತುಷ್ಪತವಾಗಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಒಂದು ತಿಂಗಳ ಒಳಗೆ ಕಾಮಗಾರಿ ಆರಂಭಗೊಳ್ಳಲಿದೆ. ಈ ಮೂಲಕ ಮಲ್ಪೆಯೊಂದಿಗೆ ಕಲ್ಮಾಡಿಗೆ ಕೂಡ ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುವುದರೊಂದಿಗೆ ಭಕ್ತರ ಕೋರಿಕೆಗಳು ಈಡೇರಿಸುವ ತಾಣವಾಗಲಿ ಎಂದು ಶುಭ ಹಾರೈಸಿದರು.
ಮೆರವಣಿಗೆ ಆದಿ ಉಡುಪಿ ಜಂಕ್ಷನ್ ನಿಂದ ಆರಂಭಗೊಂಡು ನೂರಾರು ಮಂದಿ ಭಕ್ತರು ಕಾಲ್ನಡಿಗೆಯ ಮೂಲಕ ಕಲ್ಮಾಡಿ ಚರ್ಚಿನಲ್ಲಿ ಸಮಾಪನಗೊಂಡಿತು.

ಬಳಿಕ ಒಂಬತ್ತನೇ ದಿನದ ನೊವೆನ ಪ್ರಾರ್ಥನೆ ಹಾಗೂ ಬಲಿಪೂಜೆಯನ್ನು ಮಂಗಳೂರು ಜೆಪ್ಪು ಸಂತ ಜೊಸೇಪ್ ಗುರು ಮಠ (ಸೆಮಿನರಿ)ದ ರೆಕ್ಟರ್ ವಂ. ರೊನಾಲ್ಡ್ ಸೆರಾವೊ ನೆರವೇರಿಸಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಂ ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರು ವಂ. ರೋಯ್ ಲೋಬೊ, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ, ಚರ್ಚಿನ ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಸಂದೀಪ್ ಅಂದ್ರಾದೆ 20 ಆಯೋಗಗಳ ಸಂಯೋಜಕರಾದ ಐಡಾ ಡಿಸೋಜಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಅಗೋಸ್ತ್ 15 ರಂದು ಘೋಷಣೆ ಮಾಡಲಾಗುವುದು ಮತ್ತು ಚರ್ಚಿನ ಸುವರ್ಣ ಮಹೋತ್ಸವ ವರ್ಷದ ಆಚರಣೆಯನ್ನು ಆಯೋಜಿಸಲಾಗಿದ್ದು, ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮಾಧ್ಯಕ್ಷ ವಂ. ಡಾ. ಪೀಟರ್ ಪೌಲ್ ಸಲ್ಡಾನಾ, ಮಂಗಳೂರಿನ ನಿವೃತ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ, ಬಳ್ಳಾರಿ ಧರ್ಮಾಧ್ಯಕ್ಷ ವಂ. ಡಾ. ಹೆನ್ರಿ ಡಿಸೋಜಾ, ಬೆಳ್ತಂಗಡಿ ಧರ್ಮಾಧ್ಯಕ್ಷ ವಂ. ಡಾ. ಲಾರೆನ್ಸ್ ಮುಕ್ಕುಯಿ, ಪುತ್ತೂರಿನ ಧರ್ಮಾಧ್ಯಕ್ಷ ವಂ. ಡಾ. ಗೀವರ್ಗಿಸ್ ಮಕಾರಿಯೋಸ್ ಕಲಾಯಿಲ್ ಭಾಗವಹಿಸಲಿದ್ದಾರೆ.
ಸಭಾಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಉಡುಪಿ ಧರ್ಮಪ್ರಾಂತ್ಯದ ಚಾನ್ಸ್ ಲರ್ ವಂ. ಸ್ಟ್ಯಾನಿ ಬಿ ಲೋಬೊ, ಉಡುಪಿ ವಲಯ ಧರ್ಮಗುರು ವಂ ಚಾರ್ಲ್ಸ್ ಮಿನೇಜಸ್ ಉಪಸ್ಥಿತರಿರುವರು.

Click Here To View More Photos


Spread the love