ಕಲ್ಲಹಳ್ಳಿ ಭೂವರಹನಾಥಸ್ವಾಮಿ ದೇಗುಲಕ್ಕೆ ನಟ ದೊಡ್ಡಣ್ಣ ಭೇಟಿ

Spread the love

ಕಲ್ಲಹಳ್ಳಿ ಭೂವರಹನಾಥಸ್ವಾಮಿ ದೇಗುಲಕ್ಕೆ ನಟ ದೊಡ್ಡಣ್ಣ ಭೇಟಿ

ಕೆ.ಆರ್.ಪೇಟೆ: ಹೇಮಾವತಿ ನದಿಯ ದಂಡೆಯ ಮೇಲೆ ನೆಲೆಸಿರುವ ತಾಲೂಕಿನ ಕಲ್ಲಹಳ್ಳಿಯ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀ ಸಮೇತನಾಗಿ ಭೂವರಹನಾಥಸ್ವಾಮಿ ದೇಗುಲಕ್ಕೆ ನಟ ದೊಡ್ಡಣ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಇದೇ ವೇಳೆ 17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ ಶ್ರೀಲಕ್ಷ್ಮೀಸಮೇತನಾಗಿ ನೆಲೆಸಿರುವ ಭೂವರಹನಾಥಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನಹಾಲು, ಪವಿತ್ರ ಗಂಗಾಜಲ, ಹಸುವಿನ ತುಪ್ಪ, ಜೇನುತುಪ್ಪ, ಶ್ರೀಗಂಧ, ಅರಿಶಿನದಲ್ಲಿ ವಿಶೇಷವಾಗಿ ಅಭಿಷೇಕಮಾಡಿ, 58 ಬಗೆಯ ಅಪರೂಪದ ವಿವಿಧ ಹೂವುಗಳಾದ ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು, ಮರುಗ, ಸೂಜಿಮಲ್ಲಿಗೆ, ಜಾಜಿ, ಮಲ್ಲಿಗೆ, ಕನಕಾಂಬರ, ಸ್ಪಟಿಕ, ಪಾರಿಜಾತ, 9 ವಿವಿಧ ಬಣ್ಣದ ಗುಲಾಬಿ ಹೂವುಗಳು, ಜವನ, ತಾವರೆ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ಉಘೇ..ಗೋವಿಂದ, ಉಘೇ..ವೆಂಕಟರಮಣ, ಜೈಭೂವರಾಹ, ಗೋವಿಂದ-ಗೋವಿಂದ ಎಂಬ ಜಯಘೊಷಗಳು ಮುಗಿಲು ಮುಟ್ಟಿದ್ದವು.

ಇದೇ ವೇಳೆ ಕೋವಿಡ್ 2ನೇ ಅಲೆಯ ತೀವ್ರತೆಯು ಕಡಿಮೆಯಾಗುತ್ತಿದ್ದು ಮಹಾಮಾರಿಯ ಆರ್ಭಟವು ದೂರಾಗಲಿ ಎಂದು ವಿಶೇಷವಾಗಿ ಭೂವರಹನಾಥ ಸ್ವಾಮಿಯನ್ನು ಪ್ರಾರ್ಥಿಸಲಾಯಿತು.

ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ ಭೂವರಹನಾಥ ಕ್ಷೇತ್ರವು ರಾಜ್ಯದಲ್ಲಿಯೇ ಅತ್ಯಂತ ಸುಪ್ರಸಿದ್ಧವಾದ ಯಾತ್ರಾಸ್ಥಳವಾಗಿ ಎರಡನೇ ಭೂವೈಕುಂಠವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೇಮಾವತಿ ನದಿಯ ದಂಡೆಯಲ್ಲಿರುವ ಈ ದೇವಾಲಯದಲ್ಲಿರುವ ಭೂವರಹನಾಥಸ್ವಾಮಿಯನ್ನು ಕಣ್ತುಂಬಿಕೊಳ್ಳುವುದೇ ಮಹದಾನಂದವಾಗಿದೆ. ಇಡೀ ದೇಶದಲ್ಲಿಯೇ ಇಲ್ಲಿರುವ ಭವ್ಯವಾದ ಬೃಹತ್ ಎತ್ತರದ ಸ್ವಾಮಿಯನ್ನು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ ಎಂದರು.

ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಹಯಗ್ರೀವವಾಗೀಶತೀರ್ಥಶ್ರೀಗಳು ರೇವತಿನಕ್ಷತ್ರದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.

ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಗಂಜಿಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷ ಅಶ್ವಿನಿಕೃಷ್ಣ, ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾಬೋರೇಗೌಡ, ಉದ್ಯಮಿ ಬೂಕಹಳ್ಳಿ ಮಂಜು, ರಾಜ್ಯ ಜೆಡಿಎಸ್ ಮುಖಂಡ ಶ್ರೀರಂಗಪಟ್ಟಣ ಸಂತೋಷ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂಚಿ. ಸಣ್ಣಸ್ವಾಮಿಗೌಡ ಇನ್ನಿತರರು ಇದ್ದರು.


Spread the love